ಉಡುಪಿ,(ಮಾಚ್19) : ಉಡುಪಿ ಜಿಲ್ಲೆ ಶಿಕ್ಷಣದಲ್ಲಿ ಯಾವಾಗಲೂ ನಂ 1 ಆಗಿರಬೇಕು. ಈ ಬಾರಿಯೂ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಹಿಂದಿನ ವರ್ಷದ ಫಲಿತಾಂಶಕ್ಕಿoತಲೂ , ಈ ವರ್ಷ ವಿದ್ಯಾರ್ಥಿಗಳು ಇನ್ನೂ ಹೆಚ್ಚು ಅಂಕ ಗಳಿಸಿ, ಈ ಬಾರಿಯೂ ರಾಜ್ಯದಲ್ಲಿ ಮೊದಲನೇ ಸ್ಥಾನ ಗಳಿಸುವಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಶ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.

ಅವರು ನಗರದ ಎಂ.ಜಿ.ಎo ಪದವಿಪೂರ್ವಕಾಲೇಜು ಕುಂಜಿಬೆಟ್ಟು ಉಡುಪಿಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ, ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಹಾಗೂ ಎಂ.ಜಿ.ಎo ಪದವಿ ಪೂರ್ವಕಾಲೇಜುಉಡುಪಿ ಇವರ ಸಹಯೋಗದಲ್ಲಿ ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ 2020-21 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿ.ಯು.ಸಿ ಫಲಿತಾಂಶ ಸುಧಾರಣಾ ವಿಶೇಷ ಸಭೆಯಲ್ಲಿಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ಶಿಕ್ಷಕರ ಶ್ರಮದಿಂದ ಉಡುಪಿ ಜಿಲ್ಲೆ ಶಿಕ್ಷಣದಲ್ಲಿ ರಾಜ್ಯಕ್ಕೇ ಮಾದರಿ ಜಿಲ್ಲೆಯಾಗಿದೆ. ಉಪನ್ಯಾಸಕರು ಉತ್ತಮವಾಗಿ ಬೋಧಿಸಿ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಬರುವಲ್ಲಿ ಶ್ರಮ ವಹಿಸಿದ್ದಾರೆ ಎಂದ ಅವರು ಕೆಲವು ಕಾಲೇಜುಗಳಲ್ಲಿ ಶೇಕಡಾ 90 ಹಾಗೂ ಶೇಕಡಾ 100 ಫಲಿತಾಂಶ ಬಂದಿದೆ. ಈ ಫಲಿತಾಂಶದ ಸಾಧನೆಯಿಂದ ಜಿಲ್ಲೆ ನಂ 1 ಬರಲು ಸಾಧ್ಯವಾಯಿತು. ಆದರಿಂದ ಆಯಾಕಾಲೇಜಿನ ಪ್ರಾಂಶುಪಾಲರಿಗೆ, ಉಪನ್ಯಾಸಕರು ಅಭಿನಂದನೀಯ ಎಂದರು. ಕಾಲೇಜಿನ ಪ್ರಾಂಶುಪಾಲರು ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಹಿನ್ನಲೆ ಗಮನ ಹರಿಸಿ, ಕಾಲೇಜಿನಲ್ಲಿ ಫಲಿತಾಂಶ ಕಡಿಮೆ ಬರಲು ಕಾರಣ ತಿಳಿದುಕೊಂಡು ಆ ನಿಟ್ಟಿನಲ್ಲಿ ಹೆಚ್ಚು ಪ್ರಯತ್ನ ಮಾಡಬೇಕು ಎಂದರು. ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಇನ್ನು ಎರಡು ತಿಂಗಳಿರುವುದರಿoದ ಹೆಚ್ಚು ಪರೀಕ್ಷೆಗಳನ್ನು ಮಾಡದೇ, ಪೂರ್ವ ಸಿದ್ಧತಾ ಪರೀಕ್ಷೆಯನ್ನು ಮಾಡಬೇಕು ಎಂದು ಪ್ರಾಂಶುಪಾಲರಿಗೆ ಸೂಚನೆ ನೀಡಿದರು. 

