ಚಿತ್ರ / ವರದಿ : ರೋನ್ಸ್ ಬಂಟ್ವಾಳ್
ಮುಂಬಯಿ: ಸೈಬರ್ ವಂಚನೆ ಕೃತಿ ಓದಿ ನನಗೆ ಬಹಳಷ್ಟು ಲಾಭವಾಗಿದೆ. ಸಂಶೋಧಿತ ತಂತ್ರಜ್ಞಾನವನ್ನು ಸರಳವಾಗಿ ಬರೆಯುವುದು ಅಷ್ಟು ಸುಲಭವಲ್ಲ. ಆದರೂ ಸೈಬರ್ ಲೋಕದ ವಂಚನೆಗಳ ಬಗ್ಗೆ ಸೂಕ್ತ ಮಾಹಿತಿಯನ್ನು ಕನ್ನಡದಲ್ಲಿ ಸುಲಭವಾಗಿಸಿ ಪ್ರಕಟಿಸಿದ್ದು ಪ್ರಶಂಸನೀಯ. ಎಲ್ಲದಕ್ಕೂ ಕೃತಿಕಾರರ ಭಾಷೆಯ ಸರಳತೆ ನನಗೆ ಇಷ್ಟವಾಯಿತು. ಮೊಬೈಲ್‍ವುಳ್ಳವರೆಲ್ಲರೂ ಈ ಪುಸ್ತಕವನ್ನು ಓದಲೇಬೇಕು. ಮೊಬೈಲ್ ಬಳಕೆಯ ಭವಿಷ್ಯದ ಉಪಯೋಗಗಳ ಕುರಿತು ಕೃತಿ ರಚನೆಯಾಗಲಿ. ಇಂತಹ ಕೃತಿ ಮನಮನಗಳಿಂದ ಮನೆಮನೆಗೆ ತಲುಪುತ್ತಾ ಆಧುನಿಕ ತಂತ್ರಜ್ಞಾನದ ಅರಿವು ಎಲ್ಲರ ಪಾಲಾಗಲಿ ಎಂದು ಮೈಸೂರು ಅಸೋಸಿಯೇಶನ್ ನ ಗೌರವ ಕಾರ್ಯದರ್ಶಿ ಡಾ| ಗಣಪತಿ ಶಂಕರಲಿಂಗ ತಿಳಿಸಿದರು.
ಕಳೆದ ಶನಿವಾರ ಸಂಜೆ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮತ್ತು ಮೈಸೂರು ಅಸೋಸಿಯೇಶನ್ ಮುಂಬಯಿ ಇವುಗಳ ಸಹಯೋಗದೊಂದಿಗೆ ಆಯೋಜಿಸಿದ್ದ ವಿಕ್ರಮ್ ಜೋಶಿ ರಚಿತ `ಸೈಬರ್ ವಂಚನೆ' ಕೃತಿ ಬಿಡುಗಡೆಗೊಳಿಸಿ ಡಾ| ಶಂಕರಲಿಂಗ ಮಾತನಾಡಿದರು.
ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್.ಉಪಾಧ್ಯ ಅವರ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸರಳ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ, ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿ, ಸಜ್ಜಲ ಜೋಶಿ ಮತ್ತು ರಿಶಿತಾ ಜೋಶಿ ವೇದಿಕೆಯಲ್ಲಿದ್ದರು.
ಮುಂಬಯಿಯಲ್ಲಿ ಸಾಹಿತ್ಯಾಸಕ್ತರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಮುಂಬಯಿ ಸಾಹಿತ್ಯ ವಲಯವಾಗಿ ಮಾರ್ಪಾಡುತ್ತಿದೆ. ಬಹುಭಾಷಾ ತಜ್ಞರ ಗುರುತರವಾದ ಕೆಲಸ ಸಾಹಿತ್ಯಸಕ್ತರನ್ನು ಸೆಳೆಯುತ್ತಿದೆ. ಆ ಪೈಕಿ ವಿಕ್ರಮ್ ಜೋಶಿ ಉದಯೋನ್ಮುಖ ಕೃತಿಕಾರನಾಗಿ ಸೇರ್ಪಡೆಯಾಗಿದ್ದಾರೆ ಎಂದು ಡಾ| ಜಿ.ಎನ್.ಉಪಾಧ್ಯ ತಿಳಿಸಿದರು.
ಇಲ್ಲಿರುವ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಸೈಬರ್ ವಂಚನೆಯ ಕುರಿತು ಅನುಭವವನ್ನು ಪಡೆದವರಾಗಿದ್ದಾರೆ. ನಮ್ಮ ಸಮಾಜದಲ್ಲಿ ಆಗುತ್ತಿರುವ ಸೈಬರ್ ವಂಚನೆಗಳ ಕುರಿತು ಕೃತಿಯನ್ನು ರಚಿಸುವ ಆಲೋಚನೆಯಿತ್ತು.ಇದಕ್ಕೆ ಸ್ಪಷ್ಟ ರೂಪುಕೊಟ್ಟು ನನ್ನ ಕನಸನ್ನು ಸಾಕಾರಗೊಳಿಸಲು ಸಹಕರಿಸಿದವರು ಪ್ರಾಧ್ಯಾಪಕ ಡಾ| ಜಿ. ಎನ್ ಉಪಾಧ್ಯ ಅವರು. ಹಳ್ಳಿಗಳಲ್ಲಿ ಇರುವಂಥ ಜನ ಸಾಮಾನ್ಯರಿಗೂ ಸೈಬರ್ ವಂಚನೆಯ ಕುರಿತು ಮಾಹಿತಿಗಳು ಸಿಗಲಿ ಎನ್ನುವ ಉದ್ದೇಶದಿಂದ ಈ ಕೃತಿಯನ್ನು ರಚಿಸಿದ್ದೇನೆ ಎಂದು ಕೃತಿಕಾರ ವಿಕ್ರಂ ಜೋಶಿ ತಿಳಿಸಿದರು.
ಕನ್ನಡ ವಿಭಾಗದ ಕಲಾ ಭಾಗ್ವತ್ ಕೃತಿಯನ್ನು ಪರಿಚಯಿಸಿದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಧನ್ಯವದಿಸಿದರು.