'ದೇವರಿರಲಿಲ್ಲ'
ಅಲ್ಲಿ ದೇವರು ಇರಲಿಲ್ಲ
ಜೀವಗಳು ರಕ್ತದ ಮಡುವಲ್ಲಿ
ಪ್ರಾಣ ಬಿಡುವಾಗ
ಆತ್ಮಸಾಕ್ಷಿ ಇರದ ದೇವರು
ರಕ್ಷಣೆಗೆ ಬರಲಿಲ್ಲ!
ಶುಭದಿನದ ಶುಭಾಶಯಕೆ
ಬೆಲೆ ಕೊಡಲಿಲ್ಲ
ಕುರುಡು ದೇವರು!
ಕಟುಕರ ಕುರುಹ ಹುಡುಕಿ
ತಡೆಯದೇ ಸುಮ್ಮನಿದ್ದ
ಭಗವಂತನ ನಂಬಿ ಬಿಟ್ಟರು
ಅವನದೇ ಪಾದಾರವಿಂದಗಳಿಗೆ
ಪ್ರಾಣವನೆ ಕೊಟ್ಟರು!
ಕಾಯುವನೆಂಬ ಭರವಸೆಯಲಿ
ಪರಮಾತ್ಮನ ಮೊರೆ ಹೋದವರು
ಹಾಗೇ ಸ್ವರ್ಗಕ್ಕೇ ಹೋದರು
ದೇವರ ನಾಮದಲಿ ರಕುತವನು
ಅವನ ಹೆಸರಿಗೇ ಧಾರೆಯೆರೆದು!
ಅನವರತನ ಕಾಲಡಿಯಲೇ
ನರಮೇಧ ನಡೆಯಿತು
ಇರುವವರನು ಅಗಲಿದ
ಆತ್ಮಗಳಿಗೆ ಶಾಂತಿ ಕರುಣಿಸಲು
ಈಗ ಅದೇ ದೇವರ ಮುಂದೆ
ಕೋರಿಕೆಯ ಸಾಲು ಹಣತೆಗಳು!
ನಾವು ದೇವರನ್ನು
ಬಿಟ್ಟು ಕೊಡುವುದಿಲ್ಲ!
ಅವನ ತಪ್ಪುಗಳಿಗೆ
ಬೊಟ್ಟು ಮಾಡುವುದಿಲ್ಲ!
ಅದೇ ಸಲುಗೆ ಅವನಿಗೆ!
ಕರೆದಾಗ ಬರುವುದಿಲ್ಲ
ಹೋದರೆ ಅವನು ಇರುವುದಿಲ್ಲ!
ನೋವಿದೆ..ನೋಯುತ್ತಿದೆ ಮನಸು
ವಿಲವಿಲ ನರಳಾಡಿದ
ಜೀವಗಳ ಆಕ್ರಂದನಕೆ! ನಂಬಿಕೆಗೆ ಅಂಕುಶವಿಲ್ಲ..
ಅವನಿರುತಿದ್ದರೆ
ರಕ್ತಪಾತ ನಡೆಯುತ್ತಿರಲಿಲ್ಲ!
- ಅಹಂ ಕಾ.ವೀ.ಕೃಷ್ಣದಾಸ್
(ಯಶುಪ್ರಿಯ ಪಕ್ಷಿಕೆರೆ)