ದಿನದ ಎಲ್ಲಾ ಕೆಲಸ ಮುಗಿಸಿ ಮೊಬೈಲ್ ಕೈಗೆತ್ತಿಕೊಂಡೆ,  ಬಾಲ್ಯದ ಗೆಳತಿಯ ಸಂದೇಶವೊಂದು ಹೀಗಿತ್ತು. "ಊರಿನ ಜಾತ್ರೆ ಈ ಬಾರಿಯಾದರೂ ತಪ್ಪದೇ ಬಾ", ಖಂಡಿತಾ ಬರುತ್ತೇನೆ ಎಂದು ಉತ್ತರವನಿತ್ತೆ,  ಸುಮಾರು ವರುಷಗಳ ನಂತರ ನನ್ನ ಊರಿನ ಜಾತ್ರೆ ನೋಡುವ ಕಾತುರದಿಂದ ಮನಸ್ಸು ನಲಿದಾಡುತಿತ್ತು, ಹಾಗೆ ಮನಸ್ಸು ಬಾಲ್ಯದ ಊರಿನ ಜಾತ್ರೆಯ ದಿನಗಳನ್ನು ನೆನಪಿಸಿತು. ಒಂದು ಕ್ಷಣ ನೆನಪುಗಳು ಬಾಲ್ಯದ ಜೀವನದತ್ತವಾಲಿತು.

ಅದು ಹಿಂದೆ ಎಳೆದು ಬಿಟ್ಟಾಗ ಸ್ಪೀಡ್ ಆಗಿ ಹೋಗುವ ಕಾರ್ ತೇಗಿಬೇಕು, ಗೊಂಬೆ ಬೇಕು, ಕೋನ್ ಐಸ್ ಕ್ರೀಮ್ ತಿನ್ಬೇಕು,  ಫ್ರೆಂಡ್ಸ್ ಜೊತೆ ತಿರುಗ್ಬೇಕು....ಬಳೆಮಾಲೆ ತಕೋಳಬೇಕು... ಗೋಳಿಬಜೆ, ಪೋಡಿ ಚುರುಮುರಿ ತಿನ್ಬೇಕು.. ಹೊಸ ಡ್ರೆಸ್ ಹಾಕಿ ಕ್ಲಾಸ್ ಮೇಟ್ ಮುಂದೆ ಸ್ಟೈಲ್ ಮಾಡ್ಬೇಕು...... ರಾತ್ರಿ ಯಕ್ಷಗಾನ ಅಥವಾ ನಾಟಕ ಪೂರ್ತಿ ನೋಡ್ಬೇಕು... ಮೆರವಣಿಗೆಯಲ್ಲಿ ಧ್ವಜ ಹಿಡಿಬೇಕು... ಪಟಾಕಿ ಹೊಡಿವಾಗ ಮುಂದೆ ಹೋಗಿ ನೋಡ್ಬೇಕು... ಅಬ್ಬಾ..! ಊರ ಜಾತ್ರೆಗೆ ತಿಂಗಳು ಇರಬೇಕಾದ್ರೆ ನಮ್ಮ ಬೇಕುಗಳ ಪಟ್ಟಿ ಎಷ್ಟು ದೊಡ್ಡದಿತ್ತು. ನಮ್ಮ ಬೇಡಿಕೆ ಮಕ್ಕಳಾಟವಾದರೆ, ಮನೆಯಲ್ಲಿ ಹಿರಿಯದ್ದು ಬೇಡಿಕೆಗಳಿತ್ತು.

ಜಾತ್ರೆಗೆ ಮೊದಲು ಮನೆ ರಿಪೇರಿ ಆಗ್ಬೇಕು. ದೇವರಿಗೆ ಈ ಬಾರಿ ಸ್ವಲ್ಪ ದೊಡ್ಡ ಸೇವೆ ಮಾಡಿಸ್ಬೇಕು. ಮಕ್ಕಳಿಗೆ ಹೊಸ ಬಟ್ಟೆ ಕೊಡಿಸ್ಬೇಕು. ಮನೆಗೆ ಬರುವ ನೆಂಟರುಗಳಿಗೆ ಒಳ್ಳೆಯ ಊಟ ಹಾಕ್ಬೇಕು. ಕೋಳಿ ಅಂಕಕ್ಕೆ ಹೋಸ ಕೋಳಿ ತಯಾರಾಗಬೇಕು. ಇದೆಲ್ಲ ಮನೆ ಯಜಮಾನರ ಆಲೋಚನೆಗಳಾದರೆ, ಈ ಸಲ ದೇವರನ್ನು ಕಣ್ತುಂಬ ನೋಡಿ ಬರ್ಬೇಕು, ಮಕ್ಕಳು ಮರಿಮಕ್ಕಳು ಎಲ್ಲರನ್ನು ಒಟ್ಟಿಗೆ ನೋಡ್ಬೇಕು, ಮುಂದಿನ ವರ್ಷ ಇರುತ್ತೇವಾ.? ಇಲ್ಲವಾ..?  ಎನ್ನುವ ಹಿರಿಜೀವಗಳು.

