ಮುಂಬಯಿ: ಅಖಿಲ ಭಾರತ ತುಳು ಒಕ್ಕೂಟ (ರಿ.) ಮಂಗಳೂರು ಇದರ ಮುಂಬಯಿ ಸದಸ್ಯತನ ಅಭಿಯಾನಕ್ಕೆ ಮಂಗಳವಾರ ಮುಂಬಯಿಯಲ್ಲಿ ಚಾಲನೆ ನೀಡಲಾಯಿತು.

ಹಿರಿಯ ಸಂಘಟಕ ರವೀಂದ್ರನಾಥ ಎಂ. ಭಂಡಾರಿ, ಪ್ರಕಾಶ್ ಟಿ.ಶೆಟ್ಟಿ ನಲ್ಯ ಗುತ್ತು, ಒಕ್ಕೂಟದ ಕಾರ್ಯದರ್ಶಿ ಮೂಲ್ಕಿ ಕರುಣಾಕರ ಶೆಟ್ಟಿ, ಕೋಶಾಧಿಕಾರಿ ಚಂದ್ರಹಾಸ ದೇವಾಡಿಗ ಬೆದ್ರ, ಜೊತೆ ಕಾರ್ಯದರ್ಶಿ ಪಿ.ಎ ಪೂಜಾರಿ, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ, ತಾರಾನಾಥ್ ಶೆಟ್ಟಿ ಬೋಳಾರ ಉಪಸ್ಥಿತರಿದ್ದರು.

ಮುಂಬಯಿಯ ತುಳು ಸಂಘಟನೆಗಳ ಪ್ರಮುಖರ ಸಭೆಯನ್ನು ಗುರುವಾರ (ಜು.25) ಸಂಜೆ 3.00 ಗಂಟೆಗೆ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಆನೆಕ್ಸ್ ಕಟ್ಟಡದ ಸಭಾಂಗಣದಲ್ಲಿ  ಎ.ಸಿ. ಭಂಡಾರಿ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

1989 ರಲ್ಲಿ ಮಂಗಳೂರಿನಲ್ಲಿ ಸಂಘಟಿಸಲ್ಪಟ್ಟ ಅಖಿಲ ಭಾರತ ತುಳು ಒಕ್ಕೂಟ ಸಂಸ್ಥೆ ಕಳೆದ ಮೂರುವರೆ ದಶಕಗಳಲ್ಲಿ ದುಬೈ ಸೇರಿದಂತೆ ಹಲವು ಚಾರಿತ್ರಿಕ ತುಳು ಸಮ್ಮೇಳನಗಳನ್ನು ಸಂಘಟಿಸಿದೆ. ಈ ಸಂಘಟನೆಯಲ್ಲಿ ಈಗಾಗಲೇ ದೇಶ ವಿದೇಶಗಳ 45 ತುಳು ಸಂಘಟನೆಗಳು ಸದಸ್ಯತನ ಪಡೆದಿವೆ. ತುಳು ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ, ತುಳು ಸಂಘಟನೆಗಳಿಗೆ ಸ್ಫೂರ್ತಿ, ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ತುಳು ಸಂಘಟನೆಗಳನ್ನು ಒಕ್ಕೂಟದ ಸದಸ್ಯ ಸಂಸ್ಥೆಗಳಾಗಿ ನೋಂದಣಿ ಮಾಡಲಾಗುವುದು.

ದಿ| ಎಸ್.ಆರ್.ಹೆಗ್ಡೆ, ದಿ| ಅಡ್ಯಾರ್ ಮಹಾಬಲ ಶೆಟ್ಟಿ, ಲಯನ್ ದಿವಾಕರ ಶೆಟ್ಟಿ ಸಾಂಗ್ಲಿ, ಧರ್ಮಪಾಲ ಯು. ದೇವಾಡಿಗ ಮೊದಲಾದ ಕ್ರಿಯಾಶೀಲ ನಾಯಕರ ನೇತೃತ್ವದಲ್ಲಿ ಒಕ್ಕೂಟವು ಬೆಳೆದಿದ್ದು ಸದಸ್ಯ ಕೂಟಗಳ ಸಂಖ್ಯೆಯನ್ನು ನೂರರ ಗಡಿ ಮುಟ್ಟಿಸುವ ಸಂಕಲ್ಪ ಹೊಂದಿದೆ.

ಅನುಭವಿ ಸಂಘಟಕರಾದ ಕರ್ನೂರ್ ಮೋಹನ ರೈ ಹಾಗೂ ಅಶೋಕ ಪಕ್ಕಳ ಅವರು ಮುಂಬಯಿ ಸದಸ್ಯತನ ಅಭಿಯಾನದ ನೇತೃತ್ವ ವಹಿಸಲಿರುವರು ಎಂದು ಸಂಘಟಕರು ತಿಳಿಸಿದ್ದಾರೆ.