ದಕ್ಷಿಣ ಕನ್ನಡ: ಕೊರೊನಾ ದಕ್ಷಿಣ ಕನ್ನಡ ಜಿಲ್ಲೆಗೂ ಬಂದೇ ಬರುತ್ತದೆ ಎಂಬ ಸುದ್ಧಿ ಬಂದಾಗಲೇ, ಮಂಗಳೂರು ಇದರ ವಿರುದ್ಧದ ಸಮರಕ್ಕೆ ಸಿದ್ಧವಾಗತೊಡಗಿತು. 750 ಬೆಡ್‍ಗಳಿರುವ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯನ್ನು ಬರಿದುಗೊಳಿಸಿ, ಮೂರು ಸುಸಜ್ಜಿತ ತೀವ್ರ ನಿಗಾ ಘಟಕಗಳನ್ನು ಕೊರೊನಾ ಪೀಡಿತ ರೋಗಿಗಳಿಗಾಗಿ ಮೀಸಲಿಡಲಾಯಿತು. ಜಿಲ್ಲಾ ಆಡಳಿತದವರು ಮದ್ದು ಹಾಗೂ ಇನ್ನಿತರ ಆಂತರ್ಯ ವ್ಯವಸ್ಥೆಗಳಿಗಾಗಿ ಆಸ್ಪತ್ರೆಯವರಿಗೆ ಪೂರ್ತಿ ಸ್ವಾತಂತ್ರ್ಯ ನೀಡಿ ಬೆಂಬಲಿಸಿದರು. ಇದರೊಂದಿಗೆ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಹಾಗು ಆಡಳಿತ ಮಂಡಳಿಯವರ ನಿಷರತ್ತು ಬೆಂಬಲವೂ ಮೇಳೈಸಿತು. ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯು ತನ್ನ ಹೆಸರುವಾಸಿ ವ್ಯವಸ್ಥೆಯೊಂದಿಗೆ, ತನ್ನ ಪರಿಣಿತ ವೈದ್ಯ (ಹಿರಿಯ/ಕಿರಿಯ) ಸಮೂಹವನ್ನು, ಈ ಯುದ್ಧದ ಸೇನಾನಿಗಳಾಗಿ ಪಣಕ್ಕಿಟ್ಟಿತು. ಇಷ್ಟೆಲ್ಲಾ ಸಜ್ಜಾಗಿದ್ದರೂ, ದುರದೃಷ್ಟವಶಾತ್, ಒಂದರ ಮೇಲೆ ಒಂದರಂತೆ, ತೀವ್ರ ನಿಗಾ ಘಟಕದಲ್ಲಿ, ಐದು ಸಾವುಗಳನ್ನು ನೋಡಬೇಕಾಯಿತು. ಈ ಎಲ್ಲಾ ಸಾವಿನಲ್ಲೂ, ರೋಗಿಗಳಿಗೆ ಇನ್ನಿತರ ಕಾಯಿಲೆಗಳೂ ಹದಮೀರಿ ಹೋದ ಕಾರಣ ಅವರನ್ನು ಉಳಿಸಿಕೊಳ್ಳಲು ಆಗಿರಲಿಲ್ಲ.. ಎಂದು ವೈದ್ಯರುಗಳು ಅಭಿಪ್ರಾಯಪಟ್ಟರು. ಇದನ್ನು ಅರಿಯದ ಮಂಗಳೂರಿನ ಜನಸಾಮಾನ್ಯರಿಗೆ, ಜಿಲ್ಲಾ ಆಡಳಿತದವರಿಗೆ, ಇಲ್ಲಿನ ಜನ ಪ್ರತಿನಿಧಿಗಳಿಗೆ, ಇದರಿಂದ ತೀವ್ರ ನಿರಾಶೆಯಾಯಿತು! ಆದರೆ, ಈ ನಿರಾಶೆಯ ಕತ್ತಲನ್ನು ಕರಗಿಸಿ, ಆಶಾದಾಯಕ ಬೆಳಕನ್ನು ಚೆಲ್ಲಲ್ಲು ನಮ್ಮ ಕೋವಿಡ್ ಸೇನಾನಿಗಳು ತಯಾರಾಗಿದ್ದರು.. