ಶಿವ ಶಿವ ಎಂದರೆ ಭಯವಿಲ್ಲ, ಶಿವ ನಾಮಕೆ ಸಾಟಿ ಬೆರಿಲ್ಲ...ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದು ಮಹಾ ಶಿವರಾತ್ರಿ. ನಮ್ಮ ಪ್ರತೀ ಹಬ್ಬ ಆಚರಣೆಗಳ ಹಿಂದೆ ಅನೇಕ ಗುಣ ಕಾರಣಗಳಿಂದ ಕೂಡಿರುತ್ತವೆ. ಹಾಗೆ ಶಿವರಾತ್ರಿ ಹಬ್ಬಕ್ಕೂ ಅದರದ್ದೇ ಆದ ಮಹತ್ವವಿದೆ. ಲಯಕರ್ತ ಶಿವ, ಜಗತ್ತಿನ ಜೀವಿಗಳನ್ನು ಅವರವರ ಕರ್ಮಕ್ಕೆ ತಕ್ಕಂತೆ ಸಮಯಕ್ಕೆ ಸರಿಯಾಗಿ ಲಯಗೊಳಿಸಿ ಸೃಷ್ಟಿಯ ಸಮತೋಲನ ಕಾಪಾಡುತ್ತಿರುವವ. ಮಾಘ ಮಾಸ, ಕೃಷ್ಣ ಪಕ್ಷ, ಚತುರ್ದಶಿಯ ದಿನವೇ ಶಿವರಾತ್ರಿ. 

ಶಿವಪುರಾಣದ ಪ್ರಕಾರ, ಸತಿಯು ಪಾರ್ವತಿಯಾಗಿ ಅವತರಿಸಿ, ಶಿವನನ್ನು ಮತ್ತೆ ಪಡೆಯಲು ತಪಸ್ಸು ಮಾಡಿ ಯೋಗೇಶ್ವರಿಯಾಗಿ, ಇದೇ ದಿನ ಶಿವನನ್ನು ಒಲಿಸಿಕೊಂಡಳು, ಮತ್ತು ಅವರಿಬ್ಬರ ಕಲ್ಯಾಣವು ಜರುಗಿತು ಎಂಬ ನಂಬಿಕೆ ಇದೆ. ಜೊತೆಗೆ ಗಿರಿಜಾ ಕಲ್ಯಾಣ ವೀಕ್ಷಿಸುತ್ತ ದೇವತೆಗಳು ರಾತ್ರಿ ಪೂರಾ ಜಾಗರಣೆ ಮಾಡಿದರು ಎಂಬ ಪ್ರತೀತಿ. ಜೊತೆಗೆ ಅಮೃತಕ್ಕಾಗಿ ಸಮುದ್ರ ಮಂಥನ ನಡೆದಾಗ ಉದ್ಭವಿಸಿದ ವಿಷವನ್ನು ಶಿವ ಸೇವನೆ ಮಾಡಿ ನೀಲಕಂಠನಾದದ್ದು, ಆ ವಿಷವನ್ನು ಪಾರ್ವತಿಯು ಗಂಟಲಲ್ಲೇ ಉಳಿಯುವಂತೆ ರಾತ್ರಿ ಪೂರ ತಡೆ ಹಿಡಿದದ್ದು ಇದೇ ರಾತ್ರಿಯಂದು. ಈ ದಿನ ತನ್ನನ್ನು ಪೂಜಿಸುವವರಿಗೆ, ವಿಶೇಷ ಅನುಗ್ರಹ ನೀಡುತ್ತೇನೆಂದು ಶಿವನೇ ನುಡಿದಿದ್ದಾನಂತೆ. ಆದಿ ಅಂತ್ಯವನ್ನು ಹುಡುಕಲು ಹೋದ ವಿಷ್ಣು ಮತ್ತು ಬ್ರಹ್ಮನಿಗೆ ಲಿಂಗ ರೂಪದಿಂದ ದರ್ಶನ ಕೊಟ್ಟ ದಿನವೂ ಹೌದು.

