ಮಂಗಳೂರು (ಸೆಪ್ಟೆಂಬರ್ 24):- ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮೂಡಬಿದ್ರೆ ತಾಲೂಕಿನ  ಪಡುಮಾರ್ನಾಡು ಗ್ರಾಮದ  ಯುವಕ ಮತ್ತು  ಯುವತಿ ಮಂಡಲದಲ್ಲಿ, ಯುವ ಸ್ಪಂದನದ ಅರಿವು ಮತ್ತು ಕೊರೋನ ಜಾಗೃತಿ ಕಾರ್ಯಕ್ರಮವನ್ನು  ಸೆಪ್ಟೆಂಬರ್ 20 ರಂದು  ಆಯೋಜಿಸಲಾಯಿತು.

    ಕೊರೋನದಂತಹ ಕಠಿಣ ಸಂದರ್ಭದಲ್ಲಿ ಯುವ ಜನರು ಸಮಾಜದಲ್ಲಿ ಧೈರ್ಯ ತುಂಬುವ ಕೆಲಸವನ್ನು ಮಾಡಬೇಕು. ಅನಗತ್ಯವಾದ ಭಯವನ್ನು ಬಿಟ್ಟು, ಮಾನಸಿಕವಾಗಿ ಸಧೃಢರಾಗಬೇಕು ಎಂದು ಯುವ ಸ್ಪಂದನದ ಯುವ ಪರಿವರ್ತಕ ಸಾಂತಪ್ಪ ಅವರು  ಯುವಜನತೆಗೆ ಸಂದೇಶ ನೀಡಿದರು.

    ಪ್ರಸ್ತುತ ದಿನಗಳಲ್ಲಿ ಕೊರೊನಾಗೆ ಜನರು ಅನಗತ್ಯ ಭಯ ಪಡುವ ಸ್ಥಿತಿ ಇದೆ, ಆದರೆ ಭಯ ಪಡುವ ಬದಲು ಸುರಕ್ಷತೆಗೆ ಆದ್ಯತೆ ನೀಡಿದರೆ, ಅದು ನಮಗೆ ಬಾಧಿಸುವ ಸಾಧ್ಯತೆ ತೀರಾ ಕಡಿಮೆ.  ಮುಖ್ಯವಾಗಿ ಸರ್ಕಾರದ ನಿರ್ದೇಶನಗಳನ್ನು ಸರಿಯಾಗಿ ಪಾಲಿಸೋಣ. ಎಲ್ಲರೂ ಧನಾತ್ಮಕವಾಗಿ ಯೋಚಿಸಿ, ಮಾನಸಿಕವಾಗಿ ಸಧೃಢರಾಗಬೇಕು ಎಂದರು.

      ಯುವ ಸ್ಪಂದನದ ಮೂಲಕ ಯುವ ಜನರಿಗೆ ನಿರಂತರವಾಗಿ ಅರಿವು ಕಾರ್ಯಕ್ರಮಗಳನ್ನು ನಡೆಸುತ್ತಿರುವ ಬಗ್ಗೆ ವಿವರಿಸಿದರು. ಇಂದಿನ ಈ ಕಠಿಣ ಸಂದರ್ಭದಲ್ಲಿ, ಯುವಜನತೆ ಆತಂಕ ಮತ್ತು ಮಾನಸಿಕ ಒತ್ತಡಗಳೊಂದಿಗೆ ಬದುಕುತ್ತಿದ್ದಾರೆ. ಅವರಿಗೆ ಸೂಕ್ತವಾದ ಅರಿವು ಮತ್ತು ಮಾರ್ಗದರ್ಶನ ನೀಡಲು “ಯುವ ಸ್ಪಂದನ” ಕಾರ್ಯಕ್ರಮ ಜಾರಿಗೆ ಬಂದಿದೆ ಎಂದು ವಿವರಿಸಿದರು.

      ಯುವಜನ ಸಂಬಂಧಿ ವಿಷಯಗಳಿಗೆ ಸೂಕ್ತವಾದ ಸಮಾಲೋಚನೆ ಮತ್ತು ಮಾರ್ಗದರ್ಶನವನ್ನು “ಯುವಸ್ಪಂದನ ಕೇಂದ್ರ” ಮಂಗಳೂರು ದೂರವಾಣಿ ಸಂಖ್ಯೆ: 08242-452264  ಸಂಪರ್ಕಿಸಿ   ಪಡೆಯಬಹುದು ಎಂದು ದ.ಕ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,  ಉಪ ನಿರ್ದೇಶಕರ ಪ್ರಕಟಣೆ ತಿಳಿಸಿದೆ.