ಭಯ!! ಭಯ!! ಭಯ!! ಎಲ್ಲಿ ನೋಡಿದರೂ ಭಯ! ಹೇಗಪ್ಪಾ ನಮ್ಮ ಜೀವವನ್ನು ಈ ಮಹಾಮಾರಿಯಿಂದ ರಕ್ಶಿಸುವುದು ಎಂಬ ಆಲೋಚನೆ ಎಲ್ಲರಲ್ಲಿಯೂ ಮೂಡಿರುವುದು ಸರ್ವೇಸಾಮಾನ್ಯ. ಎಲ್ಲರೂ ಈ ಕೊರೋನ ಕೋವಿಡ್-19 ಮಹಾಮಾರಿಯ ಬಗ್ಗೆಯೇ ಯೋಚಿಸುವುದರಲ್ಲಿ ತಲ್ಲೀನರಾಗಿರುವುದು ಸತ್ಯ ಸಂಗತಿ. ಎಲ್ಲಾ ಮಾಧ್ಯಮಗಳಲ್ಲಿ ಇದರದ್ದೇ ಸುದ್ದಿ. ಇಡೀ ಊರಿಗೆ ಊರೇ ನಿಶ್ಶಬ್ಧ. ಕೇವಲ ಪ್ರಾಣಿ ಪಕ್ಷಿಗಳದ್ದೇ ದರಬಾರು ಹಾಗು ಕಾರುಬಾರು. ಪೃಕೃತಿ ಯಾವುದೇ ಮಾಲಿನ್ಯವಿಲ್ಲದೆ ಶಾಂತವಾಗಿದೆ. ರೈತರು ತಮ್ಮ ಬೆಳೆಗೆ ಸರಿಯಾದ ಬೆಲೆ ಹಾಗು ಮಾರುಕಟ್ಟೆ ಇಲ್ಲದೆ ಕಣ್ಣೀರಿಡುತ್ತಾ, ತಮ್ಮ ವೇದನೆಯನ್ನು ಯಾರಲ್ಲಿಯೂ ಹೇಳಲಾಗದೆ ಕಂಗೆಟ್ಟಿದ್ದಾರೆ. ಕಾರ್ಮಿಕರು ಕೆಲಸ ಇಲ್ಲದೆ ಪರದಾಡುವುದು ಒಂದಾದರೆ, ಇದರ ನಡುವೆ ಕೆಲವು ರಾಜಕಾರಣಿಗಳ ಕುತಂತ್ರ.. ಹೀಗೆ ಇಡೀ ದೇಶವೇ ಭಯದ ನೆರಳಲ್ಲಿ ವಿಲಿವಿಲಿ ವೊದ್ದಾಡುತ್ತಿದೆ.

ಕೊರೋನ ಬಂದಮೇಲಂತೂ ಕೆಲವು ಜನರ ಕಷ್ಟ ಸರಕಾರಕ್ಕೆ ಹಾಗೂ ಎಲ್ಲಾ ಜನರಿಗೆ ಅರ್ಥವಾಗಿದೆ. ಕೆಲವು ಅಧಿಕಾರಿಗಳು ಕೇವಲ ಕುರ್ಚಿ ಮೇಲೆ ಕುಳಿತುಕೊಂಡಿದ್ದವರು ಈಗ ಜನರ ಕಷ್ಟವನ್ನು ಅರಿಯುವುದರಲ್ಲಿ ಸಫಲರಾಗಿದ್ದಾರೆಂಬುವುದಕ್ಕೆ ಯಾವುದೇ ಮಾತಿಲ್ಲ. ನಮ್ಮ ಸರಕಾರ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುವುದಕ್ಕೆ ಈ ಲಾಕ್‍ಡೌನೇ ಸಾಕ್ಶಿ. ಇತ್ತೀಚಿನ ದಿನಗಳಲ್ಲಿ ಸರಕಾರವು ಒಳ್ಳೆಯ ಕೆಲಸ ಹಾಗೂ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಆದರೆ ಇದೇ ರೀತಿ ಈ ಸುಳ್ಳು ರಾಜಕೀಯದ ಕಿತ್ತಾಟಗಳನ್ನು ಬಿಟ್ಟು ಒಳ್ಳೆಯ ಆಡಳಿತವನ್ನು ನೀಡಿದ್ದರೆ, ಅದೆಲ್ಲವೂ ಈಗಿನ ಸಮಯದಲ್ಲಿ ತುಂಬಾ ಸಹಕಾರಿಯಾಗುತ್ತಿತ್ತೋ ಏನೊ!

ನಾವು ಕೇವಲ ನಮ್ಮ ಸುತ್ತಮುತ್ತಲಿನ ಬೀದಿ, ರಸ್ತೆಗಳನ್ನು ಈಗ ಸರಿಯಾಗಿ ಗಮನಿಸಿದರೆ ನಮಗೆ ನೋಡಲು ಸಿಗುವುದೇ ಕಸದ ರಾಶಿಗಳು. ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿ ಕಸದ ವಿಲೇವಾರಿ ಆಗಿಲ್ಲ. ಸಂಬಂಧ ಪಟ್ಟ ಅಧಿಕಾರಿಗಳು ಅದರ ಸುದ್ದಿಗೂ ಹೋಗಿಲ್ಲ. ಯಾರೂ ಇದರ ಬಗ್ಗೆ ಗಮನ ಹರಿಸಲ್ಲ ಎಂದು ಭಾವಿಸುತ್ತದೆ. ಇದು ಕಸ ವಿಲೇವಾರಿ ಮಾಡುವ ಸರಿಯಾದ ಸಮಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಯಾಕೆ ಈ ನಿರ್ಲಕ್ಶತನ ಎಂಬುದೇ ಒಂದು ಪ್ರಶ್ನೆಯಾಗಿಯೇ ಉಳಿಯುವುದರಲ್ಲಿ ಅನುಮಾನವಿಲ್ಲ!.

