ಮಂಗಳೂರು (ಜುಲೈ 29):- ಶಿಕ್ಷಣದ ಜೊತೆ, ಸಂಶೋಧನೆ ಮತ್ತು ವಿಸ್ತರಣೆಯಲ್ಲಿ ಮುಂಚೂಣಿ ಹೊಂದಿರುವ ಮಂಗಳೂರಿನ ಮೀನುಗಾರಿಕಾ ಕಾಲೇಜು ರೈತರಿಗೆ ತಂತ್ರಜ್ಞಾನಗಳ ವರ್ಗಾವಣೆ ಮಾಡುವಲ್ಲಿ ಸಹಾಯವಾಣಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಕಾಲೇಜು ಇಲ್ಲಿಯವರೆಗೆ ಸುಮಾರು 150 ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳು ಪ್ರಾಯೋಜಿಸಿದ ಸಂಶೋಧನಾ ಯೋಜನೆಗಳನ್ನು ನಡೆಸಿರುತ್ತದೆ. ವಿಸ್ತರಣೆಯಲ್ಲೂ ಸಹ ಅತ್ಯುನ್ನತ ಸಾಧನೆ ಮಾಡಿರುವ ಕಾಲೇಜು ಈಗ 50 ವರ್ಷಗಳನ್ನು ಪೂರೈಸಿದೆ.
ವಿಜ್ಞಾನ ವಿಷಯದಲ್ಲಿ ಪದವಿಪೂರ್ವ ಮುಗಿಸಿರುವ ವಿದ್ಯಾರ್ಥಿಗಳನ್ನು ಸಾಮಾನ್ಯ ಪ್ರವೇಶದ ಮೂಲಕ ಆಯ್ಕೆ ಮಾಡಿ 4 ವರ್ಷಗಳ ಸ್ನಾತಕ, 2 ವರ್ಷದ ಸ್ನಾತಕೋತ್ತರ ಮತ್ತು 3 ಸಾಲಿನ ಡಾಕ್ಟರೇಟ್ ಪದವಿಗಳನ್ನು ಕಾಲೇಜು ನೀಡುತ್ತಾ ಬಂದಿದೆ. ಮೀನುಗಾರಿಕಾ ಪದವಿಧರರು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಸರ್ಕಾರಿ ಹಾಗೂ ಖಾಸಗಿ ರಂಗದಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ.
ಮೀನುಗಾರಿಕಾ ಕಾಲೇಜಿನ ಪ್ರಧಾನ ಕಚೇರಿಯಾದ ಬೀದರ್‍ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ| ಹೆಚ್.ಡಿ. ನಾರಾಯಣ ಸ್ವಾಮಿ ಮಹಾವಿದ್ಯಾಲಯದ ಪ್ರೊಫೆಸರ್ ಡಾ| ಎ.ಟಿ. ರಾಮಚಂದ್ರ ನಾಯ್ಕ ತಯಾರಿಸಿದ ವೈಜ್ಞಾನಿಕ ಮಾಹಿತಿಗಳನ್ನೊಳಗೊಂಡ ಕಿರುಹೊತ್ತಿಗೆಗಳನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ರೈತರಿಗೆ ಅತೀ ಸರಳವಾಗಿ ಅರ್ಥವಾಗುವ ಕನ್ನಡ ಭಾಷೆಯಲ್ಲಿ ಮುದ್ರಿತವಾಗಿರುವ ಈ ಕಿರುಹೊತ್ತಿಗೆಗಳು ವೈಜ್ಞಾನಿಕ ವಿಧಾನದಲ್ಲಿ ಕೃಷಿಮಾಡಲು ಸಹಕಾರಿಯಾಗಲಿವೆ ಎಂದು ಹೇಳಿದರು. ಮಾತಿನಲ್ಲಿ ಮಾಹಿತಿ ತಿಳಿಸುವುದು ಸುಲಭ ಆದರೆ ಆ ಮಾಹಿತಿಗಳು ಲಿಖಿತ ರೂಪದಲ್ಲಿ ರೈತ ಭಾಂದವರಿಗೆ ರವಾನಿಸಿದರೆ ಕೃಷಿಯನ್ನು ಉತ್ತಮಪಡಿಸಲು ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಎಸ್.ಸಿ.ಎಸ್.ಪಿ./ ಟಿ.ಎಸ್.ಪಿ. ಯೋಜನೆಯ ಧನ ಸಹಾಯದಿಂದ ತಯಾರಿಸಿ ಮುದ್ರಿಸಿದ ವೈಜ್ಞಾನಿಕ ಮಾಹಿತಿಗಳನ್ನೊಳಗೊಂಡ ಈ ಕಿರುಹೊತ್ತಿಗೆಗಳನ್ನು ಕಾಲೇಜಿನ ಜಲ ಪರಿಸರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರೊಫೆಸರ್ ಡಾ| ಎ.ಟಿ. ರಾಮಚಂದ್ರ ನಾಯ್ಕ ಪ್ರಕಟಿಸಿರುತ್ತಾರೆ. ಇವರು ಈ ಹಿಂದೆ ನಗರದ ಕೃಷಿ ವಿಜ್ಞಾನ ಕೇಂದ್ರದ ಪ್ರಧಾನ ವಿಜ್ಞಾನಿ ಹಾಗೂ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.
ಬಿಡುಗಡೆಯ ಸಂದರ್ಭದಲ್ಲಿ, ವಿಶ್ವವಿದ್ಯಾಲಯದ ಹಣಕಾಸು ನಿಯಂತ್ರಣಾಧಿಕಾರಿ ಡಾ| ಸಿ.ವಿ.ರಾಜು, ಕಾಲೇಜಿನ ಎಸ್.ಸಿ.ಎಸ್.ಪಿ./ ಟಿ.ಎಸ್.ಪಿ. ಯೋಜನೆಯ ಸಂಯೋಜಕ ಶಶಿಧರ್ ಎಸ್. ಬಾದಾಮಿ ಮತ್ತು ಕಾಲೇಜಿನ ವಿವಿಧ ವಿಭಾಗಗಳ ಭೋದಕ ಹಾಗೂ ಭೋದಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾಲೇಜಿನ ಡೀನ್ ಡಾ|ಎ. ಸೆಂಥಿಲ್ ವೆಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸುಲಭವಾಗಿ ಅರ್ಥೈಸಿಕೊಳ್ಳಲು ಅನುಕೂಲವಾಗುವ ರೀತಿಯಲ್ಲಿ ಬರೆದಿರುವ ಈ ಕಿರುಹೊತ್ತಿಗೆಗಳು ಎಲ್ಲಾ ವರ್ಗದ ಸಾರ್ವಜನಿಕ ಮತ್ತು ರೈತ ಭಾಂದವರಿಗೆ ಉಪಯೋಗವಾಗಲಿದೆ ಎಂದು ಹೇಳಿದರು.
ಡಾ| ಎ. ಟಿ. ರಾಮಚಂದ್ರ ನಾಯ್ಕ ಬರೆದು ಪ್ರಕಟಿಸಿರುವ ಕಿರುಹೊತ್ತಿಗೆಗಳು ಇಂತಿವೆ: ವೈಜ್ಞಾನಿಕ ಮೀನು ಮರಿ ಉತ್ಪಾದನಾ ವಿಧಾನಗಳು, ಒಳನಾಡಿನಲ್ಲಿ ಮೀನು ಕೃಷಿ ಕೈಗೊಳ್ಳುವ ಸರಳೋಪಾಯ, ಮನೆಯಲ್ಲಿ ಅಲಂಕಾರಿಕ ಮೀನುಗಳ ಪಾಲನೆ ಮತ್ತು ನಿರ್ವಹಣೆ, ಹುಲ್ಲು ಗೆಂಡೆ ಮತ್ತು ಸಾಮಾನ್ಯ ಗೆಂಡೆಗಳ ಸಮ್ಮಿಶ್ರ ಮೀನು ಬೇಸಾಯ, ‘ಮೀನು ಜತೆ ಕೃಷಿ’ ಮಾಡುವ ಸಮಗ್ರ ಬೇಸಾಯ ಪದ್ದತಿಗಳು, ಸುರಗಿ (ಪಂಗೇಶಿಯಸ್) ಮೀನು ಸಾಕಣೆ ವಿಧಾನಗಳು, ತಿಲಾಪಿಯ/ ಜುಲೇಬಿ ಮೀನು (ಸರ್ಕಾರಿ ಮೀನು) ಸಾಕಣೆ ಮತ್ತು ಜಲಪ್ರದೇಶದಲ್ಲಿ ಪ್ಲಾಸ್ಟಿಕ್ ನಿರ್ವಹಣೆ.
ರೈತರು ಮೀನು ಕೃಷಿಯಲ್ಲಿ ತೊಡಗಿರುವವರು, ನೂತನವಾಗಿ ಜಲಕೃಷಿ ಮಾಡುವವರು, ಲಾಭದಾಯಕ ವೈಜ್ಞಾನಿಕ ರೀತಿಯಲ್ಲಿ ಕೃಷಿ ಕೈಗೊಳ್ಳಲು ಇಚ್ಛಿಸುವರು, ಸುಸ್ಥಿರ ಮೀನುಗಾರಿಕಾ ಪದ್ಧತಿಗಳನ್ನು ಅಳವಡಿಸಿ ಅಧಿಕ ಲಾಭಗಳಿಸುವ ವೈಜ್ಞಾನಿಕ ವಿಧಾನಗಳು, ಜಲ ಪರಿಸರ ನಿರ್ವಹಣೆ, ಮೀನಿನ ಖಾದ್ಯ ಪದಾರ್ಥಗಳ ತಯಾರಿಕೆ, ಮೀನು ಸಂಸ್ಕರಣಾ ವಿಧಾನಗಳು, ಮೀನಿನ ರೋಗಲಕ್ಷಣ ಮತ್ತು ನಿರ್ವಹಣೆ, ಮಣ್ಣು/ ನೀರಿನ ಗುಣಮಟ್ಟ ಪರಿಕ್ಷೆ, ಮತ್ಸ್ಯ ಸಂಪನ್ಮೂಲಗಳ ನಿರ್ವಹಣೆ, ಮೀನುಗಾರಿಕಾ ತಂತ್ರಜ್ಞಾನಗಳ ವಿಸ್ತರಣೆ, ವೈಜ್ಞಾನಿಕ ಮೀನು ಹಿಡುವಳಿಯ ವಿಧಾನ, ಜಲ ಮಾಲಿನ್ಯ ನಿರ್ವಹಣೆ, ಇತ್ಯಾದಿಗಳ ಬಗ್ಗೆ ಕಾಲೇಜಿನ ಪೆÇ್ರಫೆಸರ್‍ಗಳಿಂದ ಸಂಪೂರ್ಣ ಮಾಹಿತಿ ಪಡೆಯಲು ದೂರವಾಣಿ ಸಂಖ್ಯೆ 0824-2249256 ಸಂಪರ್ಕಿಸಬಹುದು ಎಂದು ಡಾ| ಎ.ಟಿ. ರಾಮಚಂದ್ರ ನಾಯ್ಕ ಅವರ ಪ್ರಕಟಣೆ ತಿಳಿಸಿದೆ.