ದಕ್ಷಿಣ ಕನ್ನಡ (ಜೂನ್ 26):- ದ.ಕ ಜಿಲ್ಲೆಯಲ್ಲಿ ಇಂದು ಮತ್ತೆ ಕೊರೋನಾ ಸ್ಪೋಟಗೊಂಡಿದೆ. ಜಿಲ್ಲೆಯಲ್ಲಿ ಇಂದು 35 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಜನತೆಗೆ ಆಘಾತ ಮೂಡಿಸಿದೆ. ಸೌದಿ ಸೇರಿ ಹೊರರಾಜ್ಯದ ಪ್ರಯಾಣಿಕರಿಗೆ ಪಾಸಿಟಿವ್ ಕಂಡು ಬಂದಿದ್ದು, ಪ್ರಾಥಮಿಕ ಸಂಪರ್ಕದಿಂದಲೂ ಹಲವರಿಗೆ ಪಾಸಿಟಿವ್ ಬಂದಿರುವ ಸಾಧ್ಯತೆಗಳಿವೆ ಎಂದು ಆರೋಗ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ. ನಗರದ ಕೆಲವು ಅಂಗಡಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಕೂಡಾ ಕೊರೊನಾ ಬಂದಿದ್ದು, ಅಂಗಡಿಗಳನ್ನೇ ಸೀಲ್ ಡೌನ್ ಮಾಡಲಾಗಿದೆ. ಆದರೆ ಕೆಲವು ಕಿಡಿಗೇಡಿಗಳು ಗಾಳಿ ಸುದ್ದಿಗಳನ್ನು ಹಬ್ಬುತ್ತಿದ್ದು, ಇವುಗಳನ್ನು ನಂಬಬಾರದು ಎಂದು ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ. ನಗರದಲ್ಲಿ ಈಗಾಗಲೇ ಬಂದರು ಧಕ್ಕೆಯಲ್ಲಿ ಮೀನು ಮಾರಾಟ ಮಾಡುವ ವ್ಯಾಪಾರಿಗಳಿಗೂ ಕೊರೊನಾ ಬಂದಿರುವುದು, ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರಿಗೂ ಕೊರೊನಾ ಬಂದಿರುವುದು ಕೂಡಾ ಆತಂಕ ಹೆಚ್ಚಾಗುವಂತೆ ಮಾಡಿದೆ.
ಒಟ್ಟಿನಲ್ಲಿ ಮಂಗಳೂರಿನಲ್ಲಿ ಕೊರೊನಾ ನಿಯಂತ್ರಣ ಕೈಮೀರಿ ಹೋಗುವಂತೆ ಕಂಡು ಬರುತ್ತಿದೆ. ಇನ್ನು ಮಂಗಳೂರಿನ ಕ್ಲಿನಿಕ್ ಒಂದರಲ್ಲಿ ನರ್ಸ್ ಕೆಲಸ ನಿರ್ವಹಿಸುತ್ತಿದ್ದ ಕಟೀಲು ಪಂಚಾಯತ್ ವ್ಯಾಪ್ತಿಯ ಮಹಿಳೆಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಕಟೀಲು ಬಲ್ಲಣ ಮಾರಡ್ಕ ಎಂಬಲ್ಲಿನ 35 ವರ್ಷ ಪ್ರಾಯದ ಮಹಿಳೆಯ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ. ಮಂಗಳೂರಿನ ವೈದ್ಯರಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದ ಕಾರಣ ಅಲ್ಲಿನ ಸಿಬ್ಬಂದಿಯನ್ನು ತಪಾಸಣೆ ನಡೆಸಿದಾಗ ಮಹಿಳೆಯಲ್ಲಿ ಪಾಸಿಟಿವ್ ಕಂಡುಬಂದಿದೆ. ಮನೆಯಲ್ಲಿ ಒಟ್ಟು ಏಳು ಮಂದಿ ವಾಸಿಸುತ್ತಿದ್ದು ಮನೆಯನ್ನು ಸೀಲ್ ಡೌನ್ ಮಾಡಿ ಮನೆಯಲ್ಲಿ ಇದ್ದವರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಸ್ಥಳಕ್ಕೆ ಆಶಾ ಕಾರ್ಯಕರ್ತೆಯರು, ಮೂಲ್ಕಿ ಠಾಣಾಧಿಕಾರಿ ಜಯರಾಮ ಗೌಡ ಭೇಟಿ ನೀಡಿದ್ದಾರೆ.