ಉಜಿರೆ: ಯುವಜನತೆ ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು ಆರ್‍ಸೆಟಿ ಮತ್ತು ರುಡ್‍ಸೆಟ್ ಸಂಸ್ಥೆಗಳ ಮೂಲಕ ನಿರುದ್ಯೋಗಿಗಳಿಗೆ ನೀಡುತ್ತಿರುವ ಮಾಹಿತಿ, ಮಾರ್ಗದರ್ಶನ ಮತ್ತು ತರಬೇತಿ ಹಾಗೂ ಬ್ಯಾಂಕುಗಳಿಂದ ನೀಡುವ ಆರ್ಥಿಕ ನೆರವಿನಿಂದ ಎಲ್ಲರೂ ಇಂದು ಸ್ವ-ಉದ್ಯೋಗದ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ದೇಶದ ಪ್ರಗತಿಗೆ ಅಮೂಲ್ಯ ಸೇವೆ ನೀಡುತ್ತಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. 

ಅವರು ಗುರುವಾರ ಧರ್ಮಸ್ಥಳದಲ್ಲಿ ಶ್ರೀ ಸನ್ನಿಧಿ ಅತಿಥಿಗೃಹದಲ್ಲಿ ಆಯೋಜಿಸಿದ ರುಡ್‍ಸೆಟ್ ಸಂಸ್ಥೆಗಳ ನಿರ್ದೇಶಕರುಗಳು ಮತ್ತು ತರಬೇತುದಾರರ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಇಲಾಖೆಯೊಂದಿಗೆ ಮಾಡಿಕೊಂಡ ಒಪ್ಪಂದದಂತೆ, ತರಬೇತಿ ಸಂಸ್ಥೆಗಳ ಕಟ್ಟಡ ನಿರ್ಮಾಣ ಹಾಗೂ ನಿವೇಶನಕ್ಕೆ ಪೂರ್ಣ ಸಹಕಾರ ಸಿಗುತ್ತದೆ. 

ಪ್ರಗತಿಗೆ ಮಿತಿ ಎಂಬುದು ಇಲ್ಲ. ಇಂದಿನ ಸ್ಪರ್ಧಾಯುಗದ ಬೇಡಿಕೆಯಂತೆ ಅವಶ್ಯಕವಾದ ಅಲ್ಪಾವಧಿ ತರಬೇತಿ ನೀಡಿ ಸ್ವಯಂ ಉದ್ಯೋಗ ಮಾಡಲು ಪ್ರೋತ್ಸಾಹ ನೀಡಲಾಗುತ್ತದೆ. ಹೊಸ ತರಬೇತಿ ಕಾರ್ಯಕ್ರಮಗಳನ್ನೂ ರೂಪಿಸಲಾಗುತ್ತದೆ.

ಮಹಿಳೆಯರು ಕೂಡಾ ಸ್ವಯಂ ಉದ್ಯೋಗ ಕ್ಷೇತ್ರಕ್ಕೆ ಬಂದು ಸ್ವಾವಲಂಬಿ ಜೀವನ ನಡೆಸುವುದರ ಮೂಲಕ ಮಹಿಳಾ ಸಬಲೀಕರಣವೂ ಆಗುತ್ತಿದೆ. ಇಂದು ಪದವೀಧರರು ಹಾಗೂ ಸ್ನಾತಕೋತ್ತರ ಪದವೀಧರರೂ ಸ್ವಯಂ-ಉದ್ಯೋಗ ಕ್ಷೇತ್ರಕ್ಕೆ ಬರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು. 

ಆರ್‍ಸೆಟಿ ಮತ್ತು ರುಡ್‍ಸೆಟ್ ಸಂಸ್ಥೆಗಳಲ್ಲಿ ನೀಡುವ ತರಬೇತಿ ಮಾದರಿಯಾಗಿದ್ದು, ಉತ್ತಮ ಪರಿಣಾಮ ಬೀರುತ್ತದೆ. ತರಬೇತುದಾರರು ಆತ್ಮೀಯತೆಯಿಂದ ಆಪ್ತ ಸಮಾಲೋಚನೆಯೊಂದಿಗೆ ತರಬೇತಿ ಪಡೆಯುವವರ ಸಮಸ್ಯೆ, ಸವಾಲುಗಳನ್ನು ಸೌಹರ್ದಯುತವಾಗಿ ಪರಿಹರಿಸಿ ಪ್ರೇರಣೆ ನೀಡಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು. ದೇಶದೆಲ್ಲೆಡೆ 519 ಆರ್‍ಸೆಟಿ ಮತ್ತು ರುಡ್‍ಸೆಟ್ ಸಂಸ್ಥೆಗಳ ಮೂಲಕ ಉತ್ತಮ ತರಬೇತಿ ನೀಡಿ ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆಅಮೂಲ್ಯ ಕೊಡುಗೆ ನೀಡಲಾಗುತ್ತದೆ ಎಂದು ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು.

