ಅಂತೂ ಭಾರೀ ಗದ್ದಲ, ಆರೋಪ, ಸವಾಲು, ಪ್ರತಿ ಸವಾಲುಗಳ  ಸರಮಾಲೆಯಲ್ಲಿ ನಡೆಯುತ್ತಿದ್ದ ಚುನಾವಣಾ ಪ್ರಕ್ರಿಯೆ ಮುಗಿದು ಹೋಗಿದೆ. ರಾಜ್ಯದಲ್ಲಿ ಎರಡು ಹಂತದ ಚುನಾವಣೆಯ ಪೈಕಿ ಒಂದು ಹಂತದ ಚುನಾವಣೆಗೆ ಈಗಾಗಲೇ ಪೂರ್ಣವಿರಾಮ ಬಿದ್ದಿದೆ. ಮೈದಾನದಲ್ಲಿ, ರಸ್ತೆಯಲ್ಲಿ, ಮನೆ ಮನೆಗೆ ಭೇಟಿ ನೀಡುವ ಮೂಲಕ ಎಡೆಬಿಡದೇ  ನಡೆಯುತ್ತಿದ್ದ ಚುನಾವಣಾ ಪ್ರಚಾರ ಅಂತ್ಯಗೊಂಡಿದೆ. ಇದೀಗ ರಾಜಕೀಯ, ಪಕ್ಷ, ಆರೋಪ ಪ್ರತ್ಯಾರೋಪಗಳಿಂದ ಹೊಬಂದ ರಾಜಕಾರಣಿಗಳ, ಮತದಾರರ ದೃಷ್ಟಿ ಮತ ಎಣಿಕೆಯತ್ತ ಬಿದ್ದಿದೆ. ಇನ್ನು ಎಲ್ಲರ ಮುಂದಿರುವ ಪ್ರಶ್ನೆ  ಗೆಲ್ಲುವ ಕುದುರೆ ಯಾವುದು? ಕಣದಲ್ಲಿ ಹಲವು ಮಂದಿ ಇದ್ದರೂ ಗೆಲ್ಲುವುದು ಒಬ್ಬರೇ.  ಆದರೆ ಗೆದ್ದ ಮೇಲೆ ಅವರು  ಕ್ಷೇತ್ರದ ಕಡೆ ಗಮನ ಕೊಡುತ್ತಾರೋ, ಪಾರ್ಲಿಮೆಂಟ್‍ನಲ್ಲೇ ಕಾಲ ಕಳೆಯುತ್ತಾರೋ ಅಥವಾ ಮನೆಯಲ್ಲೇ ಮಲಗಿ ಮಿಡುತ್ತಾರೋ ಎನ್ನುವುದು ಪ್ರಶ್ನೆ. ಈವರೆಗೆ ನಡೆದದ್ದೂ ಹೀಗೇನೇ. ಚುನಾವಣೆಗೆ ನಿಂತವರು ಸಾವಿರ ಭರವಸೆ ಕೊಟ್ಟು ಬಿಡುತ್ತಾರೆ. ಈ ಮಧ್ಯೆ ಪಕ್ಷದ ಪ್ರಣಾಳಿಕೆ ಬೇರೆ. ಸಾವಿರ ಯೋಜನಗಳು ಬೇರೆ. ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಪ್ರಣಾಳಿಕೆ ನೂರಾರು ಯೋಜನೆಗಳನ್ನು  ಜನರ ಮುಂದಿಟ್ಟ ಪಕ್ಷಕ್ಕೆ ಪ್ರಣಾಳಿಕೆ ಬಿಡಿ ಮತದಾರರಿಗೆ ಏನು ಭರವಸೆ ಕೊಟ್ಟಿದ್ದೇವೆ ಎನ್ನುವುದು ಕೂಡಾ ನೆನಪಿರುವುದಿಲ್ಲ. ನೆನಪಿದ್ದರೂ ನೆನಪಿಲ್ಲದಂತೆ ನಟಿಸಿಬಿಡುತ್ತಾರೆ. ಏನೂ ಆದರೂ ಅವರು ರಾಜಕಾರಣಿಯಲ್ಲವೇ? ಅವರಿಗೆ ಯಾವ ಸಂದರ್ಭಕ್ಕೆ ಏನು ಮಾಡಬೇಕು ಎಂಬುವುದು ಕೂಡಾ ಗೊತ್ತಿದೆ.  