ಮೂಡುಬಿದಿರೆ: ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಮುಖ್ಯ ಪ್ರಬಂಧಕ, ಹೆಸರಾಂತ ಮಾನವ ಸಂಪನ್ಮೂಲ ತರುಬೇತುದಾರ ಕೆ. ಗೋಪಾಲಕೃಷ್ಣ ಕಾಮತ್(64) ಕೀರ್ತಿ ನಗರದಲ್ಲಿನ ಸ್ವಗೃಹದಲ್ಲಿ ಗುರುವಾರ ಹೃದಯಾಘಾತದಿಂದ ನಿಧನರಾದರು. ಅವಿವಾಹಿತರಾಗಿದ್ದ ಅವರು 'ಗೋಪ್ಳಿ' ಎಂದೇ ಖ್ಯಾತರಾಗಿದ್ದು ಓರ್ವ ಸಹೋದರ, ಮೂವರು ಸಹೋದರಿಯರನ್ನು ಅಗಲಿದ್ದಾರೆ.
ಸಿಂಡಿಕೇಟ್ ಬ್ಯಾಂಕ್ ವಿವಿಧ ಶಾಖೆಗಳಲ್ಲಿ ಸುಮಾರು 37 ವರ್ಷಗಳ ಕಾಲ ಸೇವೆ ಸಲ್ಲಿಸಿ ಮಣಿಪಾಲ ಶಾಖೆಯಲ್ಲಿ ಮುಖ್ಯ ಪ್ರಬಂಧಕರಾಗಿ ನಿವೃತ್ತರಾಗಿದ್ದರು. ವಿಕಲಚೇತನರಾಗಿದ್ದ ಕಾರಣಕ್ಕೆ ಶಾರ್ಟ್ ಪ್ಯಾಂಟ್ ಹಾಫ್ ಶರ್ಟ್‍ಗೆ ಸೀಮಿತರಾಗಿ ಪಾದರಕ್ಷೆ ಧರಿಸಲಾಗದೇ ಇದ್ದರೂ ಬ್ಯಾಂಕ್ ಅಧಿಕಾರಿಯಾಗಿ ದೆಹಲಿಯಲ್ಲೂ ಸೇವೆ ಸಲ್ಲಿಸಿ ಸ್ನೇಹಮಯಿ ವ್ಯಕ್ತಿತ್ವದಿಂದ ಅವರು ಜನಾನುರಾಗಿಯಾಗಿದ್ದರು. ಜೆಸಿಐ ಮೂಡುಬಿದಿರೆ ತ್ರಿಭುವನ್ ಜೇಸೀಸ್‍ನ ದಶಮಾನೋತ್ಸವ ವರ್ಷದ ಅಧ್ಯಕ್ಷರಾಗಿ, ಸಕ್ರಿಯ ಸದಸ್ಯರಾಗಿ ,ವಲಯದ ಜನಪ್ರಿಯ ವ್ಯಕ್ತಿತ್ವ ವಿಕಸನ ತರಬೇತುದಾರರಾಗಿ, ಜೇಸೀ ವಲಯದ ಮಾರ್ಗದರ್ಶಕರಾಗಿದ್ದ ಅವರು ಸುಮಾರು 500ಕ್ಕೂ ಅಧಿಕ ತರಬೇತಿ ಕಾರ್ಯಕ್ರಮಗಳನ್ನು ನೀಡಿದ್ದರು. ಮೂಡುಬಿದಿರೆ ರೋಟರಿ ಕ್ಲಬ್ ಮೂಲಕವೂ ಸೇವಾರಂಗದಲ್ಲಿ ಸಕ್ರಿಯರಾಗಿದ್ದರು. ನಿವೃತ್ತಿಯ ಬಳಿಕ ತಮ್ಮ ಪರಿಸರದ ಹಲವಾರು ವಿದ್ಯಾರ್ಥಿಗಳಿಗೆ ಮನೆಯಲ್ಲೇ ಉಚಿತ ಟ್ಯೂಶನ್ ನೀಡುವ ಮೂಲಕ ಸೇವಾ ನಿರತರಾಗಿದ್ದರು.