ಮಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀಯುತ ಡಿ.ಕೆ ಶಿವಕುಮಾರ್ ಅವರ ಪದಗ್ರಹಣ ಸಮಾರಂಭವು ಇದೇ ಬರುವ ಜೂನ್ 14 ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಅದರ ವೀಕ್ಷಣೆಯ ಜೊತೆಗೆ ಜಿಲ್ಲಾ ಕಾಂಗ್ರೆಸ್ ನ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ತಮ್ಮ ವಿಧಾನಸಭಾ ಕ್ಷೇತ್ರಗಳ ವಾರ್ಡ್ ಹಾಗೂ ಗ್ರಾಮ ಮಟ್ಟದಲ್ಲಿ ಪಕ್ಷದ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಿದ್ದಾರೆ ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅವರು ಹೇಳಿದರು.
ಮಲ್ಲಿಕಟ್ಟೆಯಲ್ಲಿ ಜರುಗಿದ ಕಾಂಗ್ರೆಸ್ ಮಾಸಿಕ ಸಭೆಯಲ್ಲಿ ಈ ವಿಚಾರವನ್ನು ಪ್ರಕಟಿಸಿದರು. ರಾಜ್ಯಾದ್ಯಂತ ಎಂಟು ಸಾವಿರ ಸ್ಥಳಗಳಲ್ಲಿ ಡಿಕೆಶಿ ಪದಗ್ರಹಣ ವೀಕ್ಷಣೆಗೆ ಟಿ.ವಿ ಪರದೆಗಳನ್ನು ವ್ಯವಸ್ಥೆಗೊಳಿಸಲಾಗಿದ್ದು, ದ.ಕ ಜಿಲ್ಲೆಯಾದ್ಯಂತ 290 ಸ್ಥಳಗಳಲ್ಲಿ ಸಾವಿರಾರು ಕಾರ್ಯಕರ್ತರು ಸಂವಿಧಾನದ ಪೀಠಿಕೆಯನ್ನು ಪಠಿಸಿ ಪಕ್ಷದ ಪ್ರತಿಜ್ಞಾವಿಧಿ ಸ್ವೀಕರಿಸುವ ಮೂಲಕ ಸಮಾರಂಭವನ್ನು ವಿನೂತನವಾಗಿ ಆಚರಿಸಲಿದ್ದಾರೆ ಎಂದು ಅವರು ಈಗಾಗಲೇ ಪ್ರತಿ ಬ್ಲಾಕಿನಲ್ಲಿ ವೀಕ್ಷಕರ ಸಭೆ ನಡೆಸಿ ನಿರ್ದೇಶನ ನೀಡುವುದರ ಮೂಲಕ ಸರ್ವ ಸಿದ್ಧತೆ ನಡೆಸಲಾಗಿದ್ದು, ರಾಜ್ಯಾದ್ಯಂತ ಲಕ್ಷಾಂತರ ಜನರು ಕಾರ್ಯಕ್ರಮ ವೀಕ್ಷಣೆಗೆ ಸಾಕ್ಷಿಯಾಗಲಿದ್ದಾರೆ ಎಂದರು.
ಸಭೆಯ ಪ್ರಾರಂಭದಲ್ಲಿ ಇತ್ತೀಚೆಗೆ ಅಗಲಿದ ಪಕ್ಷದ ಗಣ್ಯರಿಗೆ ಹಾಗೂ ಕೊರೋನಾದಿಂದ ಮೃತಪಟ್ಟವರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಪ್ರತಿ ವಿಧಾನಸಭಾ ಕ್ಷೇತ್ರಗಳ ಬ್ಲಾಕ್ ಕಾಂಗ್ರೆಸ್‍ನ ಅಧ್ಯಕ್ಷರುಗಳು ಡಿಕೆಶಿ ಪದಗ್ರಹಣ ವೀಕ್ಷಣೆಗೆ ಕೈಗೊಂಡ ಸಿದ್ಧತೆಗಳ ವಿವರವನ್ನು ನೀಡಿದರು. ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದವರಿಗೆ ನೆರವಾದ ಪಕ್ಷದ ಮುಖಂಡರು, ಕಾರ್ಯಕರ್ತರು, ವೈದ್ಯ ಸಮೂಹ ಮತ್ತು ಪೊಲೀಸ್ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು. ಸರಕಾರವು ಗ್ರಾಮಪಂಚಾಯತ್ ಗಳಿಗೆ ನೇಮಕಾತಿಯನ್ನು ಮಾಡಲು ಮುಂದುವರಿದಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅಧ್ಯಕ್ಷರು ಇದೇ ಸಂದರ್ಭದಲ್ಲಿ ಎಚ್ಚರಿಕೆಯನ್ನು ನೀಡಿದರು.
ವೇದಿಕೆಯಲ್ಲಿ ಮಾಜಿ ಶಾಸಕರುಗಳಾದ ಬಿ.ರಮಾನಾಥ ರೈ, ಬಿ.ಇಬ್ರಾಹಿಂ , ಅಭಯಚಂದ್ರ ಜೈನ್, ಶಕುಂತಲಾ ಶೆಟ್ಟಿ, ಮೊಯ್ದಿನ್ ಬಾವ, ಜೆ.ಆರ್ ಲೋಬೋ, ಮಿಥುನ್ ರೈ ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಸೇರಿದಂತೆ ಮುಂಚೂಣಿ ಘಟಕಗಳ ಪದಾಧಿಕಾರಿಗಳು, ಕೆ.ಪಿ.ಸಿ.ಸಿ ಸದಸ್ಯರು ,ಸಾಮಾಜಿಕ ಜಾಲತಾಣದ ಸದಸ್ಯರು ಸಭೆಯಲ್ಲಿ ಪಾಲ್ಗೊಂಡರು. ಡಿ.ಸಿ.ಸಿ ಉಪಾಧ್ಯಕ್ಷ ಸದಾಶಿವ ಉಳ್ಳಾಲ್ ಕಾರ್ಯಕ್ರಮ ನಿರ್ವಹಿಸಿದರು. ಡಿ.ಸಿ.ಸಿ ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ, ಶುಭೋದಯ ಆಳ್ವ, ನೀರಜ್ ಪಾಲ್, ಟಿ.ಕೆ ಸುಧೀರ್, ಸಿ.ಎಂ ಮುಸ್ತಫಾ, ಖಾಲಿದ್ ಉಜಿರೆ, ನಝೀರ್ ಬಜಾಲ್ ಸಹಕರಿಸಿದ್ದರು.