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಂತೆಲ್ಲಾ ಈ ಸೈನ್ಯವು, ದೇವರ ಕೃಪೆಯನ್ನು ನೆನೆಯುತ್ತಾ, ತಮ್ಮ ಮುಂದಿದ್ದ, ಇನ್ನೂ ನಾಲ್ಕು ತೀರಾ ಹದಗೆಟ್ಟ ಸ್ಥಿತಿಯಲ್ಲಿದ್ದ ರೋಗಿಗಳ ಜೀವವನ್ನು, ಅದೇ ದುರದೃಷ್ಟಕರ ಎನಿಸಿಕೊಂಡಿದ್ದ, ತೀವ್ರ ನಿಗಾ ಘಟಕದಲ್ಲಿಟ್ಟು ಶುಶ್ರೂಷೆ ನಡೆಸಿ, ಅವರನ್ನು ಗುಣಪಡಿಸುವಲ್ಲಿ, ಅಸಮಾನ್ಯ ಕೌಶಲವನ್ನು ಮೆರೆಯಿತು
ಈ ನಾಲ್ಕೂ ರೋಗಿಗಳ ಸಂಕ್ಷಿಪ್ತ ವಿವರ ಹೀಗಿದೆ :-
ಕೇಸ್ 1) ಪಾಶ್ರ್ವವಾಯು ಪೀಡಿತ ಐವತ್ತರ ಮಹಿಳೆಗೆ, ಜಠರ-ಕರುಳಿನ ಸೋಂಕು ಹಾಗೂ ಶ್ವಾಸಕೋಶದ ತೊಂದರೆ ಇತ್ತು.. ಉಸಿರಾಡಲೂ ಕಷ್ಟಕರವಾದ ಪರಿಸ್ಥಿತಿ
ಕೇಸ್ 2) 68 ವರ್ಷದ ವೃದ್ಧೆಗೆ ತೀವ್ರ ದಮ್ಮಿನ ಕಾಯಿಲೆ ಇದ್ದು, ಅದರ ಜೊತೆ ಹೃದಯದ ದೌರ್ಬಲ್ಯತೆ, ವೈಫಲ್ಯತೆ, ಅನಿಯಂತ್ರಿತ ರಕ್ತದೊತ್ತಡ ಏರುವಿಕೆ, ಯಕೃತ್ತಿನ ತೊಂದರೆ, ಮಂಡಿ ಹಾಗು ಕಾಲಿನ ಚರ್ಮದ ಕೆಳಗಿನ ಸೋಂಕು-ಬಾವು, ರಕ್ತದಲ್ಲಿ ಕೀವು, ಹಾಗೂ ಅತಿಬೊಜ್ಜುತನ.. ಇವೆಲ್ಲವೂ ಮೇಳೈಸಿ ಸ್ಥಿತಿ ತೀರಾ ಗಂಭೀರವಾಗಿತ್ತು.
ಕೇಸ್ 3) 76 ವರ್ಷದ ವೃದ್ಧರಿಗೆ, ಯಕೃತ್ತಿನ ಕಾಯಿಲೆ, ಜೊತೆಗೆ ಹರಡುವ ಆರ್ಬುದ ಕಾಯಿಲೆ (ಮೂಳೆ ಹಾಗೂ ಯಕೃತ್ತಿಗೆ ಆರ್ಬುದ ಹರಡಿತ್ತು ಕೂಡ), ಅತಿ ರಕ್ತದೊತ್ತಡ, ಹೃದಯದ ದೌರ್ಬಲ್ಯತೆ, ಅದರುವಿಕೆ ಹಾಗೂ ವೈಫಲ್ಯದ ಚಿಹ್ನೆಗಳು, ಬಲಗಾಲಿನ ತುಂಬಾ ಬಾವು ಹಾಗು ಸೋಂಕು ಹಾಗೂ ಮೂಳೆಯ ದೌರ್ಬಲ್ಯತೆ.. ಇದರಿಂದ ಓಡಾಡಲೂ ಆಗದೇ ಹಾಸಿಗೆ ಹಿಡಿಯುವಂತಾಗಿತ್ತು.
