ಆಕಾಶದ ನೀಲಿಯಲ್ಲಿ
ಚಂದ್ರತಾರೆ ತೊಟ್ಟಿಲಲ್ಲಿ
ಬೆಳಕನ್ನಿತ್ತು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೇ
ಸ್ತ್ರೀ ಅಂದರೆ ಅಷ್ಟೇ ಸಾಕೇ..!
ಹೆಣ್ಣು ವಿಶಿಷ್ಟ ಶಕ್ತಿಗಳ ಸಂಗಮ, ಮಮತಾಮಯಿ, ವಾತ್ಸಲ್ಯ ಅಕ್ಕರೆಗಳುಳ್ಳ ಕ್ಷಮಯಾಧರಿತ್ರಿ.ಆಕೆ ಒಂದು ಶಕ್ತಿಯು ಹೌದು, ಪ್ರೀತಿಯು ಹೌದು ಜೊತೆಗೆ ಸಮಸ್ತ ಲೋಕದ ಆರೋಗ್ಯ ಧಾತೆಯು ಹೌದು..!
ಅಂತಹುದೇ ಆರೋಗ್ಯ ಧಾತೆಯೊಬ್ಬರ ಕಿರು ಪರಿಚಯ ನಿಮ್ಮ ಮುಂದಿಡುವ ಚಿಕ್ಕ ಪ್ರಯತ್ನ ನನ್ನದು..!
ಒಂದು ಕಾಲವಿತ್ತು ,ನರ್ಸಿಂಗ್ ಅಂದ್ರೆ ಏನೋ ಅಸಡ್ಡೆ, ಯಾವ ಹೆತ್ತವರು ನನ್ನ ಮಗಳು ನರ್ಸ್ ಆಗ್ಬೇಕಂತ ಬಯಸುತ್ತಿರಲಿಲ್ಲ.. ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ನರ್ಸ್ ಗಳನ್ನು ಮದುವೆ ಯಾಗಲೂ ಯಾರೂ ಮುಂದೆ ಬರುತ್ತಿರಲಿಲ್ಲ..ಇಂತಹ ಕೂಪಮಂಡೂಕ ಸಂಸ್ಕೃತಿಯ ನಡುವೆ ಸಮಾಜಕ್ಕೆ ಸವಾಲೆಂಬಂತೆ ನರ್ಸಿಂಗ್ ಕೋರ್ಸನ್ನು ಆಯ್ದುಕೊಂಡು ತನ್ಮೂಲಕ ವೃತ್ತಿಜೀವನದಲ್ಲಿ ಯಶಸ್ಸನ್ನು ಕಂಡವರು ದಿಟ್ಟ ಮಹಿಳೆ *ರತ್ನಾ ಡಿ ಕುಲಾಲ್*
ಮಂಜೇಶ್ವರ ಕೊಡ್ಲಾಮೋಗೆರು ಮಹಾಲಿಂಗ ಮೂಲ್ಯ ಮತ್ತು ಗಿರಿಜಾ ಮೂಲ್ಯರ ಸುಪುತ್ರಿಯಾಗಿ ಧರೆಗುರುಳಿದವರು ಇವರು. ಕೊಡ್ಲಮೋಗೆರು ವಾಣಿ ವಿಜಯ ವಿದ್ಯಾಸಂಸ್ಥೆಯಲ್ಲಿ ಪ್ರಾರಂಭಿಕ ವಿದ್ಯಾಭ್ಯಾಸ ಮುಗಿಸಿ ಮಂಗಳೂರಿನ ಪ್ರತಿಷ್ಠಿತ ಇನ್ಸ್ಟಿಟ್ಯೂಟ್ ನಲ್ಲಿ ನರ್ಸಿಂಗ್ ತರಬೇತಿಯನ್ನು ಪೂರೈಸಿ ಕರಾವಳಿಯ ಪ್ರಸಿದ್ಧ ಆಸ್ಪತ್ರೆ ಗಳಲ್ಲಿ ಸುಮಾರು ಹತ್ತು ವರ್ಷ ವೈದ್ಯರ ಜೊತೆಗೂಡಿ ಆರೋಗ್ಯ ಸೇವೆಯಲ್ಲಿ ತುಂಬಾ ನಿಷ್ಠೆಯಿಂದ ತಮ್ಮನ್ನು ತಾವು ತೊಡಗಿಸಿ ಕೊಂಡವರು.