ಇನ್ನು ಜಾತ್ರೆಯ ದಿನ ಮಕ್ಕಳ ಖುಷಿ ಹೆಚ್ಚಿಸಲೆಂದೆ ಬರುವ ಮಾವ, ಚಿಕ್ಕಪ್ಪ... ಜಾತ್ರೆಯ ನೆಪದಲ್ಲಿ ತವರು ಮನೆಗೆ ಬರುವ ಮಗಳು ಅಳಿಯ... ಪಟ್ಟಣದ ಗಡಿಬಿಡಿಯಿಂದ ಮುಕ್ತಿಗಾಗಿ ಊರಿನ ಗೌಜಿ ಗಮ್ಮತಿನಲ್ಲಿ ಭಾಗವಹಿಸಲು ಬರುವ ಮಕ್ಕಳು ಮರಿಮಕ್ಕಳು. ಇದು ಒಂದು ರೀತಿಯಾದರೆ. ದುಡಿಮೆ ಇಲ್ಲದೆಯೋ? ಅಥವಾ ದುಡಿದದ್ದನ್ನು ಅಂಕದಲ್ಲಿಯೋ? ಸಾರಾಯಿ ಅಂಗಡಿಯಲ್ಲಿಯೋ? ಕಳೆದುಕೊಂಡು ಜಾತ್ರೆಯ ದಿನ ಪೆಚ್ಚು ಮೋರೆ ಹಾಕಿಕೊಂಡ ಮನೆಗಳು ಇನ್ನೊಂದು ಕಡೆ,  ಹೊಸ ಹೊಸ ಕನಸು ಕಂಡು ಕೊನೆಗೆ ಏನೂ ಇಲ್ಲದೆ ಬಾಡಿದ ಮುಖ ಹೊತ್ತ ಮಕ್ಕಳು, ಏನೂ ಇಲ್ಲದೆ ಜಾತ್ರೆಯೇ ತನ್ನದೆಂಬ ಭಾವದಿಂದ ಅತ್ತಿಂದಿತ್ತ ಓಡಾಡಿ ಸಂತೃಪ್ತರಾಗುವವರು. 

ನಮ್ಮೆಲ್ಲ ಬೇಕು ಬೇಡಗಳ ನಡುವೆ ಆ ದೇವರ ಜಾತ್ರೆ ಸಂಭ್ರಮದಿಂದ ನಡೆಯುತ್ತಿತ್ತು. ಸುಂದರವಾಗಿ ಅಲಂಕಾರಗೊಂಡ ಆ ದೇವರನ್ನು ನೋಡುವುದೇ ಈ ಜನ್ಮದ ಪುಣ್ಯ, ಎಲ್ಲ ಬೇಡಿಕೆಗಳನ್ನು ಪೂರೈಸುತ್ತಾರೆ ಎನ್ನುವ ನಂಬಿಕೆ ಭರವಸೆ ಎಲ್ಲರ ಕಣ್ಣುಗಳಲ್ಲಿ,  ಈ ಜಾತ್ರೆ ಕೊಡುವ ಸಣ್ಣ ಸಣ್ಣ ಖುಷಿಗಳನ್ನು ನೆನಪಿಸುತ್ತ ಹೋದರೆ ಅದೇ ಜೀವನದ ಸುಂದರ ಸವಿನೆನಪು. ಈ ಬಾರಿ ತಪ್ಪದೆ ಹೋಗಿ ಈ ಎಲ್ಲಾ ನೆನಪುಗಳನ್ನು ಜೀವಂತವಾಗಿರಸಬೇಕು..

Article by

 

ಅಕ್ಷತಾ, ದ್ವಿತೀಯಬಿ.ಎಡ್

ಸಂತ ಅಲೋಶಿಯಸ್ ಶಿಕ್ಷಣ ತರಬೇತಿ ಸಂಸ್ಥೆ