ಕೇಸ್ 4) 40 ವರ್ಷದ ಮಹಿಳೆಗೆ, ಅನಿಯಂತ್ರಿತ ಮಧುಮೇಹದೊಂದಿಗೆ, ರಕ್ತದಲ್ಲಿ ಏರುಪೇರೂ ಶುರುವಾಗಿ, ರಕ್ತದೊತ್ತಡ ಅತಿಯಾಗಿ ಕುಗ್ಗಿ, ಜೊತೆಗೆ ಶ್ವಾಸಕೋಶ ಹಾಗೂ ಮೂತ್ರಕೋಶಗಳ ಸೋಂಕು ತಗುಲಿ, ರಕ್ತವೇ ಸೋಂಕಿತವಾಗಿ, ಕೆಂಪು ರಕ್ತಕಣಗಳ ಕೊರತೆಯೂ ಉಂಟಾಗಿ, ಹೃದಯ ದೌರ್ಬಲ್ಯತೆ ಇದ್ದು, ಒಂದೇ ಸಮಯಕ್ಕೆ ವಿವಿಧ ಅಂಗಗಳ ಕಾರ್ಯವೈಫಲ್ಯವೂ ಉಂಟಾಗಿತ್ತು. ಇದರಿಂದ ರೋಗಿ ತೀವ್ರವಾಗಿ ಭಯ ಪೀಡಿತರಾಗಿ, ಉಸಿರಾಡಲೂ ಕಷ್ಟಪಡುತ್ತಿದ್ದರು
ಈ ಎಲ್ಲಾ ರೋಗಿಗಳನ್ನು, ತೀವ್ರ ನಿಗಾ ಘಟಕದಲ್ಲಿಟ್ಟು, NIV ವೆಂಟಿಲೇಟರ್ ಬಳಸಿ, ಅತಿ ಕಾಳಜಿಯಿಂದ ಪರಿಣಾಮಕಾರಿಯಾದ ಔಷಧಿಗಳನ್ನು ನೀಡಿ ಚೇತರಿಸಿಕೊಳ್ಳುವಂತೆ, ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ವರ್ಗ ನೋಡಿಕೊಂಡಿತು.
ಕೊರೊನಾದಿಂದ ಸತ್ತವರ ಮುಖವನ್ನೂ ನೋಡಲು ಹೆದರಿಕೊಳ್ಳುತ್ತಿದ್ದ ಸಮಾಜದಲ್ಲಿ ಸೋಂಕನ್ನು ಅತಿಯಾಗಿ ಹರಡಬಲ್ಲ ಈ ಮೇಲ್ಕಂಡ ರೋಗಿಗಳ ಪೂರ್ತಿ ಶುಶ್ರೂಷೆ, ಶ್ವಾಸಕೋಶದ ಆರೈಕೆ, ಉಣಿಸುವಿಕೆ, ಮೂತ್ರ-ಮಲದ ವಿಲೇವಾರಿ.. ಎಲ್ಲವೂ ಈ ಆಸ್ಪತ್ರೆಯ ಸಿಬ್ಬಂದಿಗಳ ಪಾಲಿಗೆ ಬಂದ ಕರ್ತವ್ಯವಾಗಿ ಹೋಯಿತು ಎಂಬುದನ್ನು ಜನರು ಇಲ್ಲಿ ನೆನಪಿಸಿಕೊಳ್ಳತಕ್ಕದ್ದು! ಈ ಚಿಕಿತ್ಸೆಯನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರಲು ಚತುರ, ಕುಶಾಗ್ರಮತಿಗಳ ತಂಡವೇ ಇತ್ತು.. ಈ ತಂಡದಲ್ಲಿ ತೀವೃ ನಿಗಾ ಘಟಕದ ಪರಿಣತ ವೈದ್ಯರು, ಸೋಂಕು ಕಾಯಿಲೆಗಳ ಪರಿಣಿತರು, ಶ್ವಾಸಕೋಶ ತಜ್ಞರು, ಹೃದಯ ತಜ್ಞರು, ಶಾರೀರಿಕ ವೈದ್ಯರು ಎಲ್ಲರೂ ಇದ್ದರು. ಈ ಹಿರಿಯ, ಕಿರಿಯ ವೈದ್ಯರುಗಳು ಕೆ.ಎಂ.ಸಿ., ಮಂಗಳೂರು ಹಾಗೂ ವೆನ್ಲಾಕ್ ಆಸ್ಪತ್ರೆಯ ಸಿಬ್ಬಂದಿಗಳಾಗಿದ್ದರು.
