ಮೂಡುಬಿದಿರೆ, ವಿದ್ಯಾಗಿರಿ: ‘ನಾನು ಬೆಳೆಯಬೇಕು ಎನ್ನುವುದಕ್ಕಿಂತ ನಾವು ಬೆಳೆಯಬೇಕು ಎಂಬ ಧ್ಯೇಯ ಹೊಂದಿದಾಗ ಪ್ರಗತಿ ವೇಗ ಸಾಧ್ಯ’ ಎಂದು ಪ್ರಾಂಶುಪಾಲ ಡಾ. ಕುರಿಯನ್ ಹೇಳಿದರು. 

ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ವಿಭಾಗವು ಹಮ್ಮಿಕೊಂಡ ‘ಪೋಷಕರ- ಶಿಕ್ಷಕರ ಸಭೆ’ಯಲ್ಲಿ ಶುಕ್ರವಾರ ಅವರು ಮಾತನಾಡಿದರು. 

ಶಿಕ್ಷಣವು ನಿಮ್ಮನ್ನು ಹೆಚ್ಚು ಮನುಷ್ಯನಾಗಿ ಮಾಡಬೇಕು. ಪದವಿ ಹಂತದಲ್ಲಿ ಪ್ರಾಧ್ಯಾಪಕರ ಜೊತೆ ನಿಕಟ ಸಂಪರ್ಕ ಹೊಂದಿರಬೇಕಾಗುತ್ತದೆ ಎಂದರು. 

ಜಗಳ ಮಾಡುವುದು ಹೇಡಿಯ ಲಕ್ಷಣ. ಸಹಬಾಳ್ವೆ ಆದರ್ಶ ಪುರುಷರ ಲಕ್ಷಣ ಎಂದು ಗಾಂಧಿ ಹೇಳಿದ್ದರು ಎಂದರು. 

ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ‘ಸೇವೆಯಲ್ಲಿ ಇರುವ ಸುಖ ಪಡೆಯುವುದರಲ್ಲಿ ಇಲ್ಲ. ಸಮಾಜ ಕಾರ್ಯ ವಿಭಾಗ  ವಿದ್ಯಾರ್ಥಿಗಳಲ್ಲಿ ಇಂಥ ಸೇವಾ ಮನೋಭಾವವನ್ನು ಹೊಂದಲು ಹುರಿದುಂಬಿಸುತ್ತದೆ ಎಂದರು. 

ಸಮಾಜ ಸೇವೆ ಮಾಡಿದಾಗ ಸಿಗುವ ಅವ್ಯಕ್ತ ಪರಮಾನಂದವೇ ಶ್ರೇಷ್ಠ. ಧನಾರ್ಜನ ಒಂದೇ ಬದುಕಿನ ಗುರಿಯಲ್ಲ. ಅಶಕ್ತರ ಸೇವೆ ಮಾಡಬೇಕು ಎಂದರು. 

ಸಮಾಜ ಕಾರ್ಯ ವಿಭಾಗದ ಸಂಯೋಜಕಿ ಡಾ. ಮಧುಮಾಲ ಕೆ ಪ್ರಸ್ತಾವಿಕ ನುಡಿಗಳನ್ನಾಡಿದರು.  ವಿಭಾಗದ ಪ್ರಾಧ್ಯಾಪಕಿ ಡಾ. ಸಪ್ನಾ, ಪವಿತ್ರಾ ಪ್ರಸಾದ್ ಇದ್ದರು. ವಿದ್ಯಾರ್ಥಿನಿ ಜ್ಯೋತಿ ಜಾಗೃತಿ ಗೀತೆ ಹಾಡಿದರು. ವಿದ್ಯಾರ್ಥಿ ಅಬ್ದುಲ್ ರೆಹಮಾನ್ ಸ್ವಾಗತಿಸಿ, ವಿಶಾಲ್ ಕಾರ್ಯಕ್ರಮ ನಿರೂಪಿಸಿದರು. ಸುರಕ್ಷಾ ವಂದಿಸಿದರು.