ಬೆಳ್ತಂಗಡಿ. ಏ 23. “ವ್ಯಸನಮುಕ್ತ ಸಮಾಜ ನಿರ್ಮಾಣದ ನಿಟ್ಟಿನಲ್ಲಿ 1992ರಿಂದ ಸ್ಥಾಪನೆಗೊಂಡ ಈ ವೇದಿಕೆಯು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 37 ಜಿಲ್ಲಾ ವೇದಿಕೆ ಹಾಗೂ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ 15 ತಾಲೂಕು ವೇದಿಕೆಗಳನ್ನು ಒಳಗೊಂಡಿದೆ. ಈ ಮೂಲಕ ಸಮಾಜದ ಅನಿಷ್ಠಗಳ ವಿರುದ್ಧ ಹೋರಾಡುವ ವ್ಯಸನಮುಕ್ತ ಸಮಾಜ ನಿರ್ಮಾಣ ನಮ್ಮ, ನಿಮ್ಮೆಲ್ಲರ ಹೊಣೆ ಎಂದು ತಿಳಿದು ಯಾವುದೇ ಫಲಾಪೇಕ್ಷೆ ಇಲ್ಲದೆ ಶ್ರಮಿಸುವ, ಸಮಾಜದ ಉನ್ನತ ಸ್ಥಾನಮಾನದಲ್ಲಿರುವ, ವಿವಿಧ ಪಕ್ಷದಲ್ಲಿರುವ, ಸಮಾನಮನಸ್ಕ,ಬಂಧು ಭಗಿನಿಯರು ಈ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಕಳೆದ ಮೂರು ದಶಕಗಳಿಂದ ಕಾರ್ಯೋನ್ಮುಖವಾಗಿದೆ.
ಮದ್ಯವರ್ಜನ ಶಿಬಿರ, ಜಾಗೃತಿ ಕಾರ್ಯಕ್ರಮಗಳು, ಸ್ವಾಸ್ಥ ಸಂಕಲ್ಪ ಕಾರ್ಯಕ್ರಮಗಳು, ಗ್ರಾಮಸ್ವಾಸ್ಥ್ಯ ಕಾರ್ಯಕ್ರಮಗಳು, ಗ್ರಾಮ ಸುಭೀಕ್ಷಾ ಕಾರ್ಯಕ್ರಮಗಳು, ಹಕ್ಕೊತ್ತಾಯ ಮತ್ತು ಜನಾಭಿಪ್ರಾಯ ಮಂಡನೆ, ನವಜೀವನ ಸಮಿತಿಗಳು, ಸ್ವಉದ್ಯೋಗ ತರಬೇತಿಗಳು., ಮುಂತಾದ ಕಾರ್ಯಕ್ರಮಗಳನ್ನು ಜನರ ಭಾಗವಹಿಸುವಿಕೆಯಿಂದ ಹಮ್ಮಿಕೊಂಡು ಜನಪ್ರಿಯವೆನಿಸಿದೆ. ಶಿಬಿರಗಳಿಗೆ ಮತ್ತು ವೇದಿಕೆಯ ಸರ್ವ ಚಟುವಟಿಕೆಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಾರ್ಷಿಕ 6 ಕೋಟಿಗೂ ಮಿಕ್ಕಿದ ಅನುದಾನ ನೀಡಲಾಗುತ್ತಿದೆ. ವ್ಯಸನದಿಂದ ಹೊರಬಂದ ನವಜೀವನ ಸದಸ್ಯರು ಸಾಧಕರಾಗಿ ಜೀವನವನ್ನು ಸುಧಾರಿಸಿಕೊಂಡು ಸಫಲರೆನಿಸಿಕೊಂಡಿದ್ದಾರೆ. ಈ ಎಲ್ಲಾ ವಿಚಾರಗೊಂದಿಗೆ ಮತದಾನ ಜಾಗೃತಿಯೂ ವೇದಿಕೆಯ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ಇದುವರೆಗಿನ ಎಲ್ಲಾ ಮತದಾನಗಳಲ್ಲಿ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳಾದ ಫ್ಲೆಕ್ಸ್ ಅಳವಡಿಕೆ, ಪತ್ರಿಕಾಗೋಷ್ಠಿ, ಮತದಾನ ಜಾಗೃತಿ ಸಭೆಗಳು ಹಾಗೂ ಮಾಹಿತಿ ಕರಪತ್ರಗಳ ವಿತರಣೆಯ ಮೂಲಕ ವ್ಯಾಪಕ ಜಾಗೃತಿ ನೀಡುತ್ತಾ ಬಂದಿರುತ್ತದೆ.
