ಮಂಗಳೂರು: ಹಿರಿಯ ಲೆಕ್ಕ ಪರಿಶೋಧಕ,  ಕೆನರಾ ಹೈಸ್ಕೂಲ್ ಎಸೋಸಿಯೇಶನ್ ಅಧ್ಯಕ್ಷಎಸ್. ಎಸ್. ಕಾಮತ್ (ಸಾಂತಯ್ಯ ಶ್ರೀನಿವಾಸ ಕಾಮತ್) (81ವರ್ಷ) ಅಲ್ಪಕಾಲದ ಅಸೌಖ್ಯದಿಂದ ಜು.28ರಂದು ಮಂಗಳವಾರ ನಗರದ ಲೇಡಿ ಹಿಲ್‍ನಲ್ಲಿರುವ ತಮ್ಮ ಕಮಲ ನಿವಾಸದಲ್ಲಿ ನಿಧನ ಹೊಂದಿದರು. ಅವರು ಪತ್ನಿ, ಓರ್ವ ಪುತ್ರ, ಪುತ್ರಿಯನ್ನುಅಗಲಿದ್ದಾರೆ.

ಹಲವು ದಶಕಗಳಿಂದ  ವಾರಣಾಸಿ ಶ್ರೀ ಕಾಶೀಮಠ ಸಂಸ್ಥಾನದ ಲೆಕ್ಕ ಪರಿಶೋಧಕರಾಗಿಯೂ ಸೇವೆ ಸಲ್ಲಿಸುತ್ತಿದ್ದಅವರು ನಗರದ ಕರಂಗಲ್ಪಾಡಿಯಲ್ಲಿ ಕಾಮತ್‍ ಆ್ಯಂಡ್‍ ರಾವ್ ಲೆಕ್ಕ ಪರಿಶೋಧಕ ಸಂಸ್ಥೆಯ ಸ್ಥಾಪಕ ಹಿರಿಯ ಪಾಲುದಾರರಾಗಿದ್ದರು, ಕಳೆದ ಮೂರು ದಶಕಗಳಿಂದ ಕೆನರಾ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯಲ್ಲಿ ಕೆನರಾ ಕಾಲೇಜಿನ ಪ್ರಬಂಧಕರಾಗಿ, ಆಡಳಿತ ಮಂಡಳಿಯ ಉಪಾಧ್ಯಕ್ಷರಾಗಿದ್ದ ಎಸ್.ಎಸ್. ಕಾಮತ್ 2011ರಿಂದ ಅಧ್ಯಕ್ಷರಾಗಿದ್ದರು.

ಲೆಕ್ಕ ಪರಿಶೋಧಕರಾಗಿ ಐದೂವರೆ ದಶಕಗಳ ವೃತ್ತಿ ಜೀವನದಲ್ಲಿ ಅವರು 1971ರಲ್ಲಿ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಮಂಗಳೂರು ಶಾಖೆಯ ಸ್ಥಾಪಕ ಕೋಶಾಧಿಕಾರಿಯಾಗಿ, ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, 1984-88ರ ಅವಧಿಯಲ್ಲಿ ಅಧ್ಯಕ್ಷರಾಗಿದ್ದರು. ಅವರ ಅಧ್ಯಕ್ಷಾವಧಿಯಲ್ಲಿ ಮಂಗಳೂರಿನಲ್ಲಿ ಸಿಎ ಪರೀಕ್ಷಾಕೇಂದ್ರ, ಸಿಎ ಪರಿಕ್ಷಾರ್ಥಿಗಳಿಗೆ ಕೋಚಿಂಗ್ ತರಗತಿಗಳ ಆರಂಭ ಸೇರಿದಂತೆ ಪ್ರಗತಿಪರ ಚಟುವಟಿಕೆಗಳು ನಡೆದಿದ್ದವು. ನೂರಕ್ಕೂಅಧಿಕ ಲೆಕ್ಕಪರಿಶೋಧಕರನ್ನು ರೂಪಿಸುವಲ್ಲಿ ಅವರು ಸಕ್ರಿಯಕೊಡುಗೆ ಸಲ್ಲಿಸಿದ್ದರು.

ಮಂಗಳೂರಿನ ಕೆನರಾ ಛೇಂಬರ್‍ ಆಫ್‍ ಕಾಮರ್ಸ್‍ ಆ್ಯಂಡ್ ಇಂಡಸ್ಟ್ರಿಯ ವಜ್ರಮಹೋತ್ಸವ ವರ್ಷದ ಅಧ್ಯಕ್ಷರಾಗಿದ್ದ ಎಸ್.ಎಸ್.ಕಾಮತ್, ಮಂಗಳೂರು ರೋಟರಿಯ ಮಾಜಿ ಅಧ್ಯಕ್ಷರಾಗಿ, ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಯ ಸಂಘಟನೆಯ ಕೋಶಾಧಿಕಾರಿಯಾಗಿ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ರಂಗದಲ್ಲಿ ಗಮನಾರ್ಹ ಕೊಡುಗೆ ನೀಡಿದ್ದರು.

ಕನ್ಯಾನ ಭಾರತ ಸೇವಾಶ್ರಮದ ಪ್ರಧಾನ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದ ಅವರು ಅನೇಕ ದೇವಾಲಯಗಳು, ಸೇವಾ ಸಂಸ್ಥೆಗಳ ಲೆಕ್ಕ ಪರಿಶೋಧಕರಾಗಿ ಶುಲ್ಕರಹಿತ ಸೇವೆ ಸಲ್ಲಿಸಿದ್ದರು.

ಎಸ್. ಎಸ್. ಕಾಮತ್‍ಅವರ ನಿಧನಕ್ಕೆಕೆನರಾ ಹೈಸ್ಕೂಲ್ ಎಸೋಸಿಯೇಶನ್ ಪರವಾಗಿ ಕಾರ್ಯದರ್ಶಿ ಎಂ. ರಂಗನಾಥ ಭಟ್ ಸಂತಾಪ ವ್ಯಕ್ತಪಡಿಸಿದ್ದಾರೆ