ಮಂಗಳೂರು: ಸೆಪ್ಟೆಂಬರ್ 12 ರಂದು ನಿಧನರಾದ ವಿಶ್ವವಿದ್ಯಾನಿಲಯ ಕಾಲೇಜಿನ ಹಳೆವಿದ್ಯಾರ್ಥಿ, ಉದ್ಯಮಿ ಮಾಗಣ್ತ ಡಿ ಕಿಶೋರ್ ಕುಮಾರ್ ಶೆಟ್ಟಿ (63) ಅವರ ಸ್ಮರಣಾರ್ಥ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಭಾನುವಾರ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಧರ್ಮ, "ಕಿಶೋರ್ ಕುಮಾರ್ ಶೆಟ್ಟಿ ಅವರ ನಿಧನದೊಂದಿಗೆ ಅವರ ಅಪಾರ ಸ್ನೇಹಿತ ಬಳಗ ಸ್ಫೂರ್ತಿಯ ಸೆಲೆಯೊಂದನ್ನು ಕಳೆದುಕೊಂಡಿದೆ"ಎಂದರು. ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ, "ಹೃದಯ ಶ್ರೀಮಂತಿಕೆಯಿದ್ದ ಮೃತರಿಗೆ ವಿವಿಗೆ ಹೊಸ ಕಳೆ ನೀಡುವ ಕನಸಿತ್ತು,"ಎಂದರು. ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಚಿನ್ನಪ್ಪಗೌಡ, "ಶೆಟ್ಟಿಯವರು ಪರೋಪಕಾರಿಯಾಗಿದ್ದರು, ಎಲ್ಲವೂ ಇದ್ದರೂ ಅಹಂಕಾರ ಪಡದ ಅಪರೂಪದ ವ್ಯಕ್ತಿಯಾಗಿದ್ದರು" ಎಂದರು.
ನೆರೆದಿದ್ದ ಕಿಶೋರ್ ಕುಮಾರ್ ಶೆಟ್ಟಿ ಮತ್ತು ಅವರ ಪತ್ನಿ ಮಂಗಳೂರು ವಿಶ್ವವಿದ್ಯಾನಿಲಯದ ವಿಶೇಷಾಧಿಕಾರಿ ಅನುಸೂಯಾ ರೈಯವರ ಸಹಪಾಠಿಗಳು, ಸ್ನೇಹಿತರು ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನುಡಿ ನಮನ ಸಲ್ಲಿಸಿದರು.ಅವರ ಕ್ರೀಡಾ ಸಾಧನೆ, ಲಯನ್ಸ್ ಕ್ಲಬ್ ಚಟುವಟಿಕೆಗಳನ್ನು ಕೊಂಡಾಡಿದರು. ಮೃತರ ಸದ್ಗತಿಗಾಗಿ ಮೌನ ಆಚರಿಸಲಾಯಿತು.