ಈ ಬಾರಿ ಏಪ್ರಿಲ್ 26 ಮತ್ತು ಮೇ 7ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಪ್ರಯುಕ್ತ ಜನರಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ರಾಜ್ಯಾದ್ಯಂತ ಮಾಹಿತಿಕರ ಪತ್ರ ಅಭಿಯಾನದ ಮೂಲಕ ಜಾಗೃತಿಯನ್ನು ಮೂಡಿಸಿದೆ. ಜಿಲ್ಲಾ ಮತ್ತು ತಾಲೂಕು ವೇದಿಕೆಗಳ ಮೂಲಕ ಕರಪತ್ರಗಳನ್ನು ತಯಾರಿಸಿದ್ದು, ಮುಖ್ಯವಾಗಿ ಹೆಂಡ ಮತ್ತು ಹಣದ ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸಲು ವಿನಂತಿಸಿದೆ. ಸದೃಢದುಶ್ಚಟರಹಿತ ಪಾರರ್ಶಕ ಆಡಳಿತವನ್ನು ರೂಪಿಸಲು ಈ ಜಾಗೃತಿ ಮೂಡಿಸಲಾಗಿದೆ. ರಾಜ್ಯದಲ್ಲಿರುವ 250ಕ್ಕೂ ಮಿಕ್ಕಿದಯೋಜನಾ ಕಛೇರಿಗಳಲ್ಲಿ 25 ಲಕ್ಷಕ್ಕೂ ಮಿಕ್ಕಿದ ಕರಪತ್ರಗಳನ್ನು ಮುದ್ರಿಸಿ ವಿತರಿಸಲಾಗಿದೆ. ಆಮಿಷಮುಕ್ತ ಚುನಾವಣೆಗಾಗಿ ನವಜೀವನ ಸಮಿತಿಗಳು ಕಾವಲು ಸಮಿತಿಯಂತೆ ಗಮನಹರಿಸಿ ಇಂತಹ ಚಟುವಟಿಕೆಗಳು ನಡೆದಲ್ಲಿ ಆಯಾ ತಾಲೂಕಿನ ಚುನಾವಣಾಧಿಕಾರಿಗಳಿಗೆ, ತಹಶೀಲ್ದಾರರಿಗೆ, ಪೋಲಿಸು ಠಾಣೆಗೆ ಮಾಹಿತಿ ಕೊಡಲು ವ್ಯವಸ್ಥೆ ಮಾಡಲಾಗಿದೆ. ಭಾರತದಲ್ಲಿ ನಿರ್ದಿಷ್ಟ ಚುನಾವಣೆಯಲ್ಲಿ ಸ್ಪರ್ಧಿಸುವಯಾವುದೇ ಅಭ್ಯರ್ಥಿಗಳನ್ನು ಬೆಂಬಲಿಸದಿದ್ದರೆ ಆ ಮತವನ್ನು ನೋಟಾ ಮೂಲಕ ಚಲಾಯಿಸುವ ಹಕ್ಕನ್ನು ನ್ಯಾಯಾಲಯ ನೀಡಿದೆ. ಈ ವಿಚಾರದಲ್ಲಿತಪ್ಪು ಮಾಹಿತಿಗಳನ್ನು ನೀಡಿ ನೋಟಾ ಮತದಾನಕ್ಕೆಮುಗ್ಧ ಮತದಾರರನ್ನು ಪ್ರಚೋದಿಸುವ ಕೆಲಸವನ್ನು ಮಾಡುವವರ ವಿರುದ್ಧ ವೇದಿಕೆಯು ಖಂಡನೆ ವ್ಯಕ್ತಪಡಿಸುತ್ತಿದ್ದು, ಮತದಾರರೆಲ್ಲರೂ ನ್ಯಾಯಯುತ ಮತ್ತು ಸಂವಿಧಾನಬದ್ಧವಾಗಿ ಮತ ಚಲಾಯಿಸುವಂತೆ ಈ ಮೂಲಕ ಆಗ್ರಹಿಸಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ರಾಜಣ್ಣ ಮೂ.ಕೊರವಿಯವರ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.