ಒಂದು ವೇಳೆ ಭರವಸೆ ನೀಡಿದ ಬಗ್ಗೆ ಮನವರಿಕೆ ಮಾಡಿದರೆ  ರಾಜಕಾರಣಿಗಳೇ ನಮಗೆ ಮರುಪ್ರಶ್ನೆ ಹಾಕುತ್ತಾರೆ. ಅದೇ ರೀತಿ ಕ್ಷೇತ್ರ ವ್ಯಾಪ್ತಿಯಲ್ಲಿ ಗೆದ್ದು ಸಂಸದರಾದವರು ಮತ್ತೆ ಮತದಾರರ ಕಣ್ಣಿಗೆ ಬೀಳುವುದಿಲ್ಲ. ಇದು ರಾಜಕಾರಣಿಗಳ ಸ್ವಭಾವ.

ಕ್ಷೇತ್ರದ ಪ್ರಮುಖ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮಾಡಬೇಕಾದ ಜವಾಬ್ದಾರಿ ಸಂಸದರ ಮೇಲಿದೆ. ರಾಜಕೀಯ ಮಾಡುವುದು, ರಾಜಕೀಯದಲ್ಲೇ ಮತದರಾರನ್ನು ಸಿಲುಕಿಸಿಬಿಡುವುದು ಸಂಸದರ ಕೆಲಸವಲ್ಲ. ಜನಪರ ಸೇವೆಗೆ ಒತ್ತು ಕೊಡುವ ಕೆಲಸ ಆಗಬೇಕು. ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಗಳು ಆಗಬೇಕು. ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಗಳು ಸೇರಿದಂತೆ ಮೂಲಭೂತ ಸೌಕರ್ಯಗಳು ಆಗಬೇಕು. ಇದರ ಮಹತ್ತರ ಜವಾಬ್ದಾರಿ ಸಂಸದರ ಮೇಲಿದೆ. ಆದರೆ ಸಂಸದರಾದವರಿಗೆ ಇದೆಲ್ಲಾ ನೆನಪಿರುತ್ತದೆಯೋ ಅಂತೂ ಗೊತ್ತಿಲ್ಲ. ಗೆದ್ದವರಿಗೆ ನಮಗೆ ಪಾರ್ಲಿಮೆಂಟ್ ಅಧಿವೇಶನ ಮತ್ತು ಸಭಾ ಕಾರ್ಯಕ್ರಮ ಭಾಗವಹಿಸುವಿಕೆ ಮಾತ್ರ ಜವಾಬ್ದಾರಿಯುತ ಕೆಲಸ ಎಂಬ ಭಾವನೆ ಇದೆ.  ಇಷ್ಟೇ ಕೆಲಸ ಮಾಡಿ ಮೌನವಾಗುವ ಸಂಸದರ ಸಂಖ್ಯೆ ಬಹಳಷ್ಟಿದೆ. ಇಂತಹ ಸಂಸದರಿಂದ ಜನರು ಏನು ಬಯಸಲು ಸಾಧ್ಯ ಹೇಳಿ.

