ಮಂಗಳೂರು : ಕೋವಿಡ್-19 ರೋಗ ನಿಯಂತ್ರಣದಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತಿರುವ ಕೊರೋನಾ ವಾರಿಯರ್ಸ್ ಆಶಾ ಕಾರ್ಯಕರ್ತೆಯರಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಯುಷ್ ಔಷಧಿ ಕಿಟ್ ವಿತರಣೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದರು.
ಶನಿವಾರ ಜಿಲ್ಲಾಧಿಕಾರಿ ಕಚೇರಿ ಆವರಣದ ಸಚಿವರ ಕಚೇರಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಕಿಟ್ ವಿತರಣೆ ಮಾಡಿ ಮಾತನಾಡಿದ ಸಚಿವರು ಕೊರೋನಾ ರೋಗವನ್ನು ತಡೆಗಟ್ಟಲು ಮುಂಚೂಣಿಯಲ್ಲಿ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರ ಸೇವಾ ಮನೋಭಾವನ್ನು ಶ್ಲಾಘಿಸುತ್ತಾ ಇವರ ಆರೋಗ್ಯ ರಕ್ಷಣೆಗಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಯುಷ್ ಔಷಧಿಯನ್ನು ಜಿಲ್ಲೆಯ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ವಿತರಿಸಲಾಗುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ಕೊರೋನಾ ವಾರಿಯರ್ಸ್‍ಗಳಾದ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಆಯುಷ್ ಔಷಧವನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಹಾಗೂ ಕ್ವಾರಂಟೈನ್‍ನಲ್ಲಿರುವ ಕೋರೋನಾ ಸೋಂಕಿತರು ಮತ್ತು ಶಂಕಿತ ರೋಗಿಗಳಿಗೆ ಆಯುಷ್ ಔಷಧಗಳನ್ನು ವಿತರಿಸುವ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಮುಹಮ್ಮದ್ ಇಕ್ಬಾಲ್, ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.