ಜನ ಮರುಳೋ ಜಾತ್ರೆ ಮರುಳೋ ಅನ್ನೋ ಗಾದೆ ಮಾತೊಂದಿದೆ. ಪ್ರಸ್ತುತ ನಮ್ಮ ಪರಿಸ್ಥಿತಿಗಳು ಇದೆ ಆಗಿದೆ !! ಯಾವುದೇ ವಸ್ತು, ವ್ಯಕ್ತಿ, ಅಥವಾ ಮತ್ತೇನಾದರೂ ಆಗಿರಲಿ. ಸುಲಭವಾಗಿ ಸಿಕ್ಕಿದ್ದರ ಬೆಲೆ ನಮಗೆ ತಿಳಿಯುವುದಿಲ್ಲವಂತೆ. ಯಾರಿಗಾದರೂ ಮೌಲ್ಯಯುತವಾದದನ್ನೇನಾದರೂ ಕೊಡ ಬಯಸಿದರೆ, ಮೊದಲು ಅದರ ಆಗುಹೋಗುಗುಗಳ ಅರಿವು, ಮತ್ತು ಅದರ ಮುಂದಿನ ಪರಿಣಾಮ ಏನು ಎನ್ನುವ ಪ್ರಜ್ಞೆ ಇರಬೇಕು. ಅದರಿಂದ ಯಾರಿಗೆ ಏನು ಮತ್ತು ಎಷ್ಟು ಅನುಕೂಲ ಹಾಗೂ ಅನಾನುಕೂಲವಿದೆ ಎಂದು ಲೆಕ್ಕಾಚಾರ ಮಾಡಿರಬೇಕು. ಅದರಲ್ಲೂ ನಮ್ಮ ಪರಿಮಿತಿಗಳನ್ನು ಮೀರಿ ಸಮಾಜಕ್ಕಾಗಿ ಮತ್ತು ನಮ್ಮ ಮುಂದಿನ ಪೀಳಿಗೆಗಳ ಸುಂದರ ನಾಳೆಗಾಗಿ ಎನ್ನುವ ವಿಚಾರ ಬಂದಾಗ ನಮ್ಮ ಯೋಚನೆಗಳ ವಿಸ್ತಾರ ಅಧಿಕವಿರಬೇಕು. ಅಧಿಕಾರದ ಆಸೆಗೋ ಅಥವಾ ಹೆಸರು ಮಾಡುವ ಹುಚ್ಚಿಗೋ ಬಿದ್ದು ಬೇಕಾಬಿಟ್ಟಿ ನಿರ್ಧಾರಗಳನ್ನು ಮಾಡಿದರೆ ಅದರ ಪರಿಣಾಮಗಳನ್ನು ಒಂದಿಡೀ ಸಮಾಜ ಎದುರಿಸಬೇಕಾಗಬಹುದು ಎನ್ನುವ ಎಚ್ಚರ ಬೇಕೇ ಬೇಕು ಅಲ್ಲವೇ ?

ಇದಕ್ಕೆ ಈಗಿನ ಪರಿಸ್ಥಿತಿಗಳ ಉದಾಹರಣೆ ತೆಗೆದುಕೊಳ್ಳೋಣ. ಭಾಗ್ಯಗಳ ಹರಿಕಾರ ಎಂದು ಸರ್ಕಾರ ಏನೋ ಉಚಿತ ಬಸ್ ಪ್ರಯಾಣ ಮಹಿಳೆಯರಿಗಾಗಿ ಎಂದು ಘೋಷಿಸಿದೆ. ಮಹಿಳೆಯರ ಕಲ್ಯಾಣಕ್ಕಾಗಿ ಅಥವಾ ಸಮಾನತೆಗಾಗಿ, ಹಾಗೆ ಹೀಗೆ ಎಂದು ಏನೇನೋ ಟ್ಯಾಗ್ ಲೈನ್ಗಳನ್ನು ಕೊಡಬಹುದು. ಆದರೆ ನಿಜಕ್ಕೂ ಇದರ ಅವಶ್ಯಕತೆ ಯಾರಿಗೆ ಇದೆ ? ಎಷ್ಟು ಜನ ಸರಿಯಾಗಿ ಈ ಯೋಜನೆಯನ್ನು ಬಳಸಿಕೊಳ್ಳುತ್ತಿದ್ದಾರೆ ? ಅಗತ್ಯವಿರುವವರಿಗಿಂತ ಬಿಟ್ಟಿಯಾಗಿ ಅವಕಾಶ ಸಿಕ್ಕಿದೆ, ಯಾಕೆ ಬಿಡೋದು ಎನ್ನುವ ಭಾವನೆಯಲ್ಲಿ ಪ್ರಯಾಣಿಸುತ್ತಿರುವವರೇ ಹೆಚ್ಛೇನೋ !?ಇದೇ ಭಾವ ಆ ಗಾದೆ ಮಾತಿನದ್ದು. ಇದಕ್ಕೆ ಸಂಬಂಧಿಸಿದಂತೆ ದಿನ ಬೆಳಗಾದರೆ ನಾವು ಸಾಕಷ್ಟು ಸುದ್ದಿಗಳನ್ನು ಕಾಣುತ್ತಿದ್ದೇವೆ. ಅದು ಸಮಾಜದ ಉದ್ದಾರಕ್ಕೆ ಪೂರಕವಾಗಿದೆಯೋ ?ಇಲ್ಲ ಮಾರಕವಾಗಿದೆಯೋ ? ಎಂದು ಯೋಚಿಸಬೇಕಾದ ಅವಶ್ಯಕತೆ ಖಂಡಿತ ಎದ್ದಿದೆ ಅಲ್ಲವಾ ?