ಇನ್ನು ಶಿವನ ಬಗ್ಗೆ ಹೇಳುವುದಾದರೆ ಆತ ಸರಳತೆಯ ಪ್ರಿಯ. ಆಡಂಬರಕ್ಕಲ್ಲ, ಬಡವನ ಮನೆಯ ಗಂಜಿಯಾದರೂ ಶುದ್ಧ ಭಕ್ತಿಯಿದ್ದರೆ ಸಾಕು, ಒಲಿದುಬರುವವನು. ತ್ರಿಮೂರ್ತಿಗಳಲ್ಲಿ ಒಬ್ಬನಾದರೂ, ಮಸಣದಲ್ಲಿ ಕೂತು, ಧ್ಯಾನಿಸುವ ವೈರಾಗಿ. ವಿಷ್ಣು ಪ್ರಿಯ. ಭಸ್ಮ ಪ್ರಿಯ. ಹಸುವಿನ ಸಗಣಿಯಿಂದಾದ ಬೆರಣಿಯ ಸುಟ್ಟು ತಯಾರಿಸುವ ಭಸ್ಮ ಹಣೆಯಲ್ಲಿ ಧರಿಸುವವ. ವಿಭೂತಿಯ ಮೂರು ಗೆರೆಗಳು, ಇಚ್ಛಶಕ್ತಿ-ಕ್ರಿಯಾಶಕ್ತಿ-ಜ್ಞಾನಶಕ್ತಿಯ ಪ್ರತೀಕ. ಗುರು ಲಿಂಗ ಜಂಗಮ, ಸೃಷ್ಟಿ ಸ್ಥಿತಿ ಲಯಗಳ ಸಂಕೇತವು ಹೌದು. ಬಿಲ್ವಪತ್ರೆ ಪ್ರಿಯ. ಮೂರು ದಳಗಳುಳ್ಳ ಬಿಲ್ವವನ್ನು ಶಿವರಾತ್ರಿಯಂದು ಶಿವನಿಗೆ ಅರ್ಪಿಸಿದರೆ ಯಾಗ ಮಾಡಿದ ಫಲ ದೊರೆಯುತ್ತದೆ ಎಂಬ ನಂಬಿಕೆಯಿದೆ. ಗಂಗೆಯನ್ನೇ ತಲೆಮೇಲೆ ಹೊತ್ತವ ಜಲಾಭಿಷೇಕ ಪ್ರಿಯ. ಕೊರಳಲ್ಲಿ ಹಾವನ್ನು ಮಾಲೆಯಂತೆ ಹಾಕಿರಿಸಿಕೊಂಡವ. ತ್ರಿಶೂಲವೆ ಆಯುಧ. ಹುಲಿ ಚರ್ಮವ ಸುತ್ತಿಕೊಂಡವ.

ಶಿವನ ನೇತ್ರದ ಆನಂದ ಭಾಷ್ಪದಿಂದ ಹುಟ್ಟಿದ್ದೇ ಪಾವನ ರುದ್ರಾಕ್ಷಿ. ಅದನ್ನು ಯೋಗಿವರ್ಯರೆಲ್ಲ ಪರಮ ಆಸ್ತಿಯಂತೆ ಸ್ವೀಕರಿಸಿ ಧರಿಸುವರು. ಭಕ್ತರಿಗೆ ಬೇಗ ಒಲಿದುಬರುವ ಭಕ್ತ ಪ್ರಿಯ, ವಿಷ್ಣುವನ್ನು ಆರಾಧಿಸುವ ಪರಮ ವೈಷ್ಣವ. ಚಂದ್ರನನ್ನ ತಲೆಯಲ್ಲಿ ಧರಿಸಿ ಚಂದ್ರಶೇಖರನಾದವ. ಮನಸ್ಸಿನ ಅಭಿಮಾನಿ ದೇವತೆ. ನಮ್ಮೊಳಗಿನ ನಮ್ಮವನೆನಿಸುವವ. ಭಕ್ತರ ದಾಸಾನುದಾಸ. ಈ ಸರಳತೆಯ ಸಾಕಾರ ಮೂರ್ತಿಯನ್ನು ನಾವೆಲ್ಲರೂ ಆರಾಧಿಸಿ ಅವನ ಕೃಪೆಗೆ ಪಾತ್ರರಾಗೋಣ. ಜೀವನ್ಮುಕ್ತಿಯ ಹಾದಿಗೆ ಬೆಳಕನ್ನು ಚೆಲ್ಲಿ ನಮ್ಮನ್ನು ನಡೆಸು ಎಂದು ಬೇಡಿಕೊಳ್ಳುತ್ತಾ ಧನ್ಯರಾಗೋಣ.

ಸರ್ವರಿಗೂ ಮಹಾ ಶಿವರಾತ್ರಿಯ, ಮಹಾ ಶಿವನ ರಾತ್ರಿಯ ಶುಭಾಶಯಗಳು...


_ಪಲ್ಲವಿ ಚೆನ್ನಬಸಪ್ಪ.