ಎಷ್ಟೆಲ್ಲಾ ಕಷ್ಟ ಇದ್ದರೂ ಜನರಿಗೆ ಮಾತ್ರ ಆ ಪಾಪಿ ಸಾರಾಯಿಯನ್ನು ಮರೆಯಲಾಗಲಿಲ್ಲ. ಎಷ್ಟೋ ಮನೆಗಳಲ್ಲಿ ಸಾರಾಯಿ ಇಲ್ಲದೆ ನೆಮ್ಮದಿ ಮರುಕಳಿಸಿತ್ತು ಆದರೆ ಅದು ಜಾಸ್ತಿ ಸಮಯ ಉಳಿಸಲು ಸರಕಾರ ವಿಫಲವಾಯಿತು. ಎಷ್ಟೋ ಕುಟುಂಬಗಳು ಸರಕಾರಕ್ಕೆ ಹಿಡಿ ಶಾಪ ಹಾಕಲು ಪ್ರಾರಂಭಿಸಿವೆ. ಒಂದೆಡೆ ಸರಕಾರದ ಬಳಿ ಹಣವಿಲ್ಲವೆಂಬುದು ಸತ್ಯವಾದರೆ, ಇನ್ನೊಂದೆಡೆ ಸರಕಾರವೇ ಕುಟುಂಬಗಳನ್ನು ಒಡೆಯುವ ಕೆಲಸ ಮಾಡಿದೆ ಎಂಬುವುದು ಅಷ್ಟೇ ಸತ್ಯ.

ನಮ್ಮ ಸರಕಾರವು ಎಷ್ಟು ನಿಯಮಗಳನ್ನು ಜಾರಿಗೆ ತಂದರೂ ಕೆಲವು ಪೋಲಿ ಜನರು ಅದನ್ನು ನಿರ್ಲಕ್ಶಿಸಿ, ಅತಂತವನ್ನು ಉಂಟು ಮಾಡುತ್ತಿದ್ದಾರೆ. ಸರಿಯಾಗಿ ಮಾಸ್ಕ್ ಬಳಸುತ್ತಿಲ್ಲ. ಇನ್ನೊಂದೆಡೆ ಸರಿಯಾಗಿ ಸಂಚಾರಿ ನಿಯಮಗಳನ್ನು ಪಾಲಿಸುತ್ತಿಲ್ಲ. ಕೆಲವರಂತೂ ಇನ್ನೂ ಕೋಮು ಗಲಬೆ ಸೃಷ್ಟಿಸುವಲ್ಲಿ ಸಫಲರಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಾ ಇವೆ. ಇವೆಲ್ಲಾ ಸರಕಾರಕ್ಕೆ ತಲೆನೋವಾಗಿ ಪರಿನಮಿಸಿದೆ ಮಾತ್ರವಲ್ಲದೆ ಅದನ್ನು ತಡೆಹಿಡಿಯುವುದು ಬಹು ದೊಡ್ಡ ಸವಾಲಾಗಿ ಉಳಿದಿದೆ.

ಈಗ ನಮ್ಮ ಊರು, ಯಾವುದೇ ಕೋಮು ಗಲಬೆಯಿಲ್ಲದೆ ಪ್ರಶಾಂತವಾಗಿದೆ. ಕೇವಲ ಪ್ರಾಣಿ ಪಕ್ಶಿಗಳದ್ದೇ ಸದ್ದು. ಇದೆಲ್ಲಾ ನೋಡುವಾಗ ನಾವು ನಮ್ಮ ಪೂರ್ವಜರ ಕಾಲದಲ್ಲಿ ಇರುವ ಹಾಗೆ ಭಾಸವಾಗುತ್ತಿದೆ. ಜನರು ಗ್ರಾಮೀಣ ಕ್ರೀಡೆಗಳನ್ನಾಡುವುದರಲ್ಲಿ, ಹೊಸ ಬಗೆಯ ತಿಂಡಿ ತಿನಿಸುಗಳನ್ನು ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ. ಹೆತ್ತವರು ತಮ್ಮ ಸಣ್ಣ ಮಕ್ಕಳ ಜೊತೆಗೂಡಿ ತಾವೂ ಸಣ್ಣವರಾಗಿದ್ದ ದಿನಗಳನ್ನು ಮತ್ತೇ ಮೆಲುಕು ಹಾಕುತ್ತಿದ್ದಾರೆ.

ಇದೆಲ್ಲದರ ನಡುವೆಯೂ ತಮ್ಮ ಜೀವವನ್ನು ಲೆಕ್ಕಿಸದೆ ಹಗಲಿರುಳು ಶ್ರಮಿಸುತ್ತಿರುವ ವೈಧ್ಯರು, ಪೋಲೀಸ್ ಹಾಗೂ ಭಾರತೀಯ ಸೈನಿಕರಿಗೆ ನಮ್ಮ ನಮನಗಳನ್ನು ಸಲ್ಲಿಸಲೇಬೇಕು. ತಮ್ಮ ಕುಟುಂಬಗಳನ್ನು ತೊರೆದು ನಮಗೋಸ್ಕರ ದುಡಿಯುವ ಈ ಧೀರ ಸೇನಾನಿಗಳಿಗೆ ಒಂದು ಸಲಾಮ್ ಹೊಡೆದರೆ ತಪ್ಪಾಗಲಾರದು.


- ಪ್ರೀತಮ್ ಜೋಯ್ಸನ್ ಡಿಸೋಜ

ಫಜೀರು