ಮನಸ್ಸು... ವ್ಯಕ್ತಿಯ ಬಲವೂ ಹೌದು, ದೌರ್ಬಲ್ಯವೂ ಹೌದು..! ಮನಸ್ಸಿನ ಆಲೋಚನೆಗಳೇ ಕಾರ್ಯರೂಪ.. ಮತ್ತವೇ ಬದುಕಿನ ರೂಪಕ. ಬಿತ್ತಿದಂತೆ ಬೆಳೆ ಎಂಬಂತೆ, ಮನಸ್ಸು ಒಬ್ಬರನ್ನು ಅತ್ಯುನ್ನತ ಶಿಖರಕ್ಕೂ ಏರಿಸಬಹುದು, ಅಥವಾ ಪ್ರಾಪಾತಕ್ಕು ತಳ್ಳಬಹುದು. ನಾವೆಲ್ಲರೂ ಒಂದಿಲ್ಲೊಂದು ಯೋಚನೆಗಳನ್ನು ಮಾಡುತ್ತಲೇ ಇರುತ್ತೇವೆ. ಈ ಎಲ್ಲ ಯೋಚನೆಗಳ ಮೂಲ ಮನಸ್ಸು. ನಾವು ಯಾವುದಾದರೂ ಕೆಲಸದಲ್ಲಿ ತೊಡಗಿರುವುದಕ್ಕಿಂತ, ಖಾಲಿ ಇದ್ದಾಗಲೇ ಹೆಚ್ಚು ಯೋಚನೆಗಳು ಕಾಡುವುದು.

ಕೆಲವೊಮ್ಮೆ ಅರಿವೇ ಇಲ್ಲದೇ ಯಾರದೋ ವಿಷಯ ನಮ್ಮ ತಲೆಯೊಳಗೆ ದಾಳಿ ಮಾಡುತ್ತಿರುತ್ತದೆ. ಅಗತ್ಯವೇ ಇಲ್ಲದ ಕಡೆಗೆ ಮನಸ್ಸು ವಾಲುತ್ತಿರುತ್ತದೆ. ಯಾರೋ ಯಾರಿಗೋ ಅಂದ ಮಾತು ನಮ್ಮ ನೆಮ್ಮದಿ ಕೆಡಿಸಿರುತ್ತದೆ. ಯಾವುದೋ ಘಟನೆ ನಮ್ಮ ದೃಷ್ಟಿಕೋನದಲ್ಲಿ ಸರಿಯಿಲ್ಲ ಅನ್ನಿಸಿದರೆ, 'ನಾವು ಆ ಸಂಧರ್ಭದಲ್ಲಿದ್ದರೆ ಹೀಗೆ ಮಾಡಿರುತ್ತಿದ್ದೆವು, ಅಥವಾ ಅವರು ಹಾಗೆ ಮಾಡಬಾರದಿತ್ತು', ಎಂದು ನಮ್ಮಲ್ಲೇ ಏನೇನೋ ಲೆಕ್ಕಾಚಾರ ಹಾಕುತ್ತ, ಘಟಿಸದೇ ಇರುವ ಸಂಗತಿಗಳ ಯೋಚನೆಗಳೊಳಗೆ ಮುಳುಗಿ ಸದ್ದಿಲ್ಲದೇ ನಮ್ಮ ಸಮಯವನ್ನು ಸವೆಸಿರುತ್ತೇವೆ..! ಇದೆಲ್ಲಾ ಯೋಚನೆ ನಿಜಕ್ಕೂ ನನ್ನ ಜೀವನಕ್ಕೆ ಅವಶ್ಯಕವಾ?ಎಂದು ಅರಿವಾಗಿ ಎಚ್ಚತ್ತುಕೊಳ್ಳುವಷ್ಟರಲ್ಲಿ ಕೆಲವೊಮ್ಮೆ ಸಮಯ ಕೈ ಮೀರಿರುತ್ತದೆ..!

