ಮಂಗಳೂರು: ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಶಕ್ತಿನಗರದ ನಾಲ್ಯಪದವಿನ ಕುವೆಂಪು ಶತಮಾನೋತ್ಸವ ಉನ್ನತೀಕರಿಸಿದ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವರಹರೂಪ ವೇದಿಕೆಯಲ್ಲಿ  ನಡೆಯಿತು.

ಕಾನಡ್ಕ ಫ್ರೆಂಡ್ಸ್ ಕ್ಲಬ್  ಅಧ್ಯಕ್ಷ ಕುಶಾಲ್ ಕುಮಾರ್, ಹಿರಿಯ ವಿದ್ಯಾರ್ಥಿಗಳ ಸಂಘದ ಸಂಚಾಲಕರಾದ ಅಶೋಕ್ ನಾಯಕ್ , ಮಂಚಿ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ ತಾರನಾಥ ಕೈರಂಗಳ, ಕುವೆಂಪು ಶತಮಾನೋತ್ಸವ ಉನ್ನತೀಕರಿಸಿದ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಪ್ರದೀಪ್ ಮತ್ತಿತರರು  ಉಪಸ್ಥಿತರಿದ್ದರು.

ನಾಲ್ಯಪದವಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಸುಮಾ ಮಾತನಾಡಿ, ಎನ್‍ಎಸ್‍ಎಸ್ ವೇದಿಕೆಯಲ್ಲಿ ಬಂದವರು ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂದು ಬದುಕುತ್ತಾರೆ, ಆದರೆ ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಯುಗವಾಗಿ ಬದಲಾಗಿದ್ದು, ಭಕ್ತಿಭಾವನೆಯ ಭಾರತ ಕಣ್ಮರೆಯಾಗುತ್ತಿದ್ದು, ನಮ್ಮ ಭಾರತವನ್ನು ಮತ್ತೆ ಭಕ್ತಿಭಾವನೆಯ ಭಾರತವನ್ನಾಗಿ ರೂಪಿಸಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ಅವರು ಮಾತನಾಡಿ, ನಾವು ಎನ್‍ಎಸ್‍ಎಸ್‍ನಲ್ಲಿ ಕಲಿತ ಜ್ಞಾನವನ್ನು ಇತರಿಗೆ ನೀಡಿದರೆ ಆಗ ಸಮಾಜ ಬೆಳೆಯಲು ಸಾಧ್ಯ ಎಂದ ಅವರು ಮೂರು ವರ್ಷದಲ್ಲಿ ತರಗತಿಗಳ ಕೊಠಡಿಯಲ್ಲಿ ಕಲಿತದ್ದನ್ನು ನೀವುಗಳು ಒಂದು ವಾರದ ಶಿಬಿರದಲ್ಲಿ ಎನ್‍ಎಸ್‍ಎಸ್ ಕಲಿಸುತ್ತದೆ ಎಂದು ಹೇಳಿದರು.

ಪ್ರತಿಯೊಬ್ಬರಿಗೂ ಅವಕಾಶ, ಆಯ್ಕೆ ಮತ್ತು ಬದಲಾವಣೆ ತರಲು ಅವಕಾಶಗಳು ಸಿಗತ್ತವೆ ಆಗ ಅದನ್ನು ನಾವು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ಸಿಕ್ಕ ಅವಕಾಶಗಳನ್ನು ನಾವು ಬಳಸಿಕೊಂಡರೆ ಉತ್ತಮ ಭವಿಷ್ಯ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಿಬಿರಕ್ಕೆ ಸಹಾಯ ಮಾಡಿದ ಗಣ್ಯರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಅನೇಕ ಸ್ಪರ್ಧೆಗಳಲ್ಲಿ ವಿಜೇತರಾದ ಸ್ವಯಂಸೇವಕರಿಗೆ ಅತಿಥಿಗಳು ಬಹುಮಾನವನ್ನು ವಿತರಿಸಿದರು.

ಶಕ್ತಿನಗರದ ವಿದ್ಯಾದೀವಿಗೆ ಎಜುಕೇಶನಲ್ ಚಾರೀಟೇಬಲ್ ಟ್ರಸ್ಟ್‍ನ ಅಧ್ಯಕ್ಷ ದೇವಾನಂದ್, ಪ್ರಗತಿಪರ ಕೃಷಿಕ ವಿಜಯ್ ಶೆಣೈ, ಕಾಲೇಜಿನ ಐಕ್ಯೂಎಸಿ ಸಂಯೋಜಕ ದೇವಿಪ್ರಸಾದ್, ಎನ್‍ಎಸ್‍ಎಸ್ ಯೋಜನಾಧಿಕಾರಿಗಳಾದ ಡಾ. ಲೋಕೇಶ್‍ನಾಥ್ ಬಿ., ಡಾ. ಮೋಹನ್‍ದಾಸ್, ಸಹ-ಯೋಜನಾಧಿಕಾರಿಗಳಾದ ಚೈತ್ರ ಕೆ., ಅಭಿಷೇಕ್ ಹೆಚ್.ಎಸ್. ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸ್ವಯಂಸೇವಕರುತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸ್ವಯಂಸೇವಕರಾದ ಭರತ್ ಸ್ವಾಗತಿಸಿ, ಕಾವ್ಯ ಶಿಬಿರದ ವರದಿಯನ್ನು ವಾಚಿಸಿದರು. ಎನ್.ಎಸ್.ಎಸ್ ಯೋಜನಾಧಿಕಾರಿ ಶಾಂತಿ ವಂದಿಸಿದರು. ಭೂಮಿಕಾ ಕಾರ್ಯಕ್ರಮ ನಿರೂಪಿಸಿದರು.