ಉಡುಪಿ:  ವಿಕಲಚೇತನ ಮತ್ತು ಹಿರಿಯ ನಾಗರೀಕರಿಗೆ ಸಾಧನ ಸಲಕರಣೆಗಳನ್ನು ವಿತರಣೆಗಾಗಿ 7 ತಾಲೂಕುಗಳಲ್ಲಿ ನಡೆದ ಮೌಲ್ಯಮಾಪನ ಶಿಬಿರವು ಯಶಸ್ವಿಯಾಗಿ ಮುಕ್ತಾಯವಾಗಿದೆ. 

ಶಿಬಿರದಲ್ಲಿ 960 ಫಲಾನುಭವಿಗಳು ಭಾಗವಹಿಸಿದ್ದು, ವಿಕಲಚೇತನ ಮತ್ತು ಹಿರಿಯ ನಾಗರಿಕರಿಗೆ ಶಿಬಿರಗಳಲ್ಲಿ ವಿಕಲಚೇತನರ ಸಮಸ್ಯೆಗಳ ಬಗ್ಗೆ ತಪಾಸಣೆ ಮತ್ತು ಅರಿವು ಮೂಡಿಸಲಾಯಿತು. ಉಡುಪಿ ನಗರಸಭೆ, ಸ್ಥಳೀಯ ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್, ಪುರಸಭೆ ಮತ್ತು ಪಟ್ಟಣ ಪಂಚಾಯತ್‌ಗಳು ಶಿಬಿರದ ಯೋಜನೆಗೆ ಸಹಕರಿಸಿದವು. 

ಶಿಬಿರಕ್ಕೆ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಐ.ಪಿ. ಗಡಾದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲ ಸಿ.ಕೆ. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನ, ರೆಡ್ ಕ್ರಾಸ್ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು, ನೋಡಲ್ ಅಧಿಕಾರಿ ಜಯಶ್ರೀ ಮತ್ತು ಸಿಬ್ಬಂದಿ ವರ್ಗ, ತಾಲೂಕು ನಗರ ಮತ್ತು ಗ್ರಾಮೀಣ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು ಹಾಗೂ ಅಲಿಂಕೋ ಸಂಸ್ಥೆಯ ಅಧಿಕಾರಿಗಳು ಮಾರ್ಗದರ್ಶನ ನೀಡಿದ್ದರು. ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಜಿಲ್ಲಾಸ್ವತ್ರೆಯ ವೈದ್ಯರು ಶಿಬಿರದಲ್ಲಿ ಭಾಗವಹಿಸಿ, ಸಲಹೆ ಸೂಚನೆ ನೀಡಿದ್ದರು ಎಂದು ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಪ್ರಕಟನೆ ತಿಳಿಸಿದೆ.