ಮೂಡುಬಿದಿರೆ: ನಾಳೆ ಎಂಬುದಿಲ್ಲ, ಇಂದಿಗಾಗಿ ಬದುಕಿ. ಯಾವುದೇ ಕಾರ್ಯ ಮಾಡುವುದಾದರೂ ಇಂದೇ ಮಾಡಿ, ಇವತ್ತು ಎನ್ನುವುದು ಮಾತ್ರ ನಿಮ್ಮದು"  ಎಂದು ಸಿಂಗಾಪುರದ ವ್ಯಾನ್ಸ್ ಗ್ರೂಪ್ ಆಫ್ ಕಂಪನಿಯ ಸ್ಥಾಪಕ ಮತ್ತು ಸಿಇಓ  ವೆಂಕಟೇಶ್ ಮೂರ್ತಿ ನುಡಿದರು.

ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಆಳ್ವಾಸ್ ಕಾಲೇಜಿನ ಎನ್‍ಎಸ್ ಎಸ್ ಹಾಗೂ ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಅಭಿವ್ಯಕ್ತಿ ವೇದಿಕೆಯ ಜಂಟಿ ಆಶ್ರಯದಲ್ಲಿ ನಡೆದ "ಈ-ವೇಸ್ಟ್ ಮ್ಯಾನೇಜ್ ಮೆಂಟ್" ವಿಷಯದ ಕುರಿತಾದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರಿಯಾದ ಗುರಿಯನ್ನು ಇಟ್ಟುಕೊಳ್ಳಿ,  ಸಾಧನೆಯ ಮಾರ್ಗದಲ್ಲಿ  ನೀವು ಚಲಿಸಿದಾಗ  ಗುರಿ ಸಾಧಿಸಲು ಸಾಧ್ಯ. ಇಲ್ಲದೇ ಹೋದಲ್ಲಿ ಗುರಿ ಎನ್ನುವುದು ಕಲ್ಪನೆಯಲ್ಲಿಯೇ ಉಳಿದುಬಿಡುತ್ತದೆ.  ನಾವು ಕಾರ್ಯ ಪ್ರವೃತ್ತಿಯೊಂದಿಗೆ ಸರಿಯಾದ  ಗುರಿ ಹೊಂದಿಲ್ಲದಿದ್ದರೆ ಗೊಂದಲಕ್ಕೊಳಗಾಗುತ್ತೇವೆ. ನಾವು ಎಲ್ಲಿದ್ದೇವೆ ಎನ್ನುವುದು ಮುಖ್ಯವಲ್ಲ. ಸಾಧನೆಯ ಹಾದಿಯಲ್ಲಿ ನಾವೆಷ್ಟು ಶ್ರಮ ಪಡುತ್ತಿದ್ದೇವೆ ಎನ್ನುವುದು ಮುಖ್ಯ.

ಒಂದು ಕಾಲದಲ್ಲಿ ಪ್ರಕೃತಿ ಮಾನವನನ್ನೇ ಬೆದರಿಸುತ್ತಿತ್ತು. ಆದರೆ ಇಂದು ಮಾನವನೇ ಪ್ರಕೃತಿಯನ್ನೇ ಬೆದರಿಸುವಂತಾಗಿದೆ. ಆದರೆ ಸಮಸ್ಯೆ ಪ್ರಾರಂಭವಾದದ್ದು ನಮ್ಮಿಂದ. ಅದು ಸರಿಹೊಂದಬೇಕಾಗಿರುವುದು ನಮ್ಮಿಂದಲೆ.  ಧನಾತ್ಮಕ ಚಿಂತನೆಯಿದ್ದಾಗ ಪ್ರತೀ ಸಾಧನೆಯ ಹಾದಿಯು ಸುಗಮವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್,  ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ವಿನಾಯಕ್ ಭಟ್ ಗಾಳಿಮನೆ, ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕ ವಸಂತ್, ಸ್ನಾತಕೋತ್ತರ  ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ನಿಶಾನ್ ಕೋಟ್ಯಾನ್ ಇದ್ದರು.

ಅವಿನಾಶ್ ಕಟೀಲ್ ನಿರೂಪಿಸಿದರು . ಆದಿತ್ಯ ನಾಯಕ್ ಸ್ವಾಗತಿಸಿ, ಸಮೀಕ್ಷಾ ಶೆಟ್ಟಿ ವಂದಿಸಿದರು.