ಮಂಗಳೂರು:- ರೈತ ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳ ವಾಪಸಾತಿಗಾಗಿ,ಕಾರ್ಮಿಕರ ಹಕ್ಕುಗಳ ಸಂರಕ್ಷಣೆಗಾಗಿ, ಕೋವಿಡ್ ಸಂಕಷ್ಟದ ಪರಿಹಾರಕ್ಕಾಗಿ,15 ಅಂಶಗಳ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯದ ಕಾರ್ಮಿಕ ವರ್ಗ ಹಮ್ಮಿಕೊಂಡಿರುವ ವಿಧಾನಸೌಧ ಚಲೋ ಕಾರ್ಯಕ್ರಮವನ್ನು ಬೆಂಬಲಿಸಿ, CITU ನೇತ್ರತ್ವದಲ್ಲಿ ನಗರದಲ್ಲಿಂದು (24-09-2020) ಮಿನಿ ವಿಧಾನಸೌಧದ ಎದುರು ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ CITU ದ.ಕ.ಜಿಲ್ಲಾಧ್ಯಕ್ಷರಾದ ಜೆ.ಬಾಲಕ್ರಷ್ಣ ಶೆಟ್ಟಿಯವರು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಾರ್ಮಿಕ ವರ್ಗದ ಮೇಲೆ ನಡೆಸುತ್ತಿರುವ ಧಾಳಿಗಳನ್ನು ಎಳೆಎಳೆಯಾಗಿ ವಿವರಿಸುತ್ತಾ, "ಕೋವಿಡ್ ಸಂಕಷ್ಟದ ಕಾಲದಲ್ಲೂ ನರೇಂದ್ರ ಮೋದಿ ಸರಕಾರವು ನವ ಉದಾರವಾದಿ ನೀತಿಗಳನ್ನು ಆಕ್ರಮಣಕಾರಿಯಾಗಿ ಜಾರಿಗೆ ತರುತ್ತಿದೆ.ಎಲ್ಲಾ ಕ್ಷೇತ್ರಗಳನ್ನು ಮುಕ್ತವಾಗಿ ತೆರೆದಿಟ್ಟು ದೇಶೀ ಹಾಗೂ ವಿದೇಶೀ ಖಾಸಗೀ ಬಂಡವಾಳಶಾಹಿಗಳ ಲೂಟಿಗೆ ಕೈಬೀಸಿ ಕರೆಯುತ್ತಿದೆ. ಕ್ರಷಿ,ಸಾರ್ವಜನಿಕ ಕ್ಷೇತ್ರ ಮತ್ತು ಸೇವೆಗಳನ್ನು ಕಾರ್ಪೋರೇಟ್ ಕಂಪೆನಿಗಳ ಲಾಭಕೋರತನಕ್ಕೆ ಬದಲಾಯಿಸಲಾಗುತ್ತಿದೆ. ಆದೇಶ,ಸುಗ್ರೀವಾಜ್ಞೆಗಳ ಮೂಲಕ ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸುವುದು,ಅಮಾನತುಗೊಳಿಸುವುದು ಹೆಚ್ಚುತ್ತಿದೆ. ಜನತೆಯ ಹಕ್ಕುಗಳನ್ನು, ಪ್ರತಿಭಟಿಸುವುದನ್ನು ಹತ್ತಿಕ್ಕಲಾಗುತ್ತಿದೆ.ಜನಪರ ಹೋರಾಟಗಾರರ ಮೇಲಿನ ಕೇಸುಗಳು ಹಾಗೂ ಕಿರುಕುಳ ಹೆಚ್ಚುತ್ತಿದೆ. ಒಟ್ಟಿನಲ್ಲಿ ದೇಶ ಸರ್ವಾಧಿಕಾರಿ ನಡೆಯತ್ತ, ಫ್ಯಾಸಿಸ್ಟ್ ಮನೋಭಾವದತ್ತ ಸಾಗುತ್ತಿರುವುದು ಅತ್ಯಂತ ಅಪಾಯಕಾರಿಯಾಗಿದ್ದು,ದೇಶವನ್ನು ಉಳಿಸಲು ಕಾರ್ಮಿಕ ವರ್ಗ ಒಂದಾಗಿ ಹೋರಾಡಬೇಕಾಗಿದೆ" ಎಂದು ಹೇಳಿದರು
