ಮಂಗಳೂರು: ಒಕ್ಕೂಟದಲ್ಲಿ  ದಿನಾಂಕ 09-06-2020 ರಂದು ಹಾಲಿನ ಸಂಗ್ರಹಣೆ 5 ಲಕ್ಷ ಕೆಜಿಯಷ್ಟು ಮೀರಿ ಹಾಲಿನ ಸಂಗ್ರಹಣೆಯಾಗಿದ್ದು, ಇದು ಒಕ್ಕೂಟದಲ್ಲಿ ಅತ್ಯಧಿಕ ಹಾಲಿನ ಸಂಗ್ರಹಣೆಯಲ್ಲಿ ದಾಖಲೆಯಾಗಿರುತ್ತದೆ. ಈ ಹಾಲಿನ ಸಂಗ್ರಹಣೆಯ ಗುರಿಯನ್ನು ಸಾಧಿಸಲು ಕಾರಣಿಭೂತರಾಗಿರುವ ಉಭಯ ಜಿಲ್ಲೆಯ ಸಮಸ್ತ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸದಸ್ಯರುಗಳು, ಸಂಘದ ಅಧ್ಯಕ್ಷರುಗಳು, ಸಂಘದ ಆಡಳಿತ ಮಂಡಳಿ ಸದಸ್ಯರುಗಳು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರಿಗೂ ಪ್ರಥಮವಾಗಿ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇನೆ.

ಕೋವಿಡ್ -19 ವೈರಾಣು ವ್ಯಾಪಕವಾಗಿ ಹರಡಬಹುದಾದ ಹಿನ್ನಲೆಯಲ್ಲಿ ಉಭಯ ಜಿಲ್ಲೆಯಲ್ಲಿ ಲಾಕ್ ಡೌನ್ ಘೋಷಣೆಯಾಗಿರುವುದರಿಂದ, ಹೋಟೆಲ್, ಕ್ಯಾಂಟೀನ್, ವಿದ್ಯಾ ಸಂಸ್ಥೆಗಳು ಬಂದ್ ಆಗಿರುವುದರಿಂದ, ಹಾಗೂ ಪ್ರೇಕ್ಷಣಿಯ ಸ್ಥಳಗಳಲ್ಲಿ  ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿರುವುದರಿಂದ, ಹಾಲಿನ ಮಾರಾಟ ಗಣನೀಯವಾಗಿ ಕಡಿಮೆಯಾಗಿದ್ದು, ದಿನವಹಿ ಸುಮಾರು ಶೇ.25 ರಷ್ಟು ಹಾಲಿನ ಮಾರಾಟ ಕಡಿಮೆಯಾಗಿರುತ್ತದೆ.  

ಒಕ್ಕೂಟದ ಬೇಡಿಕೆಯನ್ನು ಪೂರೈಸಿ, ಉಳಿಕೆಯಾಗಿರುವ ಹೆಚ್ಚುವರಿ ಹಾಲನ್ನು ಪರಿವರ್ತನೆಗಾಗಿ ಪರಿವರ್ತನಾ ಘಟಕಕ್ಕೆ ಕಳುಹಿಸಲಾಗುತ್ತಿದ್ದು, ಒಕ್ಕೂಟದ ಆರ್ಥಿಕ ಪರಿಸ್ಥಿತಿಯ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ.

ರಾಜ್ಯಾದ್ಯಂತ ದಿನವಹಿ 85 ಲಕ್ಷ ಲೀಟರ್ ಹಾಲಿನ ಸಂಗ್ರಹಣೆಯಾಗುತ್ತಿದ್ದು, ಕೋವಿಡ್ -19 ಕಾಯಿಲೆಯ ಲಾಕ್ ಡೌನ್ ಹಿನ್ನಲೆಯಲ್ಲಿ ಹಾಲಿನ ಮಾರಾಟದಲ್ಲಿ ಕುಸಿತ ಕಂಡು ಬಂದಿರುತ್ತದೆ. ಹಾಗೂ ಹೊರ ರಾಜ್ಯಗಳಲ್ಲಿ ಹಾಲಿನ ಪುಡಿಗೆ ಬೇಡಿಕೆಯು ಕಡಿಮೆಯಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ತಮ್ಮೆಲ್ಲರ ಅಮೂಲ್ಯ ಸಹಕಾರದಿಂದ ಸರ್ವಕಾಲಿಕ ಹಾಲಿನ ಸಂಗ್ರಹಣೆಯ ಗುರಿಯನ್ನು ತಲುಪಿರುವ ಬಗ್ಗೆ ಇನ್ನೊಮ್ಮೆ  ಎಲ್ಲರಿಗೂ ಅಭಿನಂದನೆಯನ್ನು  ಸಲ್ಲಿಸುತ್ತೇನೆ. ಹಾಗೂ ಉತ್ತಮ ಗುಣಮಟ್ಟದ ಹಾಲನ್ನು ಸದಾ ಒಕ್ಕೂಟಕ್ಕೆ ಪೂರೈಸುವಂತೆ ಕೋರುತ್ತಾ, ಹಾಲಿನ ಮಾರುಕಟ್ಟೆ ಕುಸಿತದಿಂದ ಉಂಟಾಗಬಹುದಾದ ವೃತಿರಿಕ್ತ ಪರಿಣಾಮವನ್ನು ಪರಿಹರಿಸಿಕೊಳ್ಳಲು ತುಂಬು ಹೃದಯದ  ಸಹಕಾರವನ್ನು  ಬಯಸುವುದಾಗಿ ಒಕ್ಕೂಟದ ಅಧ್ಯಕ್ಷರಾದ  ರವಿರಾಜ್ ಹೆಗ್ಡೆ ಪತ್ರಿಕಾ ಪ್ರಕಟಣೆಯಲ್ಲಿ ಕೋರಿರುತ್ತಾರೆ.