ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಹಾಯಕ ಪ್ರಾಧ್ಯಾಪಕ ಆಶಿತ್ ವಿ.ಕೆ ಇವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ.
ಇವರು ಮಣಿಪಾಲ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಾಹೆ ಇದರ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಗೌರೀಶ್‍ರಾವ್ ಕೆ ಇವರ ಮಾರ್ಗದರ್ಶನದಲ್ಲಿ “ಕ್ಯಾರಕ್ಟರೈಸೇಶನ್ ಆಫ್ ಸಿಲಾರ್ ಡೆಪಾಸಿಟೆಡ್ ಬೈನರೀ ಅಂಡ್ ಟರ್ನರೀ ಕಾಂಪೌಂಡ್ ಸೆಮಿಕಂಡಕ್ಟರ್‍ಥಿನ್ ಫಿಲಮ್ಸ್”ಎಂಬ ವಿಷಯದ ಕುರಿತು ತಮ್ಮ ಡಾಕ್ಟರೇಟ್ ಪದವಿಗಾಗಿ ಮಹಾ ಪ್ರಬಂಧವನ್ನು ಮಂಡಿಸಿರುವರು. ಪ್ರಯೋಗಾತ್ಮಕ ಭೌತಶಾಸ್ತ್ರ ಕ್ಷೇತ್ರದಲ್ಲಿ ಇವರ ಸಂಶೋಧನಾ ಲೇಖನಗಳು ಅನೇಕ ರಾಷ್ಟ್ರೀಯ ಮತ್ತು ಅಂತರ್‍ರಾಷ್ಟ್ರೀಯ ಮಟ್ಟದ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿರುತ್ತವೆ. ಇವರು ತಮ್ಮ ಸಂಶೋಧನೆಗೆ ಸಂಬಂಧಿಸಿದಂತೆ ಮದ್ರಾಸಿನ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮುಂಬೈಯ ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್, ತಂಜಾವೂರಿನ ಶಾಸ್ತ್ರ ಯೂನಿರ್ವಸಿಟಿ, ಪಾಲದ ಸಂತ ಥೋಮಸ್ ಕಾಲೇಜು, ಕಣ್ಣೂರಿನ ನಿರ್ಮಲಗಿರಿ ಕಾಲೇಜು, ಮಂಗಳೂರು ವಿಶ್ವವಿದ್ಯಾನಿಲಯ ಮುಂತಾದೆಡೆ ಜರಗಿದ ರಾಷ್ಟ್ರೀಯ ಹಾಗೂ ಅಂತರ್‍ರಾಷ್ಟ್ರೀಯ ಮಟ್ಟದ ವಿಚಾರಸಂಕಿರಣಗಳಲ್ಲಿ ತಮ್ಮ ಪ್ರಬಂಧಗಳನ್ನು ಮಂಡಿಸಿರುತ್ತಾರೆ.
ಇವರು ವಿವೇಕಾನಂದ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಹಾಗೂ ಮಂಗಳೂರು ವಿವಿಯಲ್ಲಿ ಭೌತಶಾಸ್ತ್ರ ವಿಷಯದಲ್ಲಿ ಎಮ್‍ಎಸ್ಸಿ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಡೆದಿರುತ್ತಾರೆ. ಸಂತ ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ 2019ರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡಿರುವ ಇವರು ತಮ್ಮ ಬೋಧನಾ ವೃತ್ತಿಯೊಂದಿಗೆ ವಿವಿಧ ರೀತಿಯ ಶೈಕ್ಷಣಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಇವರು ಬಂಟ್ವಾಳ ತಾಲೂಕಿನ ಕಲ್ಲಡ್ಕದ ನೆಟ್ಲ ನಿವಾಸಿಗಳಾಗಿರುವ ವಿಜಯ ಕುಮಾರ್ ಮತ್ತು ಸುನಿತಾ ದಂಪತಿಗಳ ಪುತ್ರರಾಗಿರುತ್ತಾರೆ.