ಸಂತಾಪ ಸಂದೇಶ ; ಡಿ. ವೀರೇಂದ್ರ ಹೆಗ್ಗಡೆಯವರು

1980ರಲ್ಲಿ ಸಿಂಡಿಕೇಟ್ ಬ್ಯಾಂಕಿನ ಎ.ಜಿ.ಎಂ. ಆಗಿದ್ದಾಗ ಕೆ. ಎಂ. ಉಡುಪರು ಧರ್ಮಸ್ಥಳಕ್ಕೆ ಬಂದಿದ್ದರು. ಲೋಕಾಭಿರಾಮವಾಗಿ ಮಾತನಾಡುವಾಗ ಸ್ವ-ಉದ್ಯೋಗದ ಬಗ್ಯೆ ನನ್ನ ಕೆಲವು ಚಿಂತನೆಗಳನ್ನು ಹೇಳಿದೆ. ಯುವ ಜನತೆ ಶಿಕ್ಷಣ ಪಡೆಯುವಾಗ ದೀರ್ಘಕಾಲದ ಅಭ್ಯಾಸ, ಬಂಡವಾಳ ಮತ್ತು ಉದ್ಯೋಗದ ನಿರೀಕ್ಷೆಯಲ್ಲಿರುತ್ತಾರೆ.

ಗ್ರಾಮೀಣ ಪ್ರದೇಶದಲ್ಲಿ ಅನೇಕ ಗುಡಿ ಕೈಗಾರಿಕೆ, ಗೃಹ ಕೈಗಾರಿಕೆಗಳನ್ನು ಮಾಡಲು ಅವಕಾಶವಿದೆ. ಇದನ್ನು ಏಕೆ ಜನರು ಮಾಡುತ್ತಿಲ್ಲ ಎಂಬುದು ಮಹತ್ವದ ಪ್ರಶ್ನೆಯಾಗಿದೆ ಎಂದು ಹೇಳಿದೆ.

ಇದನ್ನು ಕೇಳಿದ ಶ ಉಡುಪರು, ಸ್ವಾಮೀ, ಇದು ಒಳ್ಳೆಯ ಚಿಂತನೆ. ಸ್ವ-ಉದ್ಯೋಗಕ್ಕೆ ಪೂರಕವಾದ ತರಬೇತಿ ಕಾರ್ಯಕ್ರಮ ಮಾಡುವುದು ಸೂಕ್ತ ಎಂದರು. ಇದು ನನಗೆ ಅನಿರೀಕ್ಷಿತವಾಗಿದೆ. ಏಕೆಂದರೆ ದಿನವೂ ಇಂತಹ ಅನೇಕ ಕಲ್ಪನೆಗಳನ್ನು, ಚಿಂತನೆಗಳನ್ನು ಕೇಳುತ್ತೇನೆ. ಆದರೆ ದೀರ್ಘವಾಗಿ ಮತ್ತು ಆಳವಾಗಿ ಅಧ್ಯಯನ ಮಾಡಿ ಅದನ್ನು ಅಳವಡಿಸಿಕೊಳ್ಳುವ ಚಿಂತನೆ ಇರುವುದಿಲ್ಲ. ಆದರೆ ಅಂದು ಉಡುಪರು ಹೇಳಿದ ಘಳಿಗೆ “ಅಮೃತ ಘಳಿಗೆ”ಯಾಗಿದೆ.

ಸ್ವಾಮೀ, ನಾವು ಇಂತಹ ಸಂಸ್ಥೆಯೊಂದನ್ನು ಪ್ರಾರಂಭಿಸೋಣ. ಸಿಂಡಿಕೇಟ್ ಬ್ಯಾಂಕ್ ನಿಮ್ಮ ಜೊತೆ ಇದೆ ಎಂದರು.

ಕೆನರಾ ಬ್ಯಾಂಕಿನಲ್ಲಿ ಅವರ ಸಮಕಾಲೀನ ಅಧಿಕಾರಿಗಳನ್ನು ಸಂಪರ್ಕಿಸಿ, ಗ್ರಾಮೀಣಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಕೇಂದ್ರವನ್ನು 1982ರಲ್ಲಿ ಉಜಿರೆಯಲ್ಲಿ ಪ್ರಾರಂಭಿಸಿದೆವು. ಮುಂದೆ ರಾಷ್ಟ್ರಮಟ್ಟದಲ್ಲಿ, ವಿಶೇಷವಾಗಿ ಮಧುರೈ, ಗಜಿಯಾಬಾದ್, ಗುಜರಾತ್ ರಾಜ್ಯಗಳಲ್ಲಿಯೂ ಅವರೇ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿ ಶಾಖೆಗಳನ್ನು ಪ್ರಾರಂಭಿಸಿದೆವು. ಇದು ಇಂದು ಬೃಹತ್ ವಟವೃಕ್ಷವಾಗಿ ಬೆಳೆದಿರುವುದಕ್ಕೆ  ಉಡುಪರ ಉತ್ಸಾಹ ಮತ್ತು ಸಹಕಾರವೇ ಕಾರಣ.

ಅವರ ಸರಳತೆ, ಕರ್ತವ್ಯಪರತೆ ಮತ್ತು ಆಳವಾದ ಅನುಭವಗಳಿಂದಾಗಿ ನಮ್ಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಉತ್ತಮ ಪ್ರಗತಿ ಸಾಧಿಸಿದೆ. ಲಕ್ಷಾಂತರ ಮಂದಿ ನಿರುದ್ಯೋಗಿಗಳು ಸ್ವ-ಉದ್ಯೋಗಿಗಳಾಗಿ ಸ್ವಾವಲಂಬಿಗಳಾಗಿದ್ದಾರೆ.

ಉಡುಪರ ಆತ್ಮಕ್ಕೆ ಚಿರಶಾಂತಿ ದೊರಕುವಂತೆ ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ.