ಬೆಳ್ತಂಗಡಿ:  ಭಾರತೀಯ ಜೈನ್‌ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್ ಮತ್ತು ರಾಷ್ಟ್ರೀಯ  ಉಪಾಧ್ಯಕ್ಷರಾದ ಡಿ. ಅನಿತಾ ಸುರೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಜೈನ್‌ಮಿಲನ್ ಸಹಯೋಗದೊಂದಿಗೆ ನ. 24ರಂದು ಭಾನುವಾರ ಬೆಳ್ತಂಗಡಿಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದಲ್ಲಿ ಮಂಗಳೂರು ವಿಭಾಗ ಮಟ್ಟದ ಜಿನ ಭಜನಾ ಸ್ಪರ್ಧೆ ನಡೆಯಲಿದೆ ಎಂದು ಜಿನ ಭಜನಾ ಸ್ಪರ್ಧೆಯ ಸಂಯೋಜಕರಾದ ಉಜಿರೆಯ ಸೋನಿಯಾ ಯಶೋವರ್ಮ ಮತ್ತು ಬೆಳ್ತಂಗಡಿ ಜೈನ್‌ಮಿಲನ್ ಅಧ್ಯಕ್ಷರಾದ ಡಾ. ನವೀನ್ ಕುಮಾರ್ ಜೈನ್, ಉಜಿರೆ ತಿಳಿಸಿದ್ದಾರೆ.

ನ.24 ರಂದು ಭಾನುವಾರ ಪೂರ್ವಾಹ್ನ ಗಂಟೆ 9.30ಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಜಿನ ಭಜನಾ ಸ್ಪರ್ಧೆ ಉದ್ಘಾಟಿಸುವರು.

ಭಾರತೀಯ ಜೈನ್‌ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್ ಅಧ್ಯಕ್ಷತೆ ವಹಿಸುವರು.

ಪೆರಿಂಜೆ, ಪಡ್ಯಾರಬೆಟ್ಟ ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಜೀವಂಧರ ಕುಮಾರ್, ವೇಣೂರು ದಿಗಂಬರ ಜೈನತೀರ್ಥ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಪ್ರವೀಣಕುಮಾರ್ ಇಂದ್ರ ಮತ್ತು ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಮುಖ್ಯ ಅತಿಥಿಗಳಾಗಿ  ಶುಭಾಶಂಸನೆ ಮಾಡುವರು.

ಸಂಜೆ ಗಂಟೆ 4.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸುದರ್ಶನ ಜೈನ್, ಬಂಟ್ವಾಳ ಸಮಾರೋಪ ಭಾಷಣ ಮಾಡುವರು.

ಭಾರತೀಯ ಜೈನ್‌ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್ ಅಧ್ಯಕ್ಷತೆ ವಹಿಸುವರು.

ಭವ್ಯ ಪಿಂಛಿ ಪರಿವರ್ತನಾ ಸಮಾರಂಭ

ನಾರಾವಿ ಬಳಿ ಇರುವ ಹೊಸ್ಮಾರು ಸಿದ್ಧರವನ ಭಗವಾನ್ ಮಹಾವೀರಸ್ವಾಮಿ ಬಸದಿಯಲ್ಲಿ ಚಾತುರ್ಮಾಸ ವೃತಾಚರಣೆಯಲ್ಲಿರುವ ಪೂಜ್ಯ ಆರ್ಯಿಕಾ ಮುಕ್ತಿಮತಿ ಮಾತಾಜಿ ಅವರ ಭವ್ಯ ಪಿಂಛಿ ಪರಿವರ್ತನಾ ಸಮಾರಂಭ ಇದೇ 17 ರಂದು ಭಾನುವಾರ ನಡೆಯಲಿದೆ ಎಂದು ಚಾತುರ್ಮಾಸ ಸಮಿತಿ ಅಧ್ಯಕ್ಷ ಎನ್. ಪ್ರೇಮ್ ಕುಮಾರ್ ಹೊಸ್ಮಾರು ತಿಳಿಸಿದ್ದಾರೆ.

ಭಾನುವಾರ ಬೆಳಿಗ್ಯೆ ಗಂಟೆ 7.30 ರಿಂದ ಬಸದಿಯಲ್ಲಿ ಸಾಮೂಹಿಕ ಪಂಚಪರಮೇಷ್ಠಿ ಆರಾಧನೆ ನಡೆಯಲಿದೆ.

ಅಪರಾಹ್ನ ಗಂಟೆ 2.30ರಿಂದ ಪೂಜ್ಯ ಆರ್ಯಿಕಾ ಮುಕ್ತಿಮತಿ ಮಾತಾಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಕಾರ್ಕಳ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡುವರು.

ಭಾರತೀಯ ಜೈನ್‌ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷ  ಡಿ. ಸುರೇಂದ್ರ ಕುಮಾರ್ ಅಧ್ಯಕ್ಷತೆ ವಹಿಸುವರು.

ಭಾರತೀಯ ಜೈನ್‌ಮಿಲನ್ ರಾಷ್ಟ್ರೀಯ  ಮಹಿಳಾ ಕಾರ್ಯಾಧ್ಯಕ್ಷರಾದ ಅನಿತಾ ಸುರೇಂದ್ರ ಕುಮಾರ್, ಸುದರ್ಶನ್ ಜೈನ್, ಬಂಟ್ವಾಳ ಮತ್ತು ಮಂಗಳೂರಿನ ಜೈನ್ ಟ್ರಾವೆಲ್ಸ್ ಮಾಲಕ ರತ್ನಾಕರ್ ಜೈನ್ ಮುಖ್ಯ ಅತಿಥಿಗಳಾಗಿ ಶುಭಾಶಂಸನೆ ಮಾಡುವರು.