ಬರೀ ಜಗದ ಗೊಡವೆ, ಗೌಜು ಗದ್ದಲದೊಳಗೆ ನಮ್ಮತನವನ್ನು ಕಳೆದುಕೊಂಡು, ನಾವು ಪಡೆಯುವ ಸ್ಥಾನವಾದರೂ ಏನು? ಮನಸ್ಸಿಗೆ ಅನೇಕ ತರದ ಯೋಚನೆಗಳು ಬರುತ್ತವೆ. ಅವುಗಳಲ್ಲಿ ಕೆಲವು ಒಳಿತು, ಕೆಲವು ಕೆಡುಕು ಆಗಿರಬಹುದು. ಆದರೆ ಬಂದ ಯೋಚನೆಗಳನ್ನು ವಿವೇಕದಿಂದ ತನಗೆ ಮತ್ತು ಸಮಾಜಕ್ಕೆ ಆರೋಗ್ಯಕರವೆನಿಸುವವುಗಳನ್ನು ಆಚರಣೆಗೆ ತಂದುಕೊಂಡು, ಬೇಡವಾದವುಗಳನ್ನು ಅಲ್ಲಿಯೇ ಕೈ ಬಿಟ್ಟು, ಅವಿವೇಕಿಗಳಂತೆ ವರ್ತಿಸದೆ ಸುಂದರ ಬದುಕು ಬದುಕುವುದೂ ಕೂಡ ಒಂದು ಸಾಧನೆಯೇ ಹೌದು..! ನಿಜ, ಕಳೆದ ಸಮಯವೆಂದಿಗೂ ಮರಳಿ ಬಾರದು. ಆದರೆ ಎಚ್ಛೆತ್ತುಕೊಂಡ ನಂತರವೂ ಹಳೆ ಚಾಳಿ ಮುಂದುವರೆಸದೆ, ನಮ್ಮ ಆಲೋಚನೆಗಳ ದಿಕ್ಕನ್ನು, ಜೀವನದ ಉನ್ನತಿಯೆಡೆಗೆ ಸಾಗುವ ಹಾದಿಗೆ ತಿರುಗಿಸಿದರೆ, ಒಂದಿಲ್ಲೊಂದು ದಿನ ನಮ್ಮ ಬದುಕನ್ನು ಹಿಂತಿರುಗಿ ನೋಡಿಕೊಂಡಾಗ ಸಾರ್ಥಕತೆಯ ಭಾವ ಆವರಿಸದೆ ಇರದು.

ನದಿಗೆ, ಹೇಗೆ ಅನಗತ್ಯ ವಸ್ತುಗಳನ್ನು ಎಸೆಯದೆ ಸ್ವಚ್ಛವಾಗಿಟ್ಟುಕೊಂಡಷ್ಟು ಕಾಣಲು ನಯನ ಮನೋಹರವೋ, ಅದರ ಮೇಲೆ ಬೀಸಿ ಬರುವ ತಂಗಾಳಿ ಹಿತವನೀಯುವುದೋ, ಹಾಗೆಯೇ ಮನಸ್ಸಿಗೆ ಅನುಚಿತ ವಿಚಾರಗಳನ್ನು ಹಾಕಿ ಕೊಳೆತು ನಾರುವಂತೆ ಮಾಡಿಕೊಳ್ಳದಿದ್ದರೆ ಮತ್ತು ಸುವಿಚಾರಗಳನ್ನು, ಸಕಾರಾತ್ಮಕ ಚಿಂತನೆಗಳನ್ನು ಹರಿಸಿದರೆ, ಬದುಕಿನಲ್ಲಿ ದಕ್ಕುವ ಶಾಂತ ಸಂತಸದ ಅಲೆಗಳಿಗೆ ನೀವೇ ತೀರವಾಗಬಹುದು..! ಎಂತಹದ್ದೇ ಪರಿಸ್ಥಿತಿಗಳೆಂಬ ಸುಳಿಗಾಳಿ ಬಂದರು ಧೃತಿಗೆಡದೆ ಸಂಭ್ರಮದಿಂದ ಎದುರಿಸಬಹುದು. ಇನ್ನಾದರೂ ನಮ್ಮ ಯೋಚನೆಗಳ ಜೊತೆಗೆ ಮನಸ್ಥಿತಿಯನ್ನು ಬದಲಿಸಿಕೊಂಡು, ಬದುಕಿನ ಉನ್ನತಿಯೆಡೆಗೆ ಮತ್ತು ಉತ್ತಮ ನಾಗರೀಕರಾಗುವೆಡೆಗೆ ಸಾಗೋಣ. ಏನಂತೀರಿ..?


_ಪಲ್ಲವಿ ಚೆನ್ನಬಸಪ್ಪ ✍️