ಮಂಗಳೂರು: ದೇಶದ ಅಗ್ರಗಣ್ಯ ಬ್ಯಾಂಕುಗಳಲ್ಲಿ ಒಂದಾಗಿರುವ ಕರ್ಣಾಟಕ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಓ ಮಹಾಬಲೇಶ್ವರ ಎಂ.ಎಸ್. ಅವರು, 2023-24 ರ ವಿತ್ತೀಯ ವರ್ಷದ ಪ್ರಥಮ ದಿನದಂದು ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ವೆಬೆಕ್ಸ್ ಮೂಲಕ ಸಿಬ್ಬಂದಿಗಳನ್ನು ಉದ್ದೇಶಿಸಿ ಹೊಸ ಹಣಕಾಸು ವರ್ಷದ ಕಾರ್ಯತಂತ್ರಗಳನ್ನು ವಿವರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು "ತಾತ್ಕಾಲಿಕ ಅಂಕಿ ಅಂಶಗಳ ಪ್ರಕಾರ 31.03.2023 ರ ಅಂತ್ಯಕ್ಕೆ ಬ್ಯಾಂಕಿನ ಒಟ್ಟು ವಹಿವಾಟು ಶೇ. 7.63ರ ಬೆಳವಣಿಗೆಯೊಂದಿಗೆ ರೂ. 1,48,694 ಕೋಟಿಗಳಾಗಿದ್ದು, ಠೇವಣಿಗಳು ರೂ. 87,362 ಕೋಟಿಗಳು, ಮುಂಗಡಗಳು ರೂ. 61,326 ಕೋಟಿಗಳಷ್ಟಾಗಿದೆ ಹಾಗೂ ಕಾಸಾ(CASA) ಠೇವಣಿಗಳು ಒಟ್ಟು ಠೇವಣಿಗಳ ಶೇ. 32.97 ರಷ್ಟಿದೆ. ಪ್ರಸಕ್ತ ವಿತ್ತೀಯ ವರ್ಷದಲ್ಲಿ ಅಂದರೆ 2023-24 ರಲ್ಲಿ ಬ್ಯಾಂಕಿನ ಒಟ್ಟು ವಹಿವಾಟುಗಳನ್ನು ಶೇ. 17.69 ರ ಬೆಳವಣಿಗೆಯೊಂದಿಗೆ ರೂ. 1,75,000 ಕೋಟಿಗಳಿಗೆ ಕೊಂಡೊಯ್ಯುವ ಯೋಜನೆಯಿದೆ. ಉಕ್ರೇನ್ ಯುದ್ಧದ ಪರಿಣಾಮಗಳು, ಹೆಚ್ಚಿದ ಠೇವಣಿ ಬಡ್ಡಿದರ ಹಾಗೂ ಇನ್ನೂ ಅನೇಕ ಜಾಗತಿಕ ಪ್ರತಿಕೂಲ ವಾತಾವರಣದ ನಡುವೆಯೂ ನಮ್ಮ ಬ್ಯಾಂಕ್ ಅಸೆಟ್ ಮತ್ತು ಲಯಾಬಿಲಿಟಿಗಳಲ್ಲಿ (ಸ್ವತ್ತುಗಳು ಮತ್ತು ಹೊಣೆಗಾರಿಕೆ) ನಿರಂತರ ಹಿಡಿತ ಸಾಧಿಸಿದುದಲ್ಲದೆ ಉತ್ತಮವಾಗಿ ಆಪತ್ತು ನಿರ್ವಹಣೆಯನ್ನು (Risk Management) ಮಾಡಿದುದರ ಪರಿಣಾಮವಾಗಿ ಕಳೆದ ವಿತ್ತೀಯ ವರ್ಷವನ್ನು ನಾವು ಸಮರ್ಪಕವಾಗಿ ನಿರ್ವಹಿಸಿದ್ದೇವೆ. ‘ಕೆಬಿಎಲ್ ವಿಕಾಸ್-2.0' ಪರಿವರ್ತನಾ ಪ್ರಕ್ರಿಯೆಯ ಭಾಗವಾದ ‘ಕೆಬಿಎಲ್ ನೆಕ್ಸ್ಟ್' ಅಡಿಯಲ್ಲಿ ಸಂಪೂರ್ಣ ಡಿಜಿಟಲ್ ವ್ಯವಹಾರವನ್ನು ಕೈಗೊಳ್ಳುವತ್ತ ಬ್ಯಾಂಕ್ ಮುನ್ನುಗ್ಗುತ್ತಿದೆ. ಕರ್ಣಾಟಕ ಬ್ಯಾಂಕ್ ತನ್ನ ಫಲಪ್ರದ ಅಸ್ತಿತ್ವದ ನೂರನೇ ವರ್ಷಕ್ಕೆ 18.02.2023 ರಂದು ಪಾದಾರ್ಪಣೆ ಮಾಡಿದೆ. ಬ್ಯಾಂಕಿಗೆ ಇದೊಂದು ಐತಿಹಾಸಿಕ ಕ್ಷಣ. ಇದನ್ನು ಇನ್ನಷ್ಟು ಸ್ಮರಣೀಯ ಹಾಗೂ ಅರ್ಥಪೂರ್ಣಗೊಳಿಸುವಲ್ಲಿ ಶತಮಾನ ವರ್ಷಪೂರ್ತಿ ಹಲವಾರು ದೂರಗಾಮಿ ಉಪಕ್ರಮಗಳನ್ನು ಬ್ಯಾಂಕ್ ಹಮ್ಮಿಕೊಂಡಿದ್ದು, ತನ್ನ ದ್ವಿತೀಯ ಶತಮಾನದ ಯಾನಕ್ಕೆ ಭದ್ರ ಬುನಾದಿಯನ್ನು ಹಾಕಿ ಸುದೃಢವಾಗಿ ಮುನ್ನುಗ್ಗುತ್ತಿದೆ" ಎಂದು ನುಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕಿನ ಎಕ್ಸೆಕ್ಯೂಟಿವ್ ಡೈರೆಕ್ಟರ್ ಶೇಕರ್ ರಾವ್ ಅವರು "ಹಲವಾರು ಜಾಗತಿಕ ಸವಾಲುಗಳ ನಡುವೆಯೂ ಕಳೆದ ವಿತ್ತೀಯ ವರ್ಷದಲ್ಲಿ ನಾವು ಉತ್ತಮ ಫಲಿತಾಂಶವನ್ನು ಸಾಧಿಸಿರುವುದು ತುಂಬಾ ಸಂತಸ ತಂದಿದೆ. ತಂತ್ರಜ್ಞಾನ ಕ್ಷೇತ್ರದ ಸಮರ್ಥ ನಿರ್ವಹಣೆ ಹಾಗೂ ಸುದೃಢ ಮುಂಗಡಗಳನ್ನು ಸಾಧಿಸುವ ಮೂಲಕ ಈ ವಿತ್ತೀಯ ವರ್ಷದಲ್ಲೂ ಕರ್ಣಾಟಕ ಬ್ಯಾಂಕ್ ಹೊಸಮೈಲುಗಲ್ಲನ್ನು ಸಾಧಿಸಲಿದೆ" ಎಂದು ನುಡಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಚೀಫ್ ಆಪರೇಟಿಂಗ್ ಆಫೀಸರ್ ಬಾಲಚಂದ್ರ ವೈ ವಿ, ಚೀಫ್ ಬಿಸಿನೆಸ್ ಆಫೀಸರ್ ಗೋಕುಲ್ ದಾಸ್ ಪೈ, ಇತರ ಉನ್ನತ ಅಧಿಕಾರಿಗಳು ಹಾಗೂ ಪ್ರಧಾನ ಕಛೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.