ಅಗ್ನಿ ಕುಂಡವೊಂದು ಸಿದ್ಧವಾಗಿದೆ, 

ಮಂತ್ರಘೋಷ ಮೊಳಗಿದೆ

ಕೆನ್ನಾಲಗೆಯ ಚಾಚಿದ ಬೆಂಕಿಗೆ 

ತುಪ್ಪದಾ ನೈವೇದ್ಯ. 

ಹೂವ ಹಾಸಿಗೆ ನಡೆದ ಪಾದ

ಸುತ್ತಿ ಸುತ್ತಿ ಕಾಡ ಸುತ್ತಿವೆ, 

ಕ್ರೂರ ಮೃಗಗಳ ಕಣ್ಣ ಬೇಟೆಗೆ

ತಿರುಗಿ ಬಾಣವ ಬಿಟ್ಟಿವೆ. 

ಕಲ್ಲು ಮುಳ್ಳು ಸರಿಸಿ ನಡೆದು

ಹೊಳೆ ಹಳ್ಳಗಳ ಜಿಗಿದು ದಾಟಿ

ಕಾಡ ಹಣ್ಣ ಸಿಹಿಯಾಗಿಸಿ, 

ಜೀವ ಜೀವ ನಲಿದಿದೆ. 

ಸಪ್ತ ಹೆಜ್ಜೆಗಳ ಜೊತೆಗೂಡಿಸಿ 

ಎಲ್ಲಾ ಕನಸುಗಳ ಹೊಸಕಿ

ಹೆಜ್ಜೆ ಹೆಜ್ಜೆಗಳೂ ನಡೆದು

ವರುಷಗಳೂ ಉರುಳಿವೆ. 

ಶಾಲು,ಕಚ್ಚೆ,ಪಂಚೆಯುಟ್ಟ ಜನರ 

ಭಾರಿ ಸಭೆ ನಡೆದಿದೆ. 

ಪ್ರಶ್ನೆ ,ಪ್ರಶ್ನೆ ,ಪ್ರಶ್ನೆಗಳ ಸಾಲು

ಸತ್ವ ಪರೀಕ್ಷೆ ನಡೆದಿದೆ. 

ಹೌದು!  ಅಗ್ನಿ ಕುಂಡವೊಂದು ಸಿದ್ಧವಾಗಿದೆ. 

ಗೊತ್ತಿದೆ ನನಗೆ ಅದು ಬೆಂಕಿ. 

ಸುಡುವುದು ಅದರ ಧರ್ಮ. 

ನಾ ಹಾರಲಾರೆ.... 

ನಾ ಆಹುತಿಯಾಗಲಾರೆ....

ನಾ ಸೀತೆಯಾಗಲಾರೆ.... 

ಯಾಕೆಂದರೆ ನೀ ರಾಮನಲ್ಲ. 


-ವಿ. ಸೀತಾಲಕ್ಷ್ಮಿವರ್ಮ