ಮಂಗಳೂರುಕರಾವಳಿ ಜಿಲ್ಲೆಗಳಲ್ಲಿ ಕೋವಿಡ್-19 ಸೋಂಕಿತರು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಬುಧವಾರ ರಾತ್ರಿಯಿಂದ (ಜುಲೈ 15 ರಿಂದ ಜುಲೈ 22) ಒಂದು ವಾರಗಳ ಕಾಲ ಲಾಕ್ ಡೌನ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.

ಇಂದು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಜಿಲ್ಲೆಗಳ ಕೋವಿಡ್ ನಿಯಂತ್ರಣದ ಕುರಿತು ಮಾಹಿತಿ ಪಡೆದರು. ಸಂಪೂರ್ಣ ಜಿಲ್ಲೆಯಲ್ಲಿ ಲಾಕ್ ಡೌನ್ ಮಾಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ, ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಜಿಲ್ಲಾಡಳಿತ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದರು. ಜನಪ್ರತಿನಿಧಿಗಳ ಜೊತೆಗೆ ನಿರ್ಧಾರ ಮಾಡುವಂತೆ ಸಿಎಂ ಸೂಚಿಸಿದ್ದರು ಎನ್ನಲಾಗಿದೆ. 

ಸಭೆಯ ಬಳಿಕ ಮಾಹಿತಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು, ಬುಧವಾರ ರಾತ್ರಿಯಿಂದ ಒಂದು ವಾರಗಳ ಲಾಕ್ ಡೌನ್ ಮಾಡಲಾಗುವುದು. ಹಾಗಾಗಿ ಒಂದು ವಾರಗಳ ತನಕ ಅವಶ್ಯಕತೆ ಇರುವಷ್ಟು ಎಲ್ಲಾ ಸಾಮಾಗ್ರಿಗಳನ್ನು ಮತ್ತು ಮೂಲಭೂತ ಅವಶ್ಯಕತೆಗಳನ್ನು ಖರೀದಿ ಮಾಡಿ ಕೊಳ್ಳಬೇಕು ಎಂದು ಜನರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ. ಲಾಕ್ ಡೌನ್ ಮಾರ್ಗಸೂಚಿಗಳನ್ನು ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಯವರು ಬಿಡುಗಡೆ ಮಾಡಲಿದ್ದಾರೆ ಎಂದರು.

ಕರಾವಳಿ ಜಿಲ್ಲೆಗಳ್ಲಲಿ ಕೋವಿಡ್-19 ಸೋಂಕಿತರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಅದರಲ್ಲೂ ಹೊರ ರಾಜ್ಯ, ರಾಷ್ಟ್ರದ ಪ್ರಯಾಣಿಕರಿಗಿಂತ ಸ್ಥಳೀಯರಲ್ಲಿ ಹೆಚ್ಚಾಗಿ ಕೋವಿಡ್ 19 ಸೋಂಕು ಕಾಣಿಸಿಕೊಳ್ಳುತ್ತಿದೆ. ಕೋವಿಡ್ ಸಂಕಷ್ಟದ ಮಧ್ಯೆ ಮಳೆಗಾಲವೂ ಆರಂಭವಾದ ಕಾರಣ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಾಗುವ ಭೀತಿ ಎದುರಾಗಿದೆ. ಇದರಿಂದ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದ ಲಾಕ್ ಡೌನ್ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದರು.