ಮಂಗಳೂರು:- ಮಂಗಳೂರು ತನ್ನ ಕ್ಯಾಪ್‍ನಲ್ಲಿ ಮತ್ತೊಂದು ಗರಿ ಸೇರಿಸಿದೆ. ನಗರ ಮೂಲದ ಕಲಾವಿದ ಸಂತೋಷ್ ಡಿ. ಅಂದ್ರಾದೆಗೆ ಎನ್‍ಡಿಟಿವಿ ಸಮೂಹದ ಮೊಜಾರ್ಟೊ ನಡೆಸಿದ ದೇಶದ ಅತಿದೊಡ್ಡ ಆನ್‍ಲೈನ್ ಕಲಾ ಸ್ಪರ್ಧೆಯಾದ `ಒರಾ 2020' ನಲ್ಲಿ ಮೊದಲ ವಿಜೇತರಾಗಿ ಹೊರಹೊಮ್ಮಿದ್ದಾರೆ. `ದಿ ಸ್ಟೋರಿಟೆಲ್ಲಿಂಗ್ ವಾಲ್: ದಿ ಫಾಲಸೀಸ್ ಆಫ್ ಅರ್ಬನೈಸೇಶನ್' ಎಂಬ ಶೀರ್ಷಿಕೆಯ ಚಿತ್ರಕಲೆಗಾಗಿ ಅವರು ಪ್ರಶಸ್ತಿ ಪಡೆದಿದ್ದಾರೆ. ಪ್ರಶಸ್ತಿಯು ಪ್ರಮಾಣಪತ್ರ, ಟ್ರೋಫಿ ಮತ್ತು ರೂ. 3 ಲಕ್ಷ ನಗದು ಬಹುಮಾನ ಹೊಂದಿದೆ. ಕೋವಿಡ್ ಸಾಂಕ್ರಾಮಿಕ ರೋಗದ ನಿರ್ಬಂಧದಿಂದಾಗಿ, ಯೋಜಿತ ಮನಮೋಹಕ ಪ್ರಶಸ್ತಿ ಪ್ರದಾನ ಸಮಾರಂಭದ ಬದಲು, ಸೆಪ್ಟೆಂಬರ್ 25, 2020 ರಂದು ಆನ್‍ಲೈನ್ ಕಾರ್ಯಕ್ರಮವೊಂದರಲ್ಲಿ ಬಹುಮಾನಗಳನ್ನು ಘೋಷಿಸಲಾಯಿತು.

ಉದಯೋನ್ಮುಖ ಕಲಾವಿದ ಮತ್ತು ವೃತ್ತಿಪರ ಕಲಾವಿದ ಎಂಬ ಎರಡು ವಿಭಾಗಗಳ ಅಡಿಯಲ್ಲಿ ಕಲಾವಿದರು ತಮ್ಮ ಕೃತಿಗಳನ್ನು ಸಲ್ಲಿಸಲು ಆಹ್ವಾನವಿತ್ತು. 15 ವರ್ಷಗಳ ಕಲಾ ವೃತ್ತಿಜೀವನದ ಅನುಭವ ಹೊಂದಿರುವ ಮಂಗಳೂರು ಚಿಲಿಂಬಿ ಆದರ್ಶ ನಗರ ನಿವಾಸಿ ಸಂತೋಷ್ ಅಂದ್ರಾದೆ `ವೃತ್ತಿಪರ ಕಲಾವಿದ' ವಿಭಾಗದಲ್ಲಿ 1000 ಕ್ಕೂ ಹೆಚ್ಚು ಸ್ಪರ್ಧಿಗಳ ವಿರುದ್ಧ ಸ್ಪರ್ಧೆಯನ್ನು ಗೆದ್ದಿದ್ದಾರೆ. ಸ್ಪರ್ಧೆಯಲ್ಲಿ ಹಲವಾರು ಎಲಿಮಿನೇಷನ್ ಹಂತಗಳು ಇದ್ದವು. ಅಂತಿಮ ಸುತ್ತಿನಲ್ಲಿ ಹತ್ತು ಫೈನಲಿಸ್ಟ್‍ಗಳ ಹೆಸರನ್ನು ಬಿಡುಗಡೆ ಮಾಡಲಾಯಿತು. ಅವರಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ವಿಜೇತರ ಜೊತೆಗೆ 7 ವಿಶೇಷ ಉಲ್ಲೇಖಗಳು ಸೇರಿವೆ.

ಅವರ ಬಹುಮಾನ ವಿಜೇತ ಕಲಾಕೃತಿಯ ಪರಿಕಲ್ಪನಾ ಟಿಪ್ಪಣಿಯಲ್ಲಿ, ಸಂತೋಷ್ ಅಂದ್ರಾದೆ ಅವರ ಚಿತ್ರಕಲೆ ನಗರೀಕರಣದ ವೈಪರೀತ್ಯಗಳನ್ನು ಚಿತ್ರಿಸುತ್ತದೆ ಎಂದು ವಿವರಿಸಿದ್ದಾರೆ. "ನನ್ನ ಬಾಲ್ಯದ ನೆನಪುಗಳು ಭಾರತದ ಪಶ್ಚಿಮ ಕರಾವಳಿಯುದ್ದಕ್ಕೂ ಅರೇಬಿ ಸಮುದ್ರದ ಮೇಲಿರುವ ಬೆಟ್ಟ ಪ್ರದೇಶದಲ್ಲಿ ತರಕಾರಿ ಮತ್ತು ಹಣ್ಣಿನ ತೋಟಗಳ ಮಧ್ಯೆ ಮಂಗಳೂರು ಟೈಲ್ಸ್ ಹಂಚಿನ ಮಾಡುಗಳ ಸುಂದರವಾದ ದೃಶ್ಯಗಳನ್ನು ಒಳಗೊಂಡಿದೆ" ಎಂದು ಅವರು ಪರಿಕಲ್ಪನಾ ಟಿಪ್ಪಣಿಯಲ್ಲಿ ಬರೆದಿದ್ದಾರೆ. "ಆದರೆ ಇಂದು, ಹಿಂದಿನದನ್ನು ನೆನಪಿಸಿಕೊಂಡು ನಾನು ನನ್ನ ಕಿಟಕಿಯಿಂದ ಹೊರಗೆ ನೋಡಿದಾಗ, ನಮ್ಮ ನಗರಗಳ ಕರ್ಕಶ ವಾಸ್ತವಗಳಿಂದ ನಾನು ಎಚ್ಚರಗೊಂಡಿದ್ದೇನೆ. ಭಾರತ ಇಂದು ಅಭೂತಪೂರ್ವ ಬೆಳವಣಿಗೆಯನ್ನು ಎದುರಿಸುತ್ತಿದೆ, ಇದು ತಜ್ಞರು ನಗರೀಕರಣ ಎಂದು ಕರೆಯಬಹುದು. ಈ ಹಿಂದೆ ಮೆಟ್ರೊ ನಗರಗಳ ಮೇಲೆ ಮಾತ್ರ ಪರಿಣಾಮ ಬೀರುತ್ತಿದ್ದ ಅಂಶಗಳು ಇಂದು ನಮ್ಮಂತಹ ದೇಶದ ಅನೇಕ 'ಟೈರ್ 2' ನಗರಗಳನ್ನು ಸಹ ತಲುಪಿದೆ".

"ಕಾಲಚಕ್ರದ ಈ ಎರಡು ಅಂಶಗಳ ನಡುವಿನ ಸನ್ನಿವೇಶವನ್ನು ನನ್ನ ಕಲಾಕೃತಿ ಬಿಂಬಿಸುತ್ತದೆ. ಮಂಗಳೂರು ಟೈಲ್ಸ್ ಹಂಚಿನ ಮಾಡುಗಳ ಮುಂಭಾಗವು ಅವುಗಳ ಪಕ್ಕದಲ್ಲಿಯೇ ಇರುವ ಗಗನಚುಂಬಿ ಕಟ್ಟಡಗಳಿಂದ ಉಸಿರುಗಟ್ಟಿ ಮುಳುಗುತ್ತಿರುವ ಹಳೆಯ ದಿನಗಳ ದೃಶ್ಯಗಳನ್ನು ಪ್ರತಿನಿಧಿಸುತ್ತದೆ. ಅವೈಜ್ಞಾನಿಕ ರೀತಿಯ ಅಭಿವೃದ್ಧಿಯನ್ನು ನಿಲ್ಲಿಸುವ ಯಾವುದೇ ಉದ್ದೇಶವಿಲ್ಲದೆ ಮೆಟ್ಟಿಲು ನಿರ್ಮಿಸಿ ಉನ್ನತ ಸ್ಥಾನಕ್ಕೆ ಮೇಲೆ ಹೋಗಬೇಕೆಂಬ ಮಾನವ ಬಯಕೆಯನ್ನು ಮೆಟ್ಟಿಲುಗಳಲ್ಲಿ ತೋರಿಸಲಾಗಿದೆ. ಇಲ್ಲಿ ತೋರಿಸಲಾದ ವೃತ್ತಾಕಾರದ ಮೆಟ್ಟಲುಗಳ ಮೂಲಕ ಮಾನವನಲ್ಲಿರುವ ಕಟ್ಟುವ ಮತ್ತು ಮೇಲಕ್ಕೇರುವ ಕೊನೆಯಿಲ್ಲದ ಆಸೆಯನ್ನು ಸಾಂಖೇತಿಕವಾಗಿ ಚಿತ್ರಿಸಲಾಗಿದೆ."

ಕಲಾವಿದರಾದ ಅರ್ಪಣಾ ಕೌರ್, ಬೃಂದಾ ಮಿಲ್ಲರ್, ಆರ್. ಎಂ. ಪಳನಿಯಪ್ಪನ್, ಶಿಲ್ಪಿ ಲತಿಕಾ ಕಾಟ್, ಕಲಾ ಇತಿಹಾಸಕಾರ ಮಿಚೆಲ್ ಎಸ್. ಕ್ರಿಟ್ಸ್ ಮತ್ತು ಬಿಕಾನೆರ್ ಹೌಸ್‍ನ ಕ್ಯುರೇಟೋರಿಯಲ್ ನಿರ್ದೇಶಕಿ ಪ್ರಿಯಾ ಪಾಲ್ ಅವರು ಸ್ಪರ್ಧೆಗೆ ಪ್ರತಿಷ್ಠಿತ ತೀರ್ಪುಗಾರರಾಗಿದ್ದರು.

ಸಂತೋಷ್ ಅವರ ಬಹುಮಾನ ವಿಜೇತ ಕಲಾಕೃತಿಯನ್ನು ಆರ್ಟ್ ಹೌಜ್, ಚೆನ್ನೈ, ಕಲಾಕೃತಿ ಆರ್ಟ್ ಗ್ಯಾಲರಿ, ಹೈದರಾಬಾದ್ ಮತ್ತು ಕೋಲ್ಕತಾ ಸೆಂಟರ್ ಫಾರ್ ಕ್ರಿಯೇಟಿವಿಟಿ ಮುಂತಾದ ಪ್ರಸಿದ್ಧ ಗ್ಯಾಲರಿಗಳಲ್ಲಿ ಪ್ರದರ್ಶನಕ್ಕೆ ಇಡಲಾಗುವುದು.