ಮಂಗಳೂರು:- "ಹರಿಕಥೆಯು ಪೌರಾಣಿಕ, ಸಾಮಾಜಿಕ ಕಥಾನಕವನ್ನು ಜನರಿಗೆ ಸುಲಭವಾಗಿ ತಲುಪುವ ವಿಸ್ತೃತ ಬಹು ಮಾಧ್ಯಮವಾಗಿದೆ, ಮನದ ಆಳಕ್ಕೆ ಉಪ ಕಥೆಗಳಿಂದ ಸಮಾಜವನ್ನು ಪರೋಕ್ಷವಾಗಿ ತಿದ್ದುವ ಕೆಲಸ ನಡೆಯಿತ್ತಿದೆ. ತುಳು ಅಕಾಡೆಮಿಯಲ್ಲಿ ಕಳೆದ ಒಂದು ವರ್ಷದಿಂದ ಹೊಸತನದ ಮೂಲಕ ಹತ್ತಾರು ಇಂತಹ ಸಂಸ್ಕೃತಿ ಮತ್ತು ಸಂಸ್ಕಾರ ಅರಳಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ" ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ.ಕತ್ತಲ್‍ಸಾರ್ ಹೇಳಿದರು.

ಅವರು ತುಳುಭವನದ ಸಿರಿ ಚಾವಡಿಯಲ್ಲಿ ಕರ್ನಾಟಕ ತುಳು  ಸಾಹಿತ್ಯ ಅಕಾಡೆಮಿ ಹಾಗೂ ಮಂಗಳೂರು ಹರಿಕಥಾ ಪರಿಷತ್‍ನ ಜಂಟಿ ಸಂಯೋಜನೆಯಲ್ಲಿ ಹತ್ತು ದಿನಗಳ ಹರಿಕಥೆ ಪರ್ಬದ ಮೂರನೇ ದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮಹೋತೋಭಾರ ಶ್ರಿ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ.ರಮಾನಾಥ ಹೆಗ್ಡೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, "ಧಾರ್ಮಿಕ ಕ್ಷೇತ್ರಗಳಲ್ಲಿ ತುಳುನಾಡಿನ ಸಂಸ್ಕಾರವನ್ನು ಉಳಿಸಿ ಬೆಳೆಸುವ ಸಾಂಸ್ಕೃತಿಕ ಕಾರ್ಯಕ್ರಮಗಳ ತವರೂರು ಆಗಿ ಪರಿವರ್ತನೆಯಾಗಿರುವುದು ಶ್ಲಾಘನೀಯ" ಎಂದರು.

ಮುಖ್ಯ ಅತಿಥಿಯಾಗಿ ಮಂಗಳೂರು ಕೆಮಿಕಲ್ ಫರ್ಟಿಲೈಸರ್ಸ್ ಕಂಪನಿಯ ವೈದ್ಯಾಧಿಕಾರಿ ಡಾ.ಯೋಗೀಶ್ ಅವರು ಎಂ.ಸಿ.ಎಫ್ ಸಿಎಸ್‍ಆರ್ ನಿಧಿಯಿಂದ 5 ಲಕ್ಷ ರೂ ಮೊತ್ತದ ಚೆಕ್ಕನ್ನು ತುಳುನಾಡಿನ ದೈವಾರಾಧನಾ ಕ್ಷೇತ್ರದ ಅಧ್ಯಯನಕ್ಕಾಗಿ ಅಧ್ಯಕ್ಷರಿಗೆ ಹಸ್ತಾಂತರಿಸಿ ಶುಭ ಹಾರೈಸಿ, ಅಕಾಡೆಮಿಯ ಕಾರ್ಯಗಳನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಕಲಾವಿದರನ್ನು ವಿಶೇಷವಾಗಿ ಅಕಾಡೆಮಿಯಿಂದ ಅಧ್ಯಕ್ಷರಾದ ದಯಾನಂದ ಜಿ.ಕತ್ತಲ್‍ಸಾರ್ ಗೌರವಿಸಿದರು. ಎಂಸಿಎಫ್ ಕಂಪನಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಅವಿನಂದನ್ ಉಪಸ್ಥಿತರಿದ್ದರು. ತುಳು ಅಕಾಡೆಮಿಯ ಸದಸ್ಯರಾದ ನರೇಂದ್ರ ಎಂ.ಪೂಜಾರಿ ಸ್ವಾಗತಿಸಿದರು. ಹಾಗೂ ನಾಗೇಶ್ ಕುಲಾಲ್ ವಂದಿಸಿದರು. ಹರಿಕಥಾ ಪರಿಷತ್‍ನ ಸುಧಾಕರರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಕೀರ್ತನಾ ಕೇಸರಿ ಯಜ್ಞೇಶ್ ಹೊಸಬೆಟ್ಟು ಇವರಿಂದ ‘ತಪ್ಪುಗ್ ತೆರೆದಂಡ’ ಹರಿಕಥೆ ನಡೆಯಿತು. ಹಿಮ್ಮೇಳದಲ್ಲಿ ರವಿರಾಜ್ ಶೆಟ್ಟಿ ಒಡಿಯೂರು, ಮಂಗಲ್‍ದಾಸ್ ಗುಲ್ವಾಡಿ ಸಹಕರಿಸಿದರು.