ಉಜಿರೆ: ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಸಂದರ್ಭದಲ್ಲಿ ಗುರುವಾರ ರಾತ್ರಿ ಮಹೋತ್ಸವ ಸಭಾಭವನದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಿತು.


ತೀರ್ಥಂಕರರು ತಮ್ಮ ದಿವ್ಯಧ್ವನಿಯಿಂದ ಧರ್ಮೋಪದೇಶ ನೀಡುವ ಧರ್ಮಸಭೆಗೆ ಸಮವಸರಣ ಎನ್ನುತ್ತಾರೆ. ಇಲ್ಲಿ ಸಕಲ ಜೀವಿಗಳಿಗೂ ಧರ್ಮೋಪದೇಶ ಪಡೆಯುವ ಅವಕಾಶವಿದೆ. ಜೈನರ ಆರಾಧನಾ ಕೇಂದ್ರಗಳಾದ ಬಸದಿಗಳು ಸಮವಸರಣದ ಪ್ರತೀಕವಾಗಿವೆ.
ಬೀಡಿನಿಂದ ಭವ್ಯ ಮೆರವಣಿಗೆಯಲ್ಲಿ ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಮೂರ್ತಿಯನ್ನು ಮಹೋತ್ಸವ ಸಭಾಭವನಕ್ಕೆ ಕೊಂಡುಹೋಗಿ ಅಲ್ಲಿ ಸಮವಸರಣ ಪೂಜೆ ನಡೆಸಲಾಯಿತು.
ಬಾಹುಬಲಿ ಸೇವಾಸಮಿತಿ ಆಶ್ರಯದಲ್ಲಿ ಧರ್ಮಸ್ಥಳದ ಶ್ರಾವಕರು-ಶ್ರಾವಕಿಯರಿಂದ ಅಷ್ಟವಿಧಾರ್ಚನೆ ಪೂಜೆ ನಡೆಸಲಾಯಿತು.
ಅನಿತಾಸುರೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರದ್ಧಾಅಮಿತ್, ಕುಮಾರಿ ಮಾನ್ಯ, ರಜತಾ ಹಾಗೂ ಶ್ರಾವಕಿಯರು ಪೂಜೆಯಲ್ಲಿ ಭಾಗವಹಿಸಿದರು.
ಅರುಣ ಮತ್ತು ಮಂಜುಳಾ ಜಿನಭಜನೆಗಳನ್ನು ಸುಶ್ರಾವ್ಯವಾಗಿ ಹಾಡಿದರು.
ಶಿಶಿರ್ ಇಂದ್ರ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.
ಹಿಮ್ಮೇಳದಲ್ಲಿ ರವಿರಾಜ ಉಜಿರೆ ಮತ್ತು ಶೋಧನ್ ಧರ್ಮಸ್ಥಳ ಸಹಕರಿಸಿದರು.
ಮಂಗಳೂರಿನ ಸುಕುಮಾರ್ ಬಳ್ಳಾಲ್ ನಿರ್ದೇಶನದಲ್ಲಿ ಸಾಣೂರು ಶ್ರೀಧರ ಪಾಂಡಿ ವಿರಚಿತ “ಕನಕ ಜ್ವಾಲೆ” ಯಕ್ಷಾಮೃತ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂತು.
ಡಾ. ಪ್ರಖ್ಯಾತ್ ಶೆಟ್ಟಿ ಭಾಗವತರಾಗಿ, ಚೆಂಡೆವಾದನದಲ್ಲಿ ಚಂದ್ರಶೇಖರ ಹಾಗೂ ಮದ್ದಳೆ ವಾದನದಲ್ಲಿ ಬಿ. ಜನಾರ್ದನ ತೋಳ್ಪಾಡಿತ್ತಾಯ ಸಹಕರಿಸಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವೀ. ಹೆಗ್ಗಡೆಯವರು, ಡಿ. ಸುರೇಂದ್ರಕುಮಾರ್, ಡಿ. ಹರ್ಷೇಂದ್ರಕುಮಾರ್, ಡಾ. ಸಿ.ಕೆ. ಬಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.