ಅರಮನೆಯ ಅವಶೇಷದ
ಶಿಥಿಲ ಮೋಟು ಗೋಡೆ
ಬಿಕ್ಕಳಿಸುವ ಸದ್ದು
ಮಹಾರಾಣಿಯ ನಿಟ್ಟುಸಿರು !
ಸ್ಬಯಂವರ ಗೆದ್ದು
ಮೆರವಣಿಗೆಯಲ್ಲಿ ಬಂದು
ಬರವಣಿಗೆಯಿಲ್ಲದೆ
ಎದೆಯಲ್ಲಿ ಸಹಿ ಒತ್ತಿದ !
ಭವ್ಯ ಅರಮನೆ
ತುಂಬು ಸಂಸಾರ
ಕೋಡಿ ಬಿದ್ದು ಹರಿಯುವ ಪ್ರೀತಿ
ಮೈ ತುಂಬಾ ವಜ್ರ ವೈಢೂರ್ಯ
ಬಳುಕುವ ಮೈ
ಭಾರವಾಗಿತ್ತು !
ಮಹಾರಾಜನ ಎದೆಗೊರಗಿ
ಸುಖದ ಜೋಕಾಲಿಯಾಡುವ
ಮುದ್ದು ದಿನಗಳು !
ದೂರದಲ್ಲೆಲ್ಲೋ ರಣ ಕಹಳೆ !
ಗಡಬಡಿಸಿ ಎದ್ದ ಇನಿಯ
ಗಲ್ಲಕ್ಕೆ ಮುತ್ತಿಟ್ಟು
ಖಡ್ಗ ಸವರಿ
ರಣ ವೀಳ್ಯ ಪಡೆದು
ಹೊರಟೇ ಬಿಟ್ಟ !
ಕಂಕಣ ಕಟ್ಟಲು
ಮರೆತಳು ಮಡದಿ !
ವಿರಹದ ದಿನಗಳು
ದೇವರ ಮನೆಯಲ್ಲಿ !
ಮಂಗಳ ವಾದ್ಯಗಳು !
ನಲ್ಲ ಮರಳುತ್ತಿದ್ದಾನೆ
ಗೆದ್ದ ಸಾಮ್ರಾಜ್ಯ
ಬೊಕ್ಕಸದೊಡನೆ !
ಸಖಿ ಸಿಂಗರಿಸಿದಳು
ಬಾಡಿದ ಮುಡಿಯ
ಮಂಗಳಾರತಿಯೊಡನೆ
ಮುಸುಕು ಸರಿಸಿ
ರಾಜನಿಗೆ ತಿಲಕವಿರಿಸಿ
ಹೊಸಲೊಳಗೆ ಬರಲು
ಸಮ್ಮತಿಸಿದಳು
ಇನಿಯನ ಜೊತೆ
ಇನ್ನೆರಡು ಪಾದಗಳು !
ರಾಜ ಗೆದ್ದು ತಂದ
ಹೆಣ್ಣು ಪಾದಕ್ಕೆರಗಿ
"ಅಕ್ಕಾ" ಎಂದಳು !!
ಹೊಸತು ಹಳತಾಗಿ
ಹಳತು ಕೊಳೆತು
ಅರಮನೆ ತುಂಬಾ
ರಾಣಿಯರು !!
ಮಹಾರಾಣಿಯ ಹೃದಯದರಸ
ಈಗ ಹಲವು ರಾಣಿಯರ ದಾಸ !
ಅರಮನೆಯ ಪಳಿಯುಳಿಕೆಗಳಲ್ಲಿ
ಮಹಾರಾಣಿ
ಬದುಕಿದ್ದಾಳೆ
ಶಾಂತಿ ಕ್ರಾಂತಿಯ
ಕಹಳೆಯೂದುತಾ ...
- ವೈಲೆಟ್ ಪಿಂಟೋ, ಅರಸೀಕೆರೆ.