ಕಲ್ಲಮುಂಡ್ಕೂರಿನ ಗುಂಡ್ಯಡ್ಕ ಸಮೀಪದ ಕೊಪ್ಪಂದಡ್ಕದ ಅಪ್ಪಟ ಗ್ರಾಮೀಣ ವಿದ್ಯಾರ್ಥಿ ಪ್ರತಿಭೆ ಕು| ಸುನಿಧಿ ಎಸ್. ರಾಷ್ಟ್ರೀಯ ಪ್ರತಿಭೆಯಾಗಿ ಗೋಚರಿಸಿದ್ದು ಜನವರಿ 16, 2019 ರಂದು. ಅಂದು ಆಕೆ ರಾಷ್ಟ್ರ ರಾಜಧಾನಿ ನವದೆಹಲಿಯ ಕಾನ್ಸಿಟ್ಯೂಷನ್ ಕ್ಲಬ್ ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲ್ಯಾಪ್ ಟಾಪ್, ಪ್ರಶಸ್ತಿ ಫಲಕ, ಪ್ರಮಾಣ ಪತ್ರ, ಹಾಗೂ ಸಿಂಗಾಪುರದ ವಿಶೇಷ ಪ್ರವಾಸದ ಸೌಲಭ್ಯದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಸುದಿನ. ಭಾರತ ಸರಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪೆಟ್ರೋಲಿಯಂ ಸಂರಕ್ಷಣಾ ಮತ್ತು ಸಂಶೋಧನಾ ಸಂಸ್ಥೆಯವರು ನಡೆಸಿದ “ಸಕ್ಷಮ್” ರಾಷ್ಟ್ರೀಯ ಸ್ಪರ್ಧೆ-2018 ರ ಪ್ರಬಂಧ ಸ್ಪರ್ಧೆಯಲ್ಲಿ ಕು| ಸುನಿಧಿ ಎಸ್. ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಪ್ರತಿಭಾವಂತಿಕೆ ಇಷ್ಟೆಲ್ಲಾ ಸೌಲಭ್ಯಗಳನ್ನು ಪಡೆಯಲು ಕಾರಣವಾಗಿತ್ತು.

ಕಲ್ಲಮುಂಡ್ಕೂರಿನ ಗುಂಡ್ಯಡ್ಕ ಸಮೀಪದ ಕೊಪ್ಪಂದಡ್ಕದ ಕೃಷಿಕ ಸದಾನಂದ ಚಿಂಚಳ್ಕರ್ ಮತ್ತು ಸರಸ್ವತಿ ಚಿಂಚಳ್ಕರ್ ದಂಪತಿಗಳ ಸುಮಾರು ನಾಲ್ಕು ಎಕರೆ ತೋಟದ ಸುಂದರ ಪರಿಸರದಲ್ಲಿ ಹಿರಿಯರ ಬಳುವಳಿಯಾಗಿ ಬಂದ ತಂಪಾದ ಮನೆಯಲ್ಲಿ ಅಜ್ಜನೊಂದಿಗೆ ನಲಿದು-ಕುಣಿದು ಬೆಳೆದ ಅಪ್ಪಟ ಗ್ರಾಮೀಣ ಪ್ರತಿಭೆಯೊಂದು ದೇಶದ ರಾಜಧಾನಿಯಲ್ಲಿ ಪುರಸ್ಕರಿಸಲ್ಪಟ್ಟುದು ಮನೆಯವರಿಗೆಲ್ಲರಿಗೂ ಬಹಳ ಹೆಮ್ಮೆಯ ಸಂಗತಿಯಾಗಿತ್ತು. ಅಂತಹ ಹೆಮ್ಮೆಗೆ ಪೂರಕವಾದ ಮತ್ತು ಪ್ರಶಸ್ತಿಗೆ ಪ್ರೇರಕವಾದ ಇಂಬು ಸಿಕ್ಕಿದ್ದು ತಂದೆ, ತಾಯಿಯರ ಸತತ ಪ್ರೇರಣೆ ಹಾಗೂ ಶಾಲಾ ಗುರು-ಹಿರಿಯರ ಬೆಂಬಲದಿಂದ ಎಂದು ಕು| ಸುನಿಧಿ ಸ್ಮರಿಸಿಕೊಳ್ಳುತ್ತಾಳೆ.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ 2013 ರಿಂದ ಮಿಂಚಲು ಪ್ರಾರಂಭಿಸಿದ ಕು| ಸುನಿಧಿ ದ್ವಿತೀಯ ಸೋಪಾನ ಪರೀಕ್ಷೆಯೊಂದಿಗೆ ವಲಯ ಮಟ್ಟದ ಹಲವಾರು ಪಟಲಾಂ ಶಿಬಿರದಿಂದ ಸಾಕಷ್ಟು ತರಬೇತಿಯನ್ನು ನೀರ್ಕೆರೆ, ಕಲ್ಲಮುಂಡ್ಕೂರು ಶಾಲೆಗಳಲ್ಲಿ ಪಡೆದುಕೊಂಡಳು. ಅದೇ ಸಂದರ್ಭದಲ್ಲಿ ಪ್ರತಿಭಾ ಕಾರಂಜಿಯ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನಗಳನ್ನೂ ಬಾಚಿಕೊಂಡಳು. ಶಾಂತಿವನ ಟ್ರಸ್ಟ್ ನ ಭಾಷಣ ಸ್ಪರ್ಧೆ, ವಲಯ ಮಟ್ಟದ ಖೋ-ಖೋ ಪಂದ್ಯಾಟ, ಕ್ಲೇ ಮೋಡೆಲಿಂಗ್, ದೇಶ ಭಕ್ತಿಗೀತೆ, ಸಂಭಾಷಣೆ, ಸಂಸ್ಕøತ ಕಂಠಪಾಠ, ಚಿತ್ರಕಲೆ, ಭಾಷಣ, ಕೋಲಾಟ ಹೀಗೇ ಸಾಂಸೃತಿಕ, ಆಟೋಟಗಳೆಲ್ಲದರಲ್ಲೂ ಪ್ರಶಸ್ತಿಗಳನ್ನು ಗಳಿಸಿ ಎಲ್ಲದರಲ್ಲೂ ಸೈ ಎನ್ನಿಸಿಕೊಂಡಳು.

ಮಂಗಳೂರು ಕೊಡಿಯಾಲ ಬೈಲ್ ನ ಶಾರದಾ ವಿದ್ಯಾಲಯದಲ್ಲಿ ಭಗವದ್ಗೀತಾ ಅಭಿಯಾನ ಸಮಿತಿಯವರು ದ.ಕ. ಜಿಲ್ಲಾ ಗೀತಾ ಸಪ್ತಾಹದ ಅಂಗವಾಗಿ 2016 ರಲ್ಲಿ ನಡೆಸಿದ ಜಿಲ್ಲಾ ಮಟ್ಟದ ಭಗವದ್ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡು ಜಿಲ್ಲಾ ಮಟ್ಟದ ಪ್ರಶಸ್ತಿಗೆ ದಾಪುಗಾಲಿಟ್ಟಳು. ಏಳನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಸ್ಥಾನಿಯಾಗಿ ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ಸಂಮಾನಿಸಲ್ಪಟ್ಟಳು. ಹೀಗೆ ಲಲಿತ ಕಲೆಗಳೊಂದಿಗೆ, ಶಿಕ್ಷಣದಲ್ಲಿ ಕೂಡಾ ಮಂಚೂಣಿಯಲ್ಲಿದ್ದಾಳೆ.

ಮೂಡುಬಿದಿರೆ ಜೈನ್ ಹೈಸ್ಕೂಲಿಗೆ ಪಾದಾರ್ಪಣೆ ಮಾಡಿದ ತರುವಾಯ ಬೆಂಗಳೂರಿನ ಸಂಸ್ಕøತ ವಿಶ್ವವಿದ್ಯಾಲಯ ನಡೆಸಿದ ರಾಜ್ಯಮಟ್ಟದ ಸಂಸ್ಕøತ ಪ್ರೆಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟದಲ್ಲಿ ಮಿಂಚಲು ಪ್ರಾರಂಭಿಸಿದಳು. 14 ನೇ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ‘ಕಲಾ ರತ್ನ’ 15 ನೇ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ “ಕಲಾ ಚಿಗುರು” ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಳು. ಶಿಕ್ಷಣ, ಲಲಿತಕಲೆ, ಆಟೋಟಗಳೆಲ್ಲದರಲ್ಲಿ ಮಿಂಚುತ್ತಿದ್ದ ಕಾರಣ ಶಾಲೆಯಲ್ಲಿ 2018 ರ “ಅತ್ಯುತ್ತಮ ವಿದ್ಯಾರ್ಥಿನಿ” ಪುರಸ್ಕಾರವನ್ನು ಪಡೆದುಕೊಂಡಳು. ತರುವಾಯದ ಕೆಲವೇ ದಿನಗಳಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿಯನ್ನೂ ಪಡೆದು ಪ್ರಶಂಸಿಸಲ್ಪಡುತ್ತಿದ್ದಾಳೆ. ಇದೇ ಸಂದರ್ಭದಲ್ಲಿ ಜ್ಯೂನಿಯರ್ ಗ್ರೇಡ್ ಭರತನಾಟ್ಯದಲ್ಲಿ 93 ಶೇಕಡಾ ಅಂಕಗಳನ್ನೂ ಪಡೆದು ನೃತ್ಯದಲ್ಲೂ ಸಾಧನೆ ತೋರುತ್ತಿದ್ದಾಳೆ.
ಸಾಕಷ್ಟು ಸಂಚಾರೀ ಸೌಲಭ್ಯ ಇಲ್ಲದ ಕೊಪ್ಪಂದಡ್ಕದಿಂದ ಬಂದೂ ರಾಷ್ಟ್ರ ಮಟ್ಟದ ಸಾಧನೆ ಮಾಡಿದುದು ಅತ್ಯಂತ ಪ್ರಶಂಸನೀಯ. ಈಕೆಯೊಂದಿಗೆ ಅವಳಿ ಸೋದರನಾಗಿ ಹುಟ್ಟಿದ ಸಂಜಯ್ ಎಸ್. ಕೂಡಾ ಈಕೆಯಂತೆಯೇ 10 ನೇ ತರಗತಿಯಲ್ಲಿ ಕಲಿಯುತ್ತಿದ್ದು ಸುನಿಧಿಗೆ ಬೆಂಬಲವಾಗಿ ನಿಂತು ಸಹಕರಿಸುತ್ತಿದ್ದಾನೆ. ಈಕೆಯ ಸಾಧನೆ ಇನ್ನಷ್ಟು ಉತ್ತುಂಗಕ್ಕೇರಲಿ, ಮತ್ತಷ್ಟು ಪ್ರಶಸ್ತಿಗಳು ಈಕೆಯನ್ನರಸಿ ಬರಲಿ ಎಂಬುದೇ ನಮ್ಮೆಲ್ಲರ ಶುಭ ಹಾರೈಕೆ.



-ಲೇಖನ: ರಾಯೀ ರಾಜ ಕುಮಾರ್, ಮೂಡುಬಿದಿರೆ. ಫೋ(ಲೇಖಕರು: ಸಂಪನ್ಮೂಲ ವ್ಯಕ್ತಿ, ಸಮಾಜ ಚಿಂತಕರು, ಲೇಖಕರು)