ಖುಷಿಯನ್ನು ಹಂಚೋಣ

ಮುಗಿಲೆತ್ತರಕೆ ಏರುವ ಆಸೆ

ಅದರೊಳು ಜೀಕುವ ಆಸೆ

ಕನಸುಗಳ ಬೆನ್ನೇರಿ ಬಣ್ಣ ಹಚ್ಚುವಾಸೆ

ಹಚ್ಚಿದ ಬಳಿಕ ಸಂಭ್ರಮ ಪಡುವಾಸೆ...

ಕನಸುಗಳಿಗೆ ಬಣ್ಣ ಕೊಡಲು ಮಾತು ಬೇಕಿಲ್ಲ. "ಮಾತು ಬೆಳ್ಳಿ ಮೌನ ಬಂಗಾರ" ಅಂತಾರಲ್ಲ. ಹೆಚ್ಚು ಸಾಧಿಸಬೇಕಂತಾದರೆ ಅಂದರೆ ಕನಸುಗಳಿಗೆ ಸಾಧನೆಯೆಂಬ ಬಣ್ಣ ಹಾಕಲು ಮೌನವು ಸಾಕು. ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಅನ್ನೋ ಹಾಗಾಗಬಾರದು.

ಈಗೀಗ ಯಾರನ್ನು ನಂಬಬೇಕು ಯಾರನ್ನು ನಂಬದಿರಬೇಕು ಅನ್ನೋದು ಗೊತ್ತಾಗಲ್ಲ(ಎಲ್ಲರನ್ನಲ್ಲ). "ಹೊರಗೆ ಸಾಚಾತನ ಒಳಗೆ ಗೋಮುಖವ್ಯಾಘ್ರ "ಅನ್ನೋದು ದಿಟವಾಗ್ತಾ ಇದೆ.

ಜೀವನದ ಹತ್ತು ಹಲವು ಮುಖಗಳಿಗೆ ಹಲವು ಬಣ್ಣಗಳಿವೆ. ಹೇಗೆ ಅಂತೀರಾ?  ಮಳೆ ಹನಿ ಬಿದ್ದ ಮೇಲೆ, ಭೂಮಿಯನ್ನು ಹದ ಮಾಡಿ ನೇಗಿಲಲ್ಲಿ ಉತ್ತು, ಬೀಜ ಬಿತ್ತುವ ಕೆಲಸ ಇದೆಯಲ್ಲ ಆ ಕನಸು ಒಂದು ದಿನದಲ್ಲಿ ಮುಗಿಯುವುದಿಲ್ಲ. ಅದಕ್ಕೆ ಹಲವಾರು ದಿನ, ತಿಂಗಳು ಅಥವಾ ವರ್ಷಗಳ ಪರಿಶ್ರಮ ಬೇಕಾಗುತ್ತದೆ. ಹಾಗೆಯೇ ನಾವು ಕಂಡ ಕನಸುಗಳಿಗೆ ಬಣ್ಣ ತುಂಬಿ ಅದನ್ನು ನನಸು ಮಾಡಬೇಕಾದರೆ ಪರಿಶ್ರಮ ಅತೀ ಅಗತ್ಯ.

ಈಗ ಒಂದು ಪುಸ್ತಕ ಓದೋದು ಕನಸು ಅಂದ್ಕೊಂಡ್ರೆ ಅದನ್ನು ತೆರೆದು ಓದಿದ್ರೆ ಮಾತ್ರ ಆ ಕನಸಿಗೆ ರೆಕ್ಕೆ ಬರೋದು. ಆಗ ಅದು ಬಲಿತು ಹಾಡು ಬರೆಯಲು ಹಾಡಲು ಅಥವಾ ಇನ್ಯಾರಿಗೋ ಓದಲು ಸಹಾಯವಾಗಬಹುದು. ಸಮಾಜದ, ಪರಿಸರದ ಒಳಿತಿಗಾಗಿ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಕನಸುಗಳನ್ನು ಸಾಕಾರಗೊಳಿಸಿಕೊಳ್ಳೋಣ. ಹೊಸದಾಗಿ ಮನಸಿಗೆ ಬಣ್ಣ ಹಚ್ಚುತ್ತ ನಾವು ಸಂತೋಷ ಪಡುತ್ತಾ ಇತರರಿಗೂ ಆ ಖುಷಿಯನ್ನು ಹಂಚೋಣ. ಸ್ವಾಸ್ಥ್ಯ ವೃದ್ಧಿಸೋಣ.


-ಮಲ್ಲಿಕಾ ಜೆ ರೈ ಗುಂಡ್ಯಡ್ಕ ಪುತ್ತೂರು