ದಕ್ಷಿಣ ಕನ್ನಡ:- ಕೊರೋನಾ ಭೀತಿ ನಡುವೆ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ಹಿಂದೇಟು ಹಾಕುತ್ತಿರುವ ಅರೆ ಮನಸ್ಸಿನ ಪೋಷಕರು ಹಾಗೂ ವಿದ್ಯಾರ್ಥಿಗಳ ನಡುವೆ ದಕ್ಷಿಣಕನ್ನಡ ಜಿಲ್ಲೆಯ ಕೈ ಯಿಲ್ಲದ ಬಾಲಕನೊರ್ವ ಕಾಲಲ್ಲಿ ಪರೀಕ್ಷೆ ಬರೆದು ಶಿಕ್ಷಣ ಸಚಿವರ ಗಮನ ಸೆಳೆದಿದ್ದಾನೆ. ಬಂಟ್ವಾಳ ತಾಲೂಕಿನ ಖಾಸಗಿ ಪ್ರೌಢ ಶಾಲೆಯೊಂದರಲ್ಲಿ ಪರೀಕ್ಷೆಗೆ ಹಾಜರಾದ ಕೌಶಿಕ್ ಯಾರ ಸಹಾಯವನ್ನೂ ಪಡೆಯದೇ ತನ್ನ ಕಾಲುಗಳ ಸಹಾಯದಿಂದ ಎಸ್ ಎಸ್ ಎಲ್ ಸಿಯ ಮೊದಲ ಪರೀಕ್ಷೆಯನ್ನ ಬರೆದಿದ್ದಾನೆ. ಹುಟ್ಟು ವಿಕಲಚೇತನಾದ ಕೌಶಿಕ್ , ಪರೀಕ್ಷಾ ಕೇಂದ್ರದಲ್ಲಿ ನೆಲದ ಮೇಲೆ ಕೂತು ಕಾಲಿನಲ್ಲೇ ಪರೀಕ್ಷೆ ಬರೆದಿದ್ದಾನೆ. ಕೌಶಿಕ್ ಪರೀಕ್ಷೆ ಬರೆದ ಫೋಟೋ ಟ್ವಿಟರ್ ನಲ್ಲಿ ಹಂಚಿಕೊಂಡ ಶಿಕ್ಷಣ ಸಚಿವ ಸುರೇಶ್ ಕುಮಾರ್, ಆತ್ಮವಿಶ್ವಾಸದಿಂದ ಉತ್ತರ ಬರೆದ ಈ ಪೋರ ಕೌಶಿಕ್ ನಿಗೆ ನನ್ನ ಹೃದಯಪೂರ್ವ ಮೆಚ್ಚುಗೆ. ಇಂತಹ ವ್ಯಕ್ತಿಗಳು ಬದುಕಿನ ಸಾರ್ಥಕ ಅರ್ಥ ಕಲ್ಪಿಸುತ್ತಾರೆ. ಸಮಾಜದ ಎಲ್ಲ ಮಾನವೀಯ ನಿಲುವುಗಳನ್ನು ಸಮರ್ಥಿಸುತ್ತಾರೆ ಅಂತ ಟ್ವೀಟ್ ಮಾಡಿದ್ದಾರೆ.