ಇವರೊಡನೆ ಕೈ ಹಿಡಿದು ನಡೆಸಲು ಕೇಂದ್ರದಿಂದ ನೇಮಿತ ಬೆಂಗಳೂರಿನ ಪರಿಣಿತ ವೈದ್ಯರ ಗುಂಪೊಂದು (E-Team) ಅಂತರ್ಜಾಲದ ಮೂಲಕ, ದೂರದಿಂದಲೇ ಮಾರ್ಗದರ್ಶನವನ್ನೂ ನೀಡಿತು. ಸ್ನಾತಕೋತರ ವಿದ್ಯಾರ್ಥಿ ವೈದ್ಯರುಗಳು ಜೀವರಕ್ಷಕ ಕವಚಗಳೊಂದಿಗೆ, ಹಗಲು ರಾತ್ರಿಯೆನ್ನದೆ, ಸತತ ಆರು ಗಂಟೆಗಳ ಸರದಿಯಲ್ಲಿ, ರೋಗಿಗಳನ್ನು ಎಡೆಬಿಡದೇ ಶುಶ್ರೂಷೆಗೈದರು. ವಾರ್ಡಿನಲ್ಲಿ ಕೆಲಸ ಮಾಡುವ ನರ್ಸ್‍ಗಳು, ಆಯಾಗಳು, ದಾದಿಯರು, ನೈರ್ಮಲ್ಯ ಕಾರ್ಮಿಕರು, ಎಲ್ಲರೂ ಈ ರೋಗಿಗಳ ನಿಕಟ ಸಂಪರ್ಕದಲ್ಲಿದ್ದೂ ಕೊಂಡೇ, ಅವರನ್ನೆಲ್ಲಾ ನೋಡಿಕೊಂಡರು.
ಜಿಲ್ಲಾ ಆಡಳಿತ ಮಂಡಳಿ, ಜಿಲ್ಲಾ ವೈದ್ಯಾಧಿಕಾರಿ, ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಹಿರಿಯ ತಲೆಗಳು, ಹಾಗೂ ಯೋಜನಾ ಮಂಡಳಿಯ ಅಧ್ಯಕ್ಷರಾದ ಡಾ|| ಜಾನ್ ರಾಮಪುರಮ್.. ಇವರೆಲ್ಲರ ಬೇ-ಷರತ್ತು ಬೆಂಬಲ ಹಾಗೂ ಸಹಾಯ ಸದಾಕಾಲ ಇದ್ದ ಕಾರಣದಿಂದಲೇ, ಈ ರೋಗಿಗಳ ಚಿಕಿತ್ಸೆ ಹಾಗೂ ವಿಸ್ಮಯಕಾರಿ ಚೇತರಿಕೆ ಸಾಧ್ಯವಾಯಿತೇನೋ?,
ಅಂತೂ ಇಂತೂ ಈ ಎಲ್ಲಾ ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಹೊರಬಂದು ತಮ್ಮ-ತಮ್ಮ ಮನೆ ಸೇರುವಂತಾದಾಗಲೇ ಕಳಿಸಿಕೊಡುವವರ ಮುಖದಲ್ಲಿ ನಿರಾಳತೆ.. ಕರೆದುಕೊಂಡು ಹೋಗುವವರಲ್ಲಿ ಧನ್ಯತೆ ಮೂಡಿದ್ದು .