ತದ ನಂತರ ಮುಂಬೈಯ ಶ್ರೇಷ್ಠ ಸಂಘಟಕ ಹಾಗೂ ಸಮಾಜ ಸೇವಕರಾದ ಪ್ರಸಿದ್ಧ ಪತ್ರಕರ್ತ *ದಿನೇಶ್ ಕುಲಾಲ್* ರವರನ್ನು ವಿವಾಹವಾಗಿ, ಸಾವಿರಾರು ಕನಸುಗಳೊಂದಿಗೆ ಈ ಮುಂಬೈ ಎಂಬ ಮಹಾನಗರಿಗೆ ಬಂದಿಳಿದರು. ಮಿತ ಭಾಷಿ,ಯಾವಾಗಲೂ ಸ್ಮಿತವದನೆ. ಹಾಲು ಜೇನು ಬೆರೆತಂತಹ ಸುಮಧುರವಾದ ಸುಖೀ ದಾಂಪತ್ಯ ಜೀವನ ಇವರದ್ದು. ಬಾಳಿಗೆ ಹೊಸತನದ ಬೆಳಕೆಂಬಂತೆ "ಲಾಸ್ಯ" ಎಂಬ ಹೆಣ್ಣು ಮಗಳ ಜನನ ವಾಯಿತು. ಮಗಳು ಬೆಳೆಯುತ್ತಿದ್ದಂತೆ ಮುಂಬೈ ಮಹಾನಗರದಲ್ಲಿ ತನ್ನ ವೃತ್ತಿ ಜೀವನದ ಎರಡನೇ ಇನ್ನಿಂಗ್ಸನ್ನು ಆರಂಭಿಸಿದರು. ಅನೇಕ ಆಸ್ಪತ್ರೆಗಳಲ್ಲಿ ರೋಗಿಗಳ ಪಾಲಿನ ಪ್ರೀತಿಯ ಅಕ್ಕನಾಗಿ ಮಮತೆಯ ದಾದಿಯಾಗಿ, ವಾತ್ಸಲ್ಯ ತೋರಿದ ಅಮ್ಮನಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದರು. ಪ್ರಸ್ತುತ ನಗರದ ಹೆಸರಾಂತ "ತುಂಗಾ" ಹಾಸ್ಪಿಟಲ್ನಲ್ಲಿ ಡಯಾಲಿಸಿಸ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. *ಮುಂಬೈ ಎಂಬ ಮಹಾನಗರಿ ಕೂಡಾ ಕೊರೊನಾದಿಂದ ತತ್ತರಿಸಿ ಹೋಗಿದೆ. ಮನೆಯಿಂದ ಹೊರಗಡೆ ಬರುವುದೇ ಕಷ್ಟಸಾಧ್ಯವಾದ ಈ ಸನ್ನಿವೇಶದಲ್ಲಿ ತನ್ನವರನ್ನೆಲ್ಲ ಬಿಟ್ಟು ಒಂದು ದಿನವೂ ರಜೆ ಮಾಡದೆ, ವಿಪರೀತವಾಗಿ ಕೊರೊನಾದ ಕಪ್ಪು ಛಾಯೆ ಆವರಿಸಿರುವ ಮಲಾಡ್ ಪರಿಸರದ ಆಸ್ಪತ್ರೆಯಲ್ಲಿ ರೋಗಿಗಳ ಶುಶ್ರೂಷೆಯಲ್ಲಿ ನಿರಂತರವಾಗಿ ತೊಡಗಿಸಿ ಕೊಳ್ಳುವುದರ ಮೂಲಕ ತಾನು ಸಹ ಕೊರೊನಾ ವಾರಿಯರ್ಸ್ ಅನ್ನುವುದನ್ನು ತೋರಿಸಿ ಕೊಟ್ಟಿರುವ ಓರ್ವ ಧೀಮಂತ ಮಹಿಳೆಯಿವರು.*.ಇವರ ಸೇವೆಗೆ ಪತಿ ದಿನೇಶ್ ಕುಲಾಲ್ ಹಾಗೂ ಮಗಳು ಲಾಸ್ಯ ಬೆನ್ನೆಲುಬಾಗಿ ನಿಂತಿದ್ದಾರೆ. ಇವರಿಬ್ಬರ ಸಹಾಯ ಸಹಕಾರವನ್ನು ಪ್ರತೀ ಕ್ಷಣವೂ ನೆನಪಿಸಿಕೊಳ್ಳುತ್ತಾರೆ ಇವರು.
ಸೇವಾವೃತ್ತಿಯ ಜೊತೆ ಜೊತೆಗೆ ಸಾಮಾಜಿಕ ಧಾರ್ಮಿಕ ಸಂಘಟನೆ ಗಳಲ್ಲೂ ಸಕ್ರೀಯವಾಗಿ ಪಾಲ್ಗೊಳ್ಳುವ ಇವರದ್ದು ದಣಿವರಿಯದ ವ್ಯಕ್ತಿತ್ವ.
ಚರ್ಚ್ ಗೇಟ್ ದಹಿಸರ್ ಕುಲಾಲ ಸಂಘದ ಪ್ರಾದೇಶಿಕ ಸಮಿತಿಯಲ್ಲಿ ಕಾರ್ಯದರ್ಶಿಯಾಗಿ, ಪ್ರಸ್ತುತ ಉಪಾಧ್ಯಕ್ಷರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮಲಾಡ್ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಆಡಳಿತ ಮಂಡಳಿ ಸದಸ್ಯೆಯಾಗಿ ಇದರ ದಶಮಾನೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಕ್ಷಗಾನ ಪಾತ್ರಧಾರಿಯಾಗಿ ಕಾಲಿಗೆ ಗೆಜ್ಜೆ ಕಟ್ಟಿ ತನ್ನ ಕಲಾ ಪ್ರೀತಿಯನ್ನು ವ್ಯಕ್ತ ಪಡಿಸಿದ್ದಾರೆ. ಹೆಣ್ಣು ಸಮಾಜದ ಕಣ್ಣು ಎನ್ನುವುದನ್ನು ಸಾಬೀತುಪಡಿಸಿದವರು ನೀವು.
ನಿಮ್ಮ ಸೇವಾ ಮನೋಭಾವನೆ ನಿತ್ಯ ನಿರಂತರವಾಗಿರಲಿ. ಇನ್ನಷ್ಟು ರೋಗಿಗಳ ಅಶಕ್ತರ ಕಣ್ಣೀರೊರೆಸುವ ಕಾರ್ಯ ನಿಮ್ಮಿಂದಾಗಲಿ. ಅದಕ್ಕೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ನಿಮಗೆ ಆಯುರಾರೋಗ್ಯ, ಐಶ್ವರ್ಯ, ಸುಖ ಶಾಂತಿ ನೆಮ್ಮದಿಯನ್ನು ಕೊಟ್ಟು ಅನುಗ್ರಹಿಸಲೆಂದು ಪ್ರಾರ್ಥಿಸಿಕೊಳ್ಳುತ್ತೇನೆ.