ಕರ್ನಾಟಕ ಪ್ರಾಂತ ರೈತ ಸಂಘದ ದ.ಕ.ಜಿಲ್ಲಾಧ್ಯಕ್ಷರಾದ ಕ್ರಷ್ಣಪ್ಪ ಸಾಲ್ಯಾನ್ ರವರು ಮಾತನಾಡುತ್ತಾ, "APMC,ಭೂ ಸುಧಾರಣೆ,ಅಗತ್ಯ ಸರಕುಗಳು ಹಾಗೂ ವಿದ್ಯುತ್ ಕಾಯಿದೆಗಳಿಗೆ ರಾಜ್ಯ ಸರಕಾರವು ಬಂಡವಾಳಶಾಹಿಗಳಿಗೆ ಪೂರಕವಾಗಿ ಮತ್ತಷ್ಟು ತಿದ್ದುಪಡಿ ಸುಗ್ರೀವಾಜ್ಞೆಗಳನ್ನು ತಂದಿದ್ದು,ರೈತರನ್ನು,ಕ್ರಷಿ ಕೂಲಿಕಾರರನ್ನು, ಹಮಾಲಿಗಳನ್ನು, ಬಳಕೆದಾರರನ್ನು ಕಾರ್ಪೋರೇಟ್ ಹಿಡಿತಕ್ಕೆ ಒಪ್ಪಿಸುವ ಹುನ್ನಾರವಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ CITU ದಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು, "ಕೋರೋನಾ ಸಂಕಷ್ಟದ ಕಾಲದಲ್ಲಿ ಕೋಟ್ಯಾಂತರ ಹಣದ ಪರಿಹಾರ ಘೋಷಣೆ ಮಾಡಿದ ಸರಕಾರಗಳು, ಇಂದಿಗೂ ಯಾವುದೇ ವಿಭಾಗದ ಕಾರ್ಮಿಕರಿಗೆ ಎಳ್ಳಷ್ಟೂ ಪರಿಹಾರ ಸಿಕ್ಕಿಲ್ಲ,ಎಲ್ಲಾ ಕ್ಷೇತ್ರಗಳಲ್ಲಿ ಲಕ್ಷಾಂತರ ಉದ್ಯೋಗಗಳು ನಷ್ಟವಾಯಿತು.ದುಡಿಯುವ ಕೈಯಲ್ಲಿ ಕಾಸಿಲ್ಲದೆ,ತಿನ್ನಲು ಆಹಾರವಿಲ್ಲದೆ ಪರದಾಡಬೇಕಾಯಿತು. ಪರಿಹಾರದ ಹಣವು ಜನರ ಕೈಗೆ ಸೇರುವ ಬದಲು ಅಂಬಾನಿ, ಅಧಾನಿ ಸೇರಿದಂತೆ ಕಾರ್ಪೋರೇಟ್ ಕಂಪೆನಿಗಳ ಜೇಬು ಸೇರಿತು.ಇದೇ ಸಂಧರ್ಭವನ್ನು ದುರುಪಯೋಗ ಪಡಿಸಿದ ಸರಕಾರವು ಎಲ್ಲಾ ಕ್ಷೇತ್ರಗಳನ್ನು ಖಾಸಗೀಕರಿಸಿತು. ದೇಶಪ್ರೇಮದ ಹೆಸರಿನಲ್ಲಿ ಜನತೆಯನ್ನು ಬಡಿದೆಬ್ಬಿಸಿದ ನರೇಂದ್ರ ಮೋದಿ ಸರಕಾರವು ದೇಶದ ಸಂಪತ್ತನ್ನೇ ಲೂಟಿಗೈದು,ಜನರ ಬದುಕನ್ನೇ ನಿರ್ನಾಮ ಮಾಡಿದೆ" ಎಂದು ಹೇಳಿದರು.
ಪ್ರತಿಭಟನೆಯಲ್ಲಿ CITU ಜಿಲ್ಲಾ ಮುಖಂಡರಾದ ಯು.ಬಿ.ಲೋಕಯ್ಯ, ಪದ್ಮಾವತಿ ಶೆಟ್ಟಿ, ಗಂಗಯ್ಯ ಅಮೀನ್, ಜಯಂತಿ ಶೆಟ್ಟಿ, ಬಾಬು ದೇವಾಡಿಗ,ಭಾರತಿ ಬೋಳಾರ, ಜಯಲಕ್ಷ್ಮಿ,ರಾಘವ,ಕಟ್ಟಡ ಕಾರ್ಮಿಕರ ನಾಯಕರಾದ ದಿನೇಶ್ ಶೆಟ್ಟಿ, ಉಮೇಶ್ ಶಕ್ತಿನಗರ, ದಯಾನಂದ ಕೊಪ್ಪಲಕಾಡು,ಅಶೋಕ್ ಶ್ರೀಯಾನ್,ನಾಗೇಶ್ ಕೋಟ್ಯಾನ್,ಸುರೇಶ್ ಬಜಾಲ್,ಸಾಮಾಜಿಕ ಹೋರಾಟಗಾರರಾದ ಜೆರಾಲ್ಡ್ ಟವರ್, ದಲಿತ ಹಕ್ಕುಗಳ ಸಮಿತಿಯ ತಿಮ್ಮಯ್ಯ ಕೊಂಚಾಡಿ,ಹಮಾಲಿ ಸಂಘಟನೆಯ ಅಹಮ್ಮದ್ ಬಾವ,ಬೀದಿಬದಿ ವ್ಯಾಪಾರಸ್ಥರ ಸಂಘದ ಮುಖಂಡರಾದ ಮಹಮ್ಮದ್ ಮುಸ್ತಾಪಾ, ಶ್ರೀಧರ್, ಅಣ್ಣಯ್ಯ, ವಿಜಯ, ಗುಡ್ಡಪ್ಪ ಮುಂತಾದವರು ಭಾಗವಹಿಸಿದ್ದರು.