ಉಡುಪಿ:  ಜಿಲ್ಲೆಯಲ್ಲಿ ಆಗುವ ಜನನ ಮತ್ತು ಮರಣ ನೊಂದಣಿಯನ್ನು “ಜನನ ಮರಣ ನೋಂದಣಿ ಅಧಿನಿಯಮಗಳ” ಅನ್ವಯ ಪ್ರತಿಯೊಬ್ಬ ಸಾರ್ವಜನಿಕರು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.

ಅವರು  ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜನನ ಮರಣ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಜನನ ಹಾಗೂ ಮರಣ ದಾಖಲಾತಿಗಳು ಭವಿಷ್ಯದಲ್ಲಿ ಜೀವನದ ಅವಧಿಯ ಪ್ರತೀ ಹಂತದಲ್ಲಿಯೂ ಅವಶ್ಯಕತೆ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಸೂಕ್ತ ಪ್ರಾಧಿಕಾರದಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು ಎಂದರು.

ಈ ದಾಖಲಾತಿಗಳು ಅಗತ್ಯವಾಗಿರುತ್ತದೆ ಜನನ-ಮರಣ ಘಟನೆಗಳನ್ನು ಎಲ್ಲಾ ಸ್ಥಳೀಯ ಸಂಸ್ಥೆಗಳು ಹಾಗೂ ಸರ್ಕಾರಿ ಆಸ್ಪತ್ರೆಗಳು, ಇ- ಜನ್ಮ ತಂತ್ರಾಂಶದ ಮೂಲಕ ನೋಂದಣಿ ಮಾಡುವ ಕಾರ್ಯವನ್ನು ಕಡ್ಡಾಯವಾಗಿ ಮಾಡುವುದರೊಂದಿಗೆ ಶೇ. 100 ರಷ್ಟು ಪ್ರಗತಿ ಸಾಧಿಸಬೇಕು ಎಂದ ಅವರು, ಜನನ-ಮರಣ ಪ್ರಮಾಣ ಪತ್ರ ಕೋರಿ ಅರ್ಜಿ ಸಲ್ಲಿಸಿದಾಗ ವಿಳಂಬವಿಲ್ಲದೇ ಕಾಲಮಿತಿಯೊಳಗೆ ಜನನ ಮತ್ತು ಮರಣ ಪ್ರಮಾಣಪತ್ರಗಳನ್ನು ವಿತರಿಸುವಂತೆ  ಸೂಚನೆ ನೀಡಿದರು.

ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳನ್ನು ಜನನ ಹಾಗೂ ಮರಣ ಉಪನೋಂದಣಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ನಗರ ಹಾಗೂ ಗ್ರಾಮೀಣ ಭಾಗದಲ್ಲಿನ ಜನನ ಮರಣ ನೋಂದಣಾಧಿಕಾರಿಗಳು ಅಥವಾ ಉಪ ನೋಂದಣಾಧಿಕಾರಿಗಳು ಸಂಬಂಧಿಸಿದ  ಪ್ರದೇಶಗಳ ವರದಿಗಳನ್ನು ಸಕಾಲದಲ್ಲಿ ಸಲ್ಲಿಸಬೇಕು. ಅವುಗಳನ್ನು ಸಂರಕ್ಷಿಸಿ, ವ್ಯವಸ್ಥಿತವಾಗಿ ನಿರ್ವಹಿಸಬೇಕು ಎಂದರು.

ಜನನ, ಮರಣ ಮತ್ತು ನಿರ್ಜೀವ ಜನನಗಳನ್ನು ನೋಂದಾಯಿಸುವುದು ಕಡ್ಡಾಯವಾಗಿದ್ದು, ಜನನ-ಮರಣ ನೋಂದಣಿ ಮಾಹಿತಿಯನ್ನು ನಿಖರವಾಗಿ ಸಂಗ್ರಹಿಸಲು ಅನುಕೂಲವಾಗುವಂತೆ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್‌ಗಳು ಆಗಿಂದಾಗ್ಗೆ ಸಭೆ ನಡೆಸಿ, ಜನನ-ಮರಣ ದಾಖಲಾತಿಗಳು ನೂರರಷ್ಟು ಆಗಿದೆಯೇ ಎಂಬ ಬಗ್ಗೆ  ಪರಿಶೀಲನೆ ನಡೆಸಬೇಕು ಎಂದರು.

ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ 313 ನೋಂದಣಿ ಘಟಕಗಳು ಹಾಗೂ ನಗರ ಪ್ರದೇಶದಲ್ಲಿ 13 ಸೇರಿದಂತೆ ಒಟ್ಟು 326 ನೋಂದಣಿ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದ ಅವರು, 2024ರ ಜನವರಿಯಿಂದ ಜೂನ್‌ವರೆಗೆ 580 ಗ್ರಾಮಾಂತರದಲ್ಲಿ, 4890 ನಗರ ಪ್ರದೇಶದಲ್ಲಿ ಸೇರಿದಂತೆ ಒಟ್ಟು 5,470 ಜನನ ನೋಂದಣಿಯಾಗಿದೆ. 3324 ಗ್ರಾಮಾಂತರದಲ್ಲಿ, 2276 ಪಟ್ಟಣ ಪ್ರದೇಶದಲ್ಲಿ ಸೇರಿದಂತೆ ಒಟ್ಟು 5,600 ಮರಣ ಪ್ರಕರಣಗಳು ನೋಂದಣಿಯಾಗಿವೆ. 32 ನಿರ್ಜಿವ ಜನನ ಪ್ರಕರಣಗಳು ನೋಂದಣಿಯಾಗಿದೆ. ಲಿಂಗಾನುಪಾತವು 990 ಇದ್ದು, ಮರಣ ಪ್ರಮಾಣವು ಶೇ. 4.41 ಇರುವುದಾಗಿ ತಿಳಿಸಿದರು. 

ಜನನ-ಮರಣ ನೋಂದಣಿಯ ಅಗತ್ಯ ಹಾಗೂ ಪ್ರಾಮುಖ್ಯತೆ ಬಗ್ಗೆ ಗ್ರಾಮೀಣ ಹಾಗೂ ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ವ್ಯಾಪಕ ಪ್ರಚಾರವನ್ನು ಕೈಗೊಳ್ಳಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ, ಆಸ್ಪತ್ರೆಗಳಲ್ಲಿ ನೋಂದಣಿಯ ಮಹತ್ವ ಕುರಿತು ಅರಿವು ಮೂಡಿಸುವ ಫಲಕಗಳನ್ನು ಅಳವಡಿಸಬೇಕು ಎಂದರು. 

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎಮ್.ವಿ ದೊಡ್ಡಮನಿ ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.