ದುಬೈ:- ಕೊರೋನ ವೈರಸ್ ರೋಗಿಗಳನ್ನು ಎರಡು ಬಾರಿ ದುಬೈಗೆ ಕರೆದೊಯ್ದ ಆರೋಪದ ಮೇಲೆ ಏರ್ ಇಂಡಿಯಾ ವಿಮಾನಗಳ ಕಾರ್ಯಾಚರಣೆಯನ್ನು ದುಬೈ ವಿಮಾನ ನಿಲ್ದಾಣ ಪ್ರಾಧಿಕಾರವು ತಾತ್ಕಾಲಿಕವಾಗಿ ಸೆಪ್ಟೆಂಬರ್ 18ರಿಂದ ಅಕ್ಟೋಬರ್ 3ರ ತನಕ 15 ದಿನಗಳವರೆಗೆ ಸ್ಥಗಿತಗೊಳಿಸಿದೆ.
ದುಬೈಗೆ ಸಾಗಿಸಲ್ಪಟ್ಟ ಕೊರೋನ ವೈರಸ್ ರೋಗಿಗಳ ಎಲ್ಲಾ ವೈದ್ಯಕೀಯ ಮತ್ತು ಕ್ವಾರಂಟೈನ್ ಖರ್ಚುವೆಚ್ಚಗಳನ್ನು ಭರಿಸಲು ಏರ್ ಇಂಡಿಯಾಕ್ಕೆ ದಂಡ ವಿಧಿಸಲಾಗಿದೆ.
ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಹೊರತಾಗಿಯೂ ಎರಡು ಪ್ರತ್ಯೇಕ ಸಂದರ್ಭದಲ್ಲಿ ಇಬ್ಬರು ಕೊರೋನ ಪೀಡಿತ ಪ್ರಯಾಣಿಕರನ್ನು ಸಾಗಿಸಿರುವ ಆರೋಪದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ದುಬೈಗೆ 15 ದಿನಗಳ ಕಾಲ ಕಾರ್ಯಾಚರಣೆ ನಡೆಸುವುದಕ್ಕೆ ದುಬೈ ಸಿವಿಲ್ ಏವಿಯೇಷನ್ ಪ್ರಾಧಿಕಾರವು ತಾತ್ಕಾಲಿಕವಾಗಿ ನಿಷೇಧ ಹೇರಿದೆ.
ವಿಮಾನದಲ್ಲಿ ಪ್ರಯಾಣಿಸಿರುವ ಕೊರೋನ ವೈರಸ್ ಸೋಂಕಿತರು ಇತರ ಪ್ರಯಾಣಿಕರ ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟು ಮಾಡಿದ್ದಾರೆ ಎಂದು ಸೆಪ್ಟೆಂಬರ್ 2ರಂದು ಪತ್ರದ ಮೂಲಕ ನಾವು ನಿಮಗೆ ತಿಳಿಸಿದ್ದೇವೆ ಎಂದು ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.
ಕೊರೋನ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ದುಬೈ ವಿಮಾನ ನಿಲ್ದಾಣ ಆಗಮನ ಹಾಗೂ ನಿರ್ಗಮನಕ್ಕೆ ಸಂಬಂಧಿಸಿ ಕೊರೋನ ವೈರಸ್ ರೋಗಿಯನ್ನು ಸಾಗಿಸಿರುವುದು ಕಾರ್ಯವಿಧಾನಗಳ ನಿಯಮಗಳ ಉಲ್ಲಂಘನೆಯಾಗಿದೆ. ಹೀಗಾಗಿ ಸೆಪ್ಟೆಂಬರ್ 18 ರಿಂದ ಅಕ್ಟೋಬರ್ 2ರ ತನಕ 15 ದಿನಗಳ ಕಾಲ ದುಬೈ ವಿಮಾನ ನಿಲ್ದಾಣಗಳಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದೆ.
ದುಬೈಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳ ಪುನರಾರಂಭಕ್ಕಾಗಿ, ಇಂತಹ ಘಟನೆಗಳು ಮತ್ತೆ ಸಂಭವಿಸದಂತೆ ವಿವರವಾದ ಸರಿಪಡಿಸುವ ಕ್ರಮ ಅಥವಾ ಕಾರ್ಯವಿಧಾನವನ್ನು ಸಲ್ಲಿಸುವಂತೆ ಏರ್ ಇಂಡಿಯಾವನ್ನು ಕೋರಲಾಗಿದೆ.