ಮಂಗಳೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಜಪ್ಪಿನಮೊಗರು ಇದರ 17ನೇ ವರ್ಷದ ಜಪ್ಪಿನಮೊಗರು ಗಣೇಶೋತ್ಸವದ ಅಂಗವಾಗಿ ಪ್ರಥಮ ವರ್ಷದ “ಆಟಿದ ಒಂಜಿ ನೆಂಪು” ಎಂಬ ತುಳು ಸಾಂಸ್ಕೃತಿಕ ಕಾರ್ಯಕ್ರಮ ಜಪ್ಪಿನಮೊಗರು ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಇದೇ ಭಾನುವಾರ ಬೆಳಿಗ್ಗೆ 10:30 ರಿಂದ ಮದ್ಯಾಹ್ನದವರೆಗೆ ನಡೆಯಿತು. ತುಳು ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಪರಿಗಳ ಪ್ರದರ್ಶನ ಹಾಗೂ ಬಾಲ ಪ್ರತಿಭೆಗಳಿಂದ ಜನಪದ ನೃತ್ಯ ಕಾರ್ಯಕ್ರಮಗಳು ತುಳು ಕಾಲಮಿತಿ ಯಕ್ಷಗಾನ (ನಾಟ್ಯಗುರು ಜಯಕರ ಪಂಡಿತ್ ಬಳಗದಿಂದ) “ಬಪ್ಪನಾಡು ಕ್ಷೇತ್ರ ಮಹಾತ್ಮೆ“ ಮೊದಲಾದ ಕಾರ್ಯಕ್ರಮ ನಡೆಯಿತು. ಚೆಂಡೆ ಕೊಂಬು ವಾದ್ಯ ಘೋಷಣೆಗಳೊಂದಿಗೆ ಅತಿಥಿಗಳನ್ನು ಗಣೇಶೋತ್ಸವ ಕಛೇರಿಯಿಂದ ಸಭಾಂಗಣಕ್ಕೆ ಸ್ವಾಗತಿಸಲಾಯಿತು.
ಬಿಂದಿಯಾ ಶೆಟ್ಟಿ ಹಾಗೂ ಯೋಗೇಶ್ ಶೆಟ್ಟಿ ಬಜೆ ಹಿತ್ಲುರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಟಿದ ಮದಿಪು ನೀಡಲು ಮುಖ್ಯ ಅತಿಥಿಗಳಾಗಿ ಖ್ಯಾತ ತುಳು ವಿದ್ವಾಂಸರಾದ ಕೆ.ಕೆ. ಪೇಜಾವರ (ಮುಖ್ಯೋಪಾಧ್ಯಾಯರು, ವಿದ್ಯಾದಾಯಿನಿ ಪ್ರೌಢಶಾಲೆ ಸುರತ್ಕಲ್) ಆಗಮಿಸಿದ್ದು, ತುಳು ಸಂಪ್ರದಾಯ, ಸಂಸ್ಕೃತಿ ಹಾಗೂ ಆಚರಣೆಗಳ ಬಗ್ಗೆ ಮಾಹಿತಿ ನೀಡಿದರು. ವೈಶಾಲಿ ಹಾಗೂ ಶೈಲೇಶ್ ಪೂಜಾರಿ ತಂದೊಳಿಗೆ, ಗೀತಾ ಹಾಗೂ ರಮೇಶ್ಚಂದ್ರ (ಉದ್ಯಮಿ) ಜಪ್ಪಿನಮೊಗರು, ಡಾ| ಕವಿತಾ ಐವನ್ ಡಿʼಸೋಜಾ,(ಪ್ರಸೂತಿ ತಜ್ಞೆ), ಸವಿತಾ ಲ್ಯಾನ್ಸಿ ಡಿʼಸೋಜಾ (ಉದ್ಯಮಿ), ಲ| ಸಂತೋಷ್ ಪೂಂಜಾ, (ಅಧ್ಯಕ್ಷರು ಲಯನ್ಸ್ ಕ್ಲಬ್ ಮಂಗಳಾದೇವಿ), ಟಿ. ಪ್ರವೀಣ್ ಚಂದ್ರ ಆಳ್ವ, (ನಿಕಟ ಪೂರ್ವ ಕಾರ್ಫೋರೇಟರ್) ಮೊದಲಾದ ಗಣ್ಯರು ಭಾಗವಹಿಸಿದ್ದರು.
ಅತಿಥಿಗಳಿಂದ ವೈಶಾಲಿ ಶೈಲೇಶ್ ಪೂಜಾರಿಯವರು ಹಲಸಿನ ಹಣ್ಣುನ್ನು ಕತ್ತರಿಸುವ ಮೂಲಕ ಚಾಲನೆ ನೀಡಿದರೆ, ಚೆನ್ನೆಮಣೆ ಆಟ, ಬೀಸುವ ಕಲ್ಲಿನಲ್ಲಿ ಅಕ್ಕಿ ಪುಡಿ ಮಾಡುವುದು ತೆಂಗಿನಕಾಯಿ ಪಂಥ ಮೊದಲಾದ ತುಳು ಸಾಂಸ್ಕೃತಿಕ ಕ್ರೀಡೆಗಳನ್ನು ಅಡಿಸಲಾಯಿತು.
ನಂತರ ಸಮಿತಿಯ ಮಹಿಳಾ ಸದಸ್ಯರು ಹಾಗೂ ಇತರ ಸದಸ್ಯರಿಂದ ತಯಾರಿಸಲಾದ ತುಳು ನಾಡಿನ ವಿವಿಧ 31 ಬಗೆಯ ಖಾದ್ಯಗಳ ಭೋಜನದ ವ್ಯವಸ್ಥೆಯನ್ನು ಸಾರ್ವಜನಿಕರಿಗಾಗಿ ಏರ್ಪಡಿಸಲಾಯಿತು. ಸಮಿತಿ ಅಧ್ಯಕ್ಷರಾದ ಜೆ. ನಾಗೇಂದ್ರ ಕುಮಾರ್ ಸ್ವಾಗತಿಸಿದರು. ಕಾರ್ಯಾಧ್ಯಕ್ಷರಾದ ಸುಧಾಕರ್ ಜೆ. ರವರು ಧನ್ಯವಾದವಿತ್ತರು ಖ್ಯಾತ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರ್ವಹಿಸಿದರು.