90% ವಿಧ್ಯಾರ್ಥಿಗಳು ಈಗಾಗಲೇ ಕಾಲೇಜಿಗೆ ಹಾಜರಾಗಿದ್ದು , ಹಾಜರಾಗದ 10% ವಿಧ್ಯಾರ್ಥಿಗಳ ಸಮಸ್ಯೆಯನ್ನು ಗಮನ ಹರಿಸಿ ಅವರಿಗೆ ಪ್ರೋತ್ಸಾಹ ಹಾಗೂ ನೆರವುವನ್ನು ನೀಡಬೇಕು ಎಂದರು.ಕಾಲೇಜಿಗೆ ಬರದೇ ಇರುವ ವಿದ್ಯಾರ್ಥಿಗಳ ಮನೆಗೆ ಹೋಗಿ ಪೋಷಕರಿಗೆ ಮಾಹಿತಿ ನೀಡಬೇಕು . ಪಿ.ಯು.ಸಿ ಹಂತ ವಿದ್ಯಾರ್ಥಿಗಳ ಜೀವನದ ಬಹಳ ಮುಖ್ಯ ಹಂತವಾಗಿದ್ದು, ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲು ಶಿಕ್ಷಕರು ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದು ಜಿಲ್ಲಾದಿಕಾರಿ ಜಿ.ಜಗದೀಶ್ ಹೇಳಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಭಗವಂತ ಕಟ್ಟಿಮನಿ ಮಾತನಾಡಿ, ಕಳೆದ ವರ್ಷಕ್ಕಿಂತ ಈ ಬಾರಿ ಉಡುಪಿ ಜಿಲ್ಲೆಯಲ್ಲಿ ಫಲಿತಾಂಶ ಸುಧಾರಣೆಯಾಗುವಲ್ಲಿ ಕಾರ‍್ಯನಿರ್ವಹಿಸಬೇಕು. ದ್ವೀತಿಯ ಪಿ.ಯು.ಸಿ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆಗೊಂಡಿದ್ದು, ಪರೀಕ್ಷೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತೆ ಮಾಡಬೇಕು. ಜಿಲ್ಲೆಯಲ್ಲಿಒಟ್ಟು 105 ಕಾಲೇಜುಗಳಿದ್ದು, ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಕಾಲೇಜುಗಳಲ್ಲಿ ಉತ್ತಮ ಫಲಿತಾಂಶ ಬರುವ ಬಗ್ಗೆ ಗಮನವಹಿಸಬೇಕು ಎಂದರು.

ಈ ಬಾರಿ 3394 ವಿದ್ಯಾರ್ಥಿನಿಯರು ಹಾಗೂ 7253 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ 14647 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ಮಾಡಿ ಪೂರ್ವ ಸಿದ್ಧತೆಯನ್ನು ಮಾಡಬೇಕು. ಕೆಲವೊಂದು ಕೌಟುಂಬಿಕ ವಿಚಾರಗಳಿಂದ ವಿದ್ಯಾರ್ಥಿಗಳನ್ನು ದತ್ತುಸ್ವಿಕಾರದಡಿಯಲ್ಲಿ ವಿದ್ಯಾರ್ಥಿಗಳಿಗೆ ಮೂಲಸೌಲಭ್ಯಗಳನ್ನು ಕೊಟ್ಟು ಅಂತಹ ವಿದ್ಯಾರ್ಥಿಗಳಿಗೆ ಸಹಕರಿಸಿ ಜಿಲ್ಲೆಗೆ ಉತ್ತಮ ಫಲಿತಾಂಶ ಬರುವಲ್ಲಿ ಶ್ರಮವಹಿಸಬೇಕು ಎಂದರು.

ಉಡುಪಿ ಜಿಲ್ಲಾ ಪ್ರಾಂಶುಪಾಲ ಸಂಘದಅಧ್ಯಕ್ಷ ಮಾಧವ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಸ್.ವಿಎಸ್‌ ಕಾಲೇಜಿನ ಪ್ರಾಂಶುಪಾಲ ದಯಾನಂದ ಪೈ, ಪ್ರಾಂಶುಪಾಲರ ಸಂಘದ ಖಜಾoಚಿ ರಮೇಶ್ ಹಾಗೂ ವಿವಿಧ ಕಾಲೇಜಿನ ಪ್ರಾಂಶುಪಾಲರು ಉಪಸ್ಥಿತರಿದ್ಧರು. ಸಭೆಯಲ್ಲಿ ಎಂ.ಜಿ.ಎo ಕಾಲೇಜಿನ ಪ್ರಾಂಶುಪಾಲೆ ಮಾಲತಿದೇವಿ ಸ್ವಾಗತಿಸಿದರು. ಎಸ್.ವಿ.ಎಚ್ ಪದವಿ ಕಾಲೇಜಿನ ಪ್ರಾಂಶುಪಾಲ ಪುಂಡರಿಕಾಕ್ಷ ಕೊಡಂಚ ನಿರೂಪಿಸಿ ವಂದಿಸಿದರು