ಮಂಗಳೂರು:- ಎಪಿಎಂಸಿ ಅಧ್ಯಕ್ಷರು ನ್ಯಾಯಯುತವಾಗಿ ಆದ್ಯತೆಯ ಮೇಲೆ ಅರ್ಜಿ ನೋಡಿ 214 ಅಂಗಡಿ ಗೋದಾಮು ಹಂಚಿದ್ದಾರೆ. ಆದರೆ ಶಾಸಕ ಭರತ್ ಶೆಟ್ಟಿ ಕಡೆಯವರು ಒತ್ತಡ ಹೇರಿ, ಹಣ ಕಟ್ಟಿದವರಿಗೆ ಅಲಾಟ್ ಆದ ಅಂಗಡಿ ಸಿಗದಂತೆ ಮಾಡುತ್ತಿದ್ದಾರೆ ಎಂದು ಮಾಜೀ ಶಾಸಕ ಮೊಯ್ದಿನ್ ಬಾವಾ ಆರೋಪಿಸಿದರು.

ಮೂರು ವರುಷದ ಹಿಂದೆ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಜಿಡಬ್ಲ್ಯೂಡಿ ಮಂತ್ರಿ ಮಹದೇವಪ್ಪರ ಮೂಲಕ ಸುರತ್ಕಲ್ ಪ್ರದೇಶದಲ್ಲಿ ಹೊಸ ಮಾರುಕಟ್ಟೆಗೆ 160 ಕೋಟಿ ಅನುಮತಿ ಪಡೆದು ಅದರಲ್ಲಿ 60 ಕೋಟಿ ಆಗಲೆ ಕಾರ್ಪೊರೇಷನಿಗೆ ಬಂದಿದೆ. ಆದರೆ ಬಿಜೆಪಿ ಅದನ್ನು ದಾರಿ ತಪ್ಪಿಸಿದೆ. ನಾವು ಹಿಂದಿನ ವ್ಯಾಪಾರಿಗಳಿಗೆ ಅವಕಾಶ ನೀಡಿದ್ದೆವು, ಹೊರತು ಪಕ್ಷದವರಿಗಾಗಲಿ ಹಿಂಬಾಲಕರಿಗಾಗಲಿ ನೀಡಿಲ್ಲ. ಆದರೆ ‌ಭರತ್ ಶೆಟ್ಟಿಯವರು ವ್ಯಾಪಾರ ಮಾಡಿ ಅನುಭವ ಇಲ್ಲದ ಭರತ್ ರಾಜ್ ಎಂಬವರನ್ನು ವ್ಯಾಪಾರಿಗಳ ಅಧ್ಯಕ್ಷರಾಗಿಸಿದ್ದಾರೆ. ಎಪಿಎಂಸಿ ಅಧ್ಯಕ್ಷರು ನ್ಯಾಯಯುತವಾಗಿ ಹಂಚಿದ್ದನ್ನು ಬದಲಿಸಿ ಬಿಜೆಪಿ ಮಂದಿಗೆ ಹಂಚಿದ್ದಾರೆ. ಇನ್ನೂ ಹಂಚಲು ಒತ್ತಾಯ ಹಾಕುತ್ತಿದ್ದಾರೆ. 

ಮಳೆಗಾಲದಲ್ಲಿ ಕಷ್ಟದ ನಡುವೆ ಎಪಿಎಂಸಿಗೆ ಹೋಗಿ ವ್ಯಾಪಾರ ಮಾಡಿದವರಿದ್ದಾರೆ. ಈ ಎಂಟು ತಿಂಗಳು ಸರಿಯಾಗಿ ಬಾಡಿಗೆ ಕಟ್ಟಿದ್ದಾರೆ. ಆದರೆ ಭರತ್ ರಾಜ್ ಗುಂಪು ಬಾಡಿಗೆಯನ್ನೂ ಕಟ್ಟದೆ ಇನ್ನೂ ಹೆಚ್ಚೆಚ್ಚು ಎಪಿಎಂಸಿ ‌ಮಳಿಗೆಗಳನ್ನು ಪಡೆಯಲು ‌ಪ್ರಯತ್ನ ನಡೆಸಿರುವುದು ಖಂಡನೀಯ. ನಿಜವಾದ ವ್ಯಾಪಾರಿಗಳಿಗೆ ನ್ಯಾಯ ಕೊಡಿಸಬೇಕು ಎಂದು ಬಾವಾ ಒತ್ತಾಯಿಸಿದರು. 

ನಾವು ಪಾರದರ್ಶಕವಾಗಿ ಸುರತ್ಕಲ್ ನಲ್ಲಿ ಹಂಚಿದ್ದೇವೆ. ಆದರೆ ಮಾರುಕಟ್ಟೆ ಕಟ್ಟುವ ಕೆಲಸ ನಡೆಯದಂತೆ ಹಾಲಿ‌ ಶಾಸಕರ ಕಡೆಯವರು ಮಸಲತ್ತು‌ ನಡೆಸಿದ್ದಾರೆ. ಕೃಷ್ಣಾಪುರ ಜನತಾ ಕಾಲೊನಿಯಲ್ಲಿ 600 ಮನೆ ಬಡವರಿಗೆ ಹಂಚಿಕೆ ಮಾಡಲಾಗಿದೆ. ಅದು ಈಗ ಮುಗಿದಿದ್ದರೂ ಹಿಂದಿನ ಹಂಚಿಕೆ ರದ್ದು ಮಾಡಿ ತಮ್ಮವರಿಗೆ ಹಂಚಲು ಶಾಸಕ ಭರತ್ ಶೆಟ್ಟಿ ‌ಕಡೆಯವರು ಬಾಲ ಬಿಚ್ಚುತ್ತಿದ್ದಾರೆ. ಹಾಗಾದಲ್ಲಿ ಬಡವರಿಗೆ ಅನ್ಯಾಯವಾಗುತ್ತದೆ. ಮಾಧ್ಯಮದವರು ನ್ಯಾಯ ಕೊಡಿಸುವ ಜವಾಬ್ದಾರಿ ಹೊರಬೇಕು. ಈ ಅನ್ಯಾಯ ನಿಲ್ಲದಿದ್ದರೆ ಬೀದಿಗಿಳಿದು ಪ್ರತಿಭಟಿಸುವುದಾಗಿ ಮೊಯ್ದಿನ್  ಬಾವಾ ಪ್ರಕಟಿಸಿದರು.

ಕಾರ್ಪೊರೇಟರ್ ಆಗಿದ್ದ ಪ್ರತಿಭಾ ಕುಳಾಯಿ ಮಾತನಾಡಿ ಒಬ್ಬೊಬ್ಬ ಕಾರ್ಪೊರೇಟರ್ ಬೇನಾಮಿಯಾಗಿ ಮತ್ತು ಹೆಸರಿನಲ್ಲೂ ಹಲವು ಅಂಗಡಿ ಮಳಿಗೆ ಪಡೆಯುವುದು ನಾಚಿಕೆಗೇಡು ಎಂದರು. ಪತ್ರಿಕಾಗೋಷ್ಠಿಯಲ್ಲಿ ಬಶೀರ್ ಬೈಕಂಪಾಡಿ, ಸದಾಶಿವ ಶೆಟ್ಟಿ, ಗೋವರ್ಧನ ಶೆಟ್ಟಿಗಾರ್, ಮಾಧವ ಸುವರ್ಣ, ಆನಂದ ಅಮೀನ್ ಮೊದಲಾದವರು ಇದ್ದರು.