ಶುಭಾಶಂಸನೆ ಮಾಡಿದ ಕೆನರಾ ಬ್ಯಾಂಕಿನ ಮಂಗಳೂರು ವೃತ್ತದ ಮಹಾಪ್ರಬಂಧಕ ಬಿ. ಸುಧಾಕರ ಕೊಟಾರಿ ತರಬೇತಿ ಪಡೆದ ನಿರುದ್ಯೋಗಿಗಳು ತಮಗೆ ಸಮೀಪದ ಬ್ಯಾಂಕಿನಿಂದ ಸಾಲ ಪಡೆದು ಸದುಪಯೋಗ ಮಾಡಬೇಕು. ಶಾಖಾ ಪ್ರಬಂಧಕರು ಸಾಲ ಮಂಜೂರಾತಿಗೆ ವಿಳಂಬ ಮಾಡಿದಲ್ಲಿ, ತಕ್ಷಣ ತನ್ನ ಗಮನಕ್ಕೆ ತರಬೇಕು ಎಂದು ಸಲಹೆ ನೀಡಿದರು.

ತರಬೇತಿ ಪಡೆದವರು ಬ್ಯಾಂಕ್ ಶಾಖೆ ಮತ್ತು ತರಬೇತಿ ಸಂಸ್ಥೆಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ಹೇಳಿದರು.

ಆರ್‍ಸೆಟಿಗಳ ರಾಷ್ಟ್ರೀಯ ನಿರ್ದೇಶಕ ಜಿ. ಮುರುಗೇಶನ್  ಮಾತನಾಡಿ, ಪ್ರಸ್ತುತ ಅವಶ್ಯಕತೆಯಂತೆ ತರಬೇತಿ, ಹೊಸ ಪಠ್ಯಕ್ರಮವನ್ನು ರೂಪಿಸಲಾಗುತ್ತದೆ. ನಿರುದ್ಯೋಗ ಸಮಸ್ಯೆ ನಿವಾರಣೆಯಲ್ಲಿ ರುಡ್‍ಸೆಟ್ ಮತ್ತು ಆರ್‍ಸೆಟಿ ಗಳ ಸೇವೆ ಬಗ್ಯೆ ಸಮೀಕ್ಷೆ ನಡೆಸಲಾಗುತ್ತದೆ. ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ ಕೂಡಾ ಈ ಬಗ್ಯೆ ಮಾರ್ಗದರ್ಶನ ನೀಡುತ್ತಿದೆ ಎಂದರು. ಎಲ್ಲರೂ ಸೇವಾ ಮನೋಭಾವ ಹಾಗೂ ಸಮರ್ಪಣಾ ಭಾವನೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಸಲಹೆ ನೀಡಿದರು.

ಸಂಸ್ಥೆಗಳ ಕೇಂದ್ರೀಯ ಕಾರ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಗಿರಿಧರ ಕಲ್ಲಾಪುರ್ ವರದಿ ಸಾದರ ಪಡಿಸಿ ಆರಂಭದಿಂದ 1,816 ಗ್ರಾಮಾಭಿವೃದ್ಧಿ ಕಾರ್ಯಕ್ರಮಗಳ ಮೂಲಕ 85,916 ಮಂದಿ ಅದರ ಪ್ರಯೋಜನ ಪಡೆದಿರುತ್ತಾರೆ. ಪ್ರಸಕ್ತ ವರ್ಷ 47 ಕಾರ್ಯಕ್ರಮಗಳ ಮೂಲಕ 1,712 ಮಂದಿಗೆ ತರಬೇತಿ ನೀಡಲಾಗಿದೆ.

ಕೌಶಲಾಭಿವೃದ್ಧಿ ತರಬೇತಿ, ಸ್ವಯಂಉದ್ಯೋಗದ ಬಗ್ಯೆ ಅರಿವು, ಜಾಗೃತಿ ಮಾಡಿಸುವುದು, ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಕ್ರಮ, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದವರಿಗೆ ಹಾಗೂ ಜೈಲುವಾಸಿಗಳಿಗೆ ಸ್ವಯಂಉದ್ಯೋಗ ತರಬೇತಿ ನೀಡಲಾಗಿದೆ.

ಮಹಿಳಾ ಸಬಲೀಕರಣ, ಪರಿಸರ ಸಂರಕ್ಷಣೆ, ಆರ್ಥಿಕ ಸಾಕ್ಷರತೆ ರಕ್ತದಾನ ಶಿಬಿರ ಇತ್ಯಾದಿ ಚಟುವಟಿಕೆಗಳನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಗಿರಿಧರ ಕಲ್ಲಾಪುರ್ ಸ್ವಾಗತಿಸಿದರು. ಉಜಿರೆ ರುಡ್‍ಸೆಟ್ ಸಂಸ್ಥೆಯ ನಿರ್ದೇಶಕ ಎಂ. ಸುರೇಶ್‍ ಧನ್ಯವಾದವಿತ್ತರು. ಹಿರಿಯ ಉಪನ್ಯಾಸಕಿ ಅನಸೂಯಾ ಕಾರ್ಯಕ್ರಮ ನಿರ್ವಹಿಸಿದರು.