ನಾನು ಮೇಲೆಯೇ ಹೇಳಿದಂತೆ ಯಾರಿಗೆ ಯಾವುದು ಎಷ್ಟು ಅಗತ್ಯವೋ, ಅದನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸಿ ಅವನ ಸೌಖ್ಯ ಕಾಯಬೇಕಿರುವುದು, ಸಮಾಜ ಕಾಯುವ ಮತ್ತು ಉದ್ದರಿಸುವ ಹೊಣೆ ಹೊತ್ತವರ ಆದ್ಯ ಕರ್ತವ್ಯ ಅಲ್ಲವೇ ? ಅಗತ್ಯವಿರುವಲ್ಲಿ ಹೆಗಲು ಕೊಡದೆ ಅನಗತ್ಯವಾದ ಕಡೆ ತೋಳ ಚಾಚಿ ಹೋದರೆ, ಕೊನೆಗೆ ಹೆಗಲಾಗಬೇಕಾದ ಕಡೆ ಬಲ ಕಳೆದುಕೊಂಡು ಪರಿತಪಿಸುವ ಪರಿಸ್ಥಿತಿ ಎದುರಾಗುವುದರಲ್ಲಿ ಸಂಶಯವಿಲ್ಲ !! ಉಚಿತ ಪ್ರಯಾಣ ಯಾರಿಗೆ ಹೆಚ್ಚು ಅವಶ್ಯಕತೆಯಿತ್ತು? ಅವರಿಗೆ ದಕ್ಕಬೇಕಿತ್ತು. ಅಥವಾ ಇನ್ನಿತರ ಯಾವುದೇ ಯೋಜನೆಯ ಫಲಾನುಭವಿ ಅದನ್ನ ಪಡೆಯಲು ನಿಜವಾಗಿ ಯೋಗ್ಯನೇ ? ಎನ್ನುವುದರ ಅಂದಾಜು ಬೇಕಿತ್ತು ಅಲ್ಲವೇ ? ಎಲ್ಲೆಡೆ ಉಚಿತ ಶಿಕ್ಷಣ, ಉತ್ತಮ ಅರೋಗ್ಯಕ್ಕಾಗಿ ಅಗತ್ಯವಿರುವವರಿಗೆ ಅಗತ್ಯವಿರುವಲ್ಲಿ ಉಚಿತ ಚಿಕಿತ್ಸೆ, ಇನ್ನೂ ಹೀಗೆ ಅತೀ ಅಗತ್ಯಗಳ ಪಟ್ಟಿ ಸಾಕಷ್ಟಿವೆ. ಆದರೆ ನಮಗೆ ಸಿಗುತ್ತಿರುವುದರಲ್ಲಿ ಅನಗತ್ಯವೇ ಹೆಚ್ಚು ತುಂಬಿಕೊಂಡಿದೆಯಾ?, ಮುಂದೆ ಅದರ ಪರಿಣಾಮಕ್ಕೆ ಸಮಾಜದ ತಲೆದಂಡ ಆಗುವುದಿದೆಯಾ !? ಯೋಚಿಸಬೇಕಾದ ಸಮಯ.

ಹಳೆ ರೋಡಿನ ಮೇಲೆ ಹೊಸ ಡಾಂಬರು ಹಾಕಿ ಬಿಲ್ ಗಳ ಲೆಕ್ಕ ಕುದುರಿಸುವವರ ನಡುವೆ, ಜನಸಾಮಾನ್ಯರ ಬದುಕಿನ ದಿಕ್ಕು ಬದಲಿಸುವ ಕಾರ್ಯಾಗಾರಗಳನ್ನು, ಸಾಮಾಜಿಕ ಕಳಕಳಿಯ ನಿಟ್ಟಿನಲ್ಲಿ ಕೆಲಸ ಮಾಡುವವರನ್ನು ನಿರೀಕ್ಷಿಸಬಹುದೇ ಪ್ರಸ್ತುತ ನಾವು !? ನಿರೀಕ್ಷೆಗಳು ಸುಳ್ಳಾಗಬಹುದೇನೋ!! ಎನ್ನುವ ಭೀತಿಯಿದೆ ನನಗೆ. ಆದರೆ ನಮ್ಮ ಆಯ್ಕೆಗಳ ಫಲ ನಾವೇ ಉಣ್ಣಬೇಕು ಅಲ್ಲವೇ !? ಏನಂತೀರಿ ?

_ಪಲ್ಲವಿ ಚೆನ್ನಬಸಪ್ಪ ✍️