ಈವರೆಗೆ ಸಂಸದರಾದವರು ಮಾಡಿದ್ದು ಇಷ್ಟೇ. ಹೋರಾಟ ಮಾಡಿದರೂ ಕೂಡಾ ಸಮಸ್ಯೆ  ಕಡೆ ಗಮನಹರಿಸದ ಸಂಸದರು ನಮ್ಮುಂದಿದ್ದಾರೆ. ಕೇವಲ ಹೆಸರಿಗೆ ಮಾತ್ರ ಸಂಸದರಾಗಿ ಹೋದವರು ಇದ್ದಾರೆ. ಕೇವಲ ಅಧಿಕಾರಕ್ಕೆ ಮಾತ್ರ ಸೀಮಿತರಾಗಿರುವ ಸಂಸದರು ಇದ್ದಾರೆ. ಅಧಿಕಾರಕ್ಕಾಗಿ ಹಾತೊರೆಯುವವರು ಇದ್ದಾರೆ. ಇವರು ಭಾವಿಸುವುದು ನಮಗೆ ಅಧಿಕಾರ ಗಳಿಕೆ ಮಾತ್ರ ಮುಖ್ಯ  ಎಂದು. ಕಾಂಗ್ರೆಸ್‍ನಿಂದ ಬಿಜೆಪಿಗೆ ಹೋದ ಎಸ್‍ಎಂ ಕೃಷ್ಣ ರಂತಹ ನಾಯಕರು ಬಯಸಿದ್ದು ಇದನ್ನೇ. ಇದೇ ಕಾರಣದಿಂದ ಅವರ ರಾಜಕೀಯ ಕೇವಲ ಅಧಿಕಾರದಲ್ಲೇ ಕೊನೆಗೊಂಡಿದೆ.  ಇನ್ನು ಮುಂದೆ ಸಂಸದರಾಗುವವರ ಪೈಕಿ ಕೆಲವರು ಇದೇ ಹಾದಿಯಲ್ಲಿ ಮುಂದುವರಿಯುತ್ತಾರೆ ಎನ್ನುವುದರಲ್ಲಿ ಸಂಶಯ ಕೂಡಾ ಇಲ್ಲ. ಯಾವುದೇ ಅನಾಹುತ ಸಂಭವಿಸಲಿ, ಮಳೆ ಬಂದು ಮನೆ ಮುಳುಗಿ ಹೋದರೂ ಸಂಸದರಿಗೆ ಗೊತ್ತೇ ಇರುವುದಿಲ್ಲ ಬಿಡಿ. ಮಳೆ ಹಾನಿಗೆ ಪರಿಹಾರ ಒದಗಿಸಲು ಇಲಾಖೆ ಇದೆ, ಅದು ನಮ್ಮ ಜವಾಬ್ದಾರಿಯಲ್ಲ ಎನ್ನುವ ಜನಪ್ರತಿನಿಧಿಗಳಿದ್ದಾರೆ. ಮಳೆ ಹಾನಿಗೆ ತೊಂದರೆಗೊಳಗಾದವರ ಕಡೆ ಭೇಟಿ ನೀಡದ ಸಂಸದರು ಕೂಡಾ ಇದ್ದಾರೆ ಎಂದ ಮೇಲೆ ಇವರಿಂದ ಜನರಿಗೆ ಆಗುವ ಸಾಧನೆಯಾದರೂ ಹೇಳಿ.

ಇಷ್ಟರವರೆಗೆ ಈ ರೀತಿಯ ರಾಜಕಾರಣವೇ ನಡೆದಿದೆ. ಇನ್ನು ಸಂಸದರಾಗಿ ಆಯ್ಕೆಯಾಗುವವರು ಮೊದಲು ಜನಸೇವೆಯತ್ತ ಗಮನಕೊಡಬೇಕು. ಸಂಕಷ್ಟದಲ್ಲಿರುವ ರೈತರಿಗೆ, ಬಡವರಿಗೆ ನೆರವಾಗಬೇಕು. ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಬಿಪಿಎಲ್‍ದಾರರಿಗೆ ವಿಶೇಷ ಯೋಜನೆಗಳು ಅವರ ಜೀವನ ಪೂರಕವಾಗುವ ರೀತಿಯಲ್ಲಿ ಅನುಷ್ಠಾನಕ್ಕೆ ತರುವ ಕೆಲಸ ಮಾಡಬೇಕು. ಸಂಸದರ ನಿಧಿಯನ್ನು ಕ್ಷೇತ್ರಕ್ಕೆ ಮೀಸಲಿಟ್ಟು ಕ್ಷೇತ್ರದ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ಮಾಡಬೇಕು. ಇಂತಹ ಕೆಲಸ ಸಂಸದರಾಗುವವರು ಮಾಡಿದರೆ ಅಂತಹವರನ್ನು ಸಂಸದ ಎಂದು ಪರಿಗಣಿಸಬಹುದು. ಕೇವಲ ಪ್ರಣಾಳಿಕೆ, ಪ್ರಣಾಳಿಕೆಯ ಲೆಕ್ಕಾಚಾರ ಮಾತ್ರ ಕೊಟ್ಟರೆ ಸಾಕಾಗುವುದಿಲ್ಲ. ಅದರ ಅಗತ್ಯ ಕೂಡಾ ಇರುವುದಿಲ್ಲ. ಸಂಸತ್ತು ಸಂಸದರ ಮನೆ ಎಂದು ಲೆಕ್ಕ  ಹಾಕಿ ಅಲ್ಲಿ ಕೂರುವುದನ್ನು ಬಿಟ್ಟು ಊರನ್ನು ಬೆಳೆಸುವ ಗುರಿ ಇಟ್ಟುಕೊಂಡರೆ ಅಭಿವೃದ್ಧಿ ಖಂಡಿತಾ ಆಗುತ್ತದೆ. ಆದರೆ ಗುರಿ ಇಟ್ಟುಕೊಳ್ಳುವ ಸಂಸದರು ಬೇಕಲ್ಲವಾ? ಅಭಿವೃದ್ಧಿ ಕೆಲಸ ಶುರು ಮಾಡಿದರೆ ಅದರಲ್ಲಿ ಮತ್ತೆ ರಾಜಕೀಯ. ಈ ರಾಜಕೀಯ ಎನ್ನುವ ಶಬ್ದದಿಂದ ಜನರ ಜೀವನ ಕಗ್ಗಂಟಾಗಿದೆ ಅಷ್ಟೇ. ಆದರೆ ಇದನ್ನೆಲ್ಲ ಅರ್ಥ ಮಾಡಿಕೊಳ್ಳುವವರು ಯಾರಿದ್ದಾರೆ. ಸರಕಾರಕ್ಕೆ ಜನರಿಗೆ ಅಗತ್ಯವಾದ ಅಡುಗೆ ಅನಿಲ, ವಿದ್ಯುತ್, ಕೃಷಿಕರಿಗೆ ಪಂಪ್ ಇನ್ನಿತರ ಸವಲತ್ತು, ವರ್ಷಕ್ಕಿಷ್ಟು ಬಡ್ಡಿ ರಹಿತ ಸಾಲ, ಬಡವರ ಅಭಿವೃದ್ಧಿಗಾಗಿ ಉಚಿತ ಸೂರಿನ ವ್ಯವಸ್ಥೆ, ನಿವೇಶನದ ವ್ಯವಸ್ಥೆ, ಹೆಣ್ಣು ಮಕ್ಕಳಿಗಾಗಿ ವಿಶೇಷ ಯೋಜನೆಗಳನ್ನು ತರಲು ಅವಕಾಶ ಇದೆ. ಸಾಧ್ಯತೆ ಕೂಡಾ ಇದೆ. ಆದರೆ ಇಂತಹ ಯೋಜನೆ ಎಲ್ಲಿ ತಂದಿದ್ದಾರೆ? ಇನ್ನು ಯಾವ ಸರಕಾರ, ಸಂಸದರು ತರುತ್ತಾರೆ?

- By Abdul Basheer Kalkatta