ಹೊರನಾಡು ಜಯಶ್ರೀ ಜೈನ್ ಮತ್ತು ಬಳಗದವರಿಂದ ಜಿನಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.

ನ. 14: ಧರ್ಮಸ್ಥಳದಲ್ಲಿ ಆಸನ ವ್ಯವಸ್ಥೆಗಳನ್ನು ಹೊಂದಿರುವ ಭೋಜನಾಲಯ ಉದ್ಘಾಟನೆ

ಧರ್ಮಸ್ಥಳದಲ್ಲಿ ಅನ್ನಪೂರ್ಣ ಭೋಜನಾಲಯದ ಮೇಲಂತಸ್ತಿನಲ್ಲಿ ನಿರ್ಮಿಸಲಾದ ಸುಸಜ್ಜಿತ ಆಸನ ವ್ಯವಸ್ಥೆಗಳನ್ನು ಹೊಂದಿರುವ ಭೋಜನಾಲಯವನ್ನು ಇದೇ 14 ರಂದು ಗುರುವಾರ ಸಂಜೆ 5 ಗಂಟೆಗೆ ಕಂಚಿ ಕಾಮಕೋಟಿ ಪೀಠಾಧಿಪತಿ ಪೂಜ್ಯ ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿ ಉದ್ಘಾಟಿಸುವರು.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು.

ಶಾಸಕರುಗಳಾದ ಹರೀಶ್ ಪೂಂಜ ಮತ್ತು ಕೆ. ಪ್ರತಾಪಸಿಂಹ ನಾಯಕ್, ಕೆ.ಪಿ. ಸಿ.ಸಿ. ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಕೆ. ಹರೀಶ್ ಕುಮಾರ್ ಮತ್ತು ಡಿ. ಸುರೇಂದ್ರ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭಾಶಂಸನೆ ಮಾಡುವರು.

ಧರ್ಮಸ್ಥಳದಲ್ಲಿ ಕನ್ನಡ ಭುವನೇಶ್ವರಿ ರಥ 

ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಕನ್ನಡ ಭುವನೇಶ್ವರಿ ರಥಕ್ಕೆ ಮಾಲಾರ್ಪಣೆ ಮಾಡಿ ರಥಯಾತ್ರೆ ಸುಗಮವಾಗಲಿ ಎಂದು ಹಾರೈಸಿದರು.

ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಉಳಿಸಿ, ಬೆಳೆಸುವಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರೇರಕವಾಗಲಿ: ಡಿ. ವೀರೇಂದ್ರ ಹೆಗ್ಗಡೆಯವರು.

ಉಜಿರೆ: ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಮ್ಮ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸುವಲ್ಲಿ ಮಂಡ್ಯದಲ್ಲಿ ನಡೆಯಲಿರುವ 27ನೆ ಅಖಿಲ ಭಾರತ  ಕನ್ನಡ ಸಾಹಿತ್ಯ ಸಮ್ಮೇಳನ ಪ್ರೇರಕವಾಗಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹಾರೈಸಿದರು.

ಶನಿವಾರ ಧರ್ಮಸ್ಥಳಕ್ಕೆ ಆಗಮಿಸಿದ ಕನ್ನಡ ಭುವನೇಶ್ವರಿ ರಥಕ್ಕೆ ಮಾಲಾರ್ಪಣೆ ಮಾಡಿ  ಗೌರವಿಸಿದ ಹೆಗ್ಗಡೆಯವರು ಗ್ರಾಮೀಣ ಪ್ರದೇಶವಾದ ಧರ್ಮಸ್ಥಳದಲ್ಲಿ ಅಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಡಾ. ಹಂಪನಾ ನೇತೃತ್ವದಲ್ಲಿ 51ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿರುವುದನ್ನು ಧನ್ಯತೆಯಿಂದ ಸ್ಮರಿಸಿದರು.

ಕನ್ನಡ ಭುವನೇಶ್ವರಿ ರಥಯಾತ್ರೆ ಸುಗಮವಾಗಲಿ ಎಂದು ಹಾರೈಸಿದ ಹೆಗ್ಗಡೆಯವರು, ಕನ್ನಡ ಸಾಹಿತ್ಯ ಸಮ್ಮೇಳನವು ನಾಡು, ನುಡಿ ಮತ್ತು ಸಂಸ್ಕೃತಿ ಬಗ್ಯೆ ಅಭಿಮಾನ, ಅರಿವು ಹಾಗೂ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು.

ಡಿ. ಹರ್ಷೇಂದ್ರ ಕುಮಾರ್, ದಕ್ಷಿಣಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ ಬೆಳ್ತಂಗಡಿ ತಾಲ್ಲೂಕು ಘಟಕದ ಅಧ್ಯಕ್ಷ ಯದುಪತಿ ಗೌಡ, ದೇವಳ ಪಾರುಪತ್ಯಗಾರರಾದ ಲಕ್ಷ್ಮೀನಾರಾಯಣ ರಾವ್, ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ ಉಪಸ್ಥಿತರಿದ್ದರು.