ಬಂಟ್ವಾಳ :ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ, ವಕೀಲರ ಸಂಘ ಬಂಟ್ವಾಳ, ಸಾರ್ವಜನಿಕ ಶಿಕ್ಷಣ ಇಲಾಖೆ, ಬಂಟ್ವಾಳ ತಾಲೂಕು ಪಂಚಾಯತ್, ಕಂದಾಯ ಇಲಾಖೆ ಹಾಗೂ ಇತರ ಸರಕಾರಿ ಇಲಾಖೆಗಳ ಸಹಯೋಗದೊಂದಿಗೆ "ಕಾನೂನು ಸಾಕ್ಷರತಾ ರಥ ಮತ್ತು ಸಂಚಾರಿ ನ್ಯಾಯಾಲಯ"ಕ್ಕೆ ಮಂಗಳವಾರ ಬಂಟ್ವಾಳ ನ್ಯಾಯಾಲಯದ ಆವರಣದಲ್ಲಿ ಚಾಲನೆ ನೀಡಲಾಯಿತು.
ಹಿರಿಯ ಸಿವಿಲ್ ನ್ಯಾಯಾಧೀಶ ಮುಹಮ್ಮದ್ ಇಮ್ತಿಯಾಝ್ ಅಹ್ಮದ್ ಅವರು ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ ನೀಡಿ ಮಾತನಾಡಿ, ಇಂದಿನಿಂದ ಮಾ. 29ರವರೆಗೆ ದಿನಕ್ಕೆ ಮೂರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ರಥವು ಪ್ರತೀ ಗ್ರಾಮ ಪಂಚಾಯತ್ ಹಾಗೂ ಶಾಲೆಯ ವಠಾರದಲ್ಲಿ ಚಲಿಸುವುದರಿಂದ ಪಿಡಿಒ, ಸಿಡಿಪಿಒ ಹಾಗೂ ಶಿಕ್ಷಣ ಇಲಾಖೆಯ ಸಹಕಾರ ಅಗತ್ಯವಾಗಿದ್ದು, ಕಾರ್ಯಕ್ರಮದ ಉದ್ದೇಶವನ್ನು ಯಶಸ್ವಿಗೊಳಿಸಬೇಕಾಗಿದೆ ಎಂದು ಶುಭಹಾರೈಸಿದರು.
ಪ್ಯಾನೆಲ್ ವಕೀಲ ಆಶಾಮಣಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ "ಮಹಿಳಾ ದೌರ್ಜನ್ಯ ಕಾಯ್ದೆ ಬಗ್ಗೆ" ಮಾತನಾಡಿ, ಮಹಿಳೆಯರಿಗೆ ರಕ್ಷಣಾ ಹಾಗೂ ಮಾನಸಿಕವಾಗಿ ಧೈರ್ಯವನ್ನು ತುಂಬಲು 2006ರಲ್ಲಿ ಈ ಕಾನೂನು ಜಾರಿಗೆ ತರಲಾಯಿತು. ಮಹಿಳೆಗೆ ಪುರುಷ ಸಮಾಜದಿಂದ ಮಾತ್ರ ದೌರ್ಜನ್ಯ ನಡೆಯುತ್ತಿಲ್ಲ. ನಮ್ಮನ್ನು ನಾವು ಅರ್ಥ ಮಾಡದೇ ಇರುವುದರಿಂದ ಮಹಿಳೆಯರಿಂದಲೂ ಮಾಸಿಕ, ದೈಹಿಕ ದೌರ್ಜನ್ಯವಾಗುತ್ತಿವೆ ಎಂದರು.
ದಾಂಪತ್ಯ ಜೀವನದಲ್ಲಿ ಯಾವುದೇ ಕಲಹಗಳು ಬಂದಾಗ ಅದನ್ನು ನ್ಯಾಯಾಲಯ ಕಟ್ಟಕಡೆಗೆ ತಾರದೇ ಕುಟುಂಬಸ್ಥರೊಂದಿಗೆ ಚರ್ಚಿಸಿ, ಧನ್ಯಾತ್ಮಕ ಪರಹಾರವನ್ನು ಕಂಡುಕೊಳ್ಳಬೇಕು ಎಂದ ಅವರು, ಮಹಿಳೆಯರಿಗಾಗಿ ಕಾನೂನು ಇದೆ ಎಂದು ಹೇಳಿ ಸಣ್ಣಪುಟ್ಟ ಸಮಸ್ಯೆಗಳು ಹಾಗೂ ಕ್ಷುಲ್ಲಕ ಕಾರಣಕ್ಕೆ ದೂರು ನೀಡುವ ಮೂಲಕ ಕಾನೂನನ್ನು ದುರುಪಯೋಗ ಮಾಡುವುದು ಸರಿಯಲ್ಲ. ನಿಜವಾಗಿಯೂ ದೌರ್ಜನ್ಯ ಎಸಗಿದ ಮಾತ್ರವೇ ದೂರು ನೀಡಬೇಕು. ಇಂತಹ ಸನ್ನಿವೇಶಗಳಲ್ಲಿ ನ್ಯಾಯಾಧೀಶರು ಸಂತ್ರಸ್ತ ಮಹಿಳೆಗೆ ನಾಯ ಒದಗಿಬೇಕಾಗಿದೆ ಹಾಗೂ ಬಾಕಿಯಿರುವ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥ ಮಾಡಬೇಕಾಗಿದೆ ಎಂದು ಅವರು ಮನವಿ ಮಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಹಾಗೂ ಸಿಡಿಪಿಒ ಹಿರಿಯ ಮೇಲ್ವಿಚಾರಕಿ ಉಷಾ ಕುಮಾರಿ ಎಂ. ಮಾತನಾಡಿದರು. ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು.ಈ ಸಂರ್ಭದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶಯಾದ ಪ್ರತಿಭಾ ಡಿ.ಎಸ್., ಶಿಲ್ಪಾ ಜಿ., ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ರಮೇಶ್ ಉಪಾಧ್ಯಾಯ ಹಾಜರಿದ್ದರು.ವಕೀಲ ನರೇಂದ್ರ ಭಂಡಾರಿ ಕಾನೂನು ಸಾಕ್ಷರತಾ ರಥದ ಬಗ್ಗೆ ಪ್ರಸ್ತಾವಿಸಿ, ಸ್ವಾಗತಿಸಿದರು. ವಕೀಲೆ ಶೈಲಜಾ ರಾಜೇಶ್ ವಂದಿಸಿದರು.ಕಾನೂನು ಸಾಕ್ಷರತಾ ರಥವು ಮಧ್ಯಾಹ್ನ ಕೊಡಂಗೆ ಸರಕಾರಿ ಪ್ರೌಢಶಾಲೆ ಆಗಮಿಸಿ, ಸಂಜೆ ಪುದು ಗ್ರಾಪಂ ವಠಾರದಲ್ಲಿ ಸಂಚರಿಸಿತು.