ಒಂದು ವಾರದ ಬಳಿಕವೂ ಭಾರತವು ಸತತವಾಗಿ ಕೊರೋನಾ ಹೊಡೆತ ಮತ್ತು ‌ಸಾವಿನಲ್ಲಿ ಕೆಟ್ಟ ಕಾರಣಕ್ಕೆ ವಿಶ್ವ ಗುರುವಾಗಿ ‌ಮುಂದುವರಿಯಿತು.

ಗುರುವಾರ ಬೆಳಕಿಗೆ ಮೊದಲ 24 ಗಂಟೆಗಳಲ್ಲಿ ಭಾರತದಲ್ಲಿ ಹೊಸದಾಗಿ 3,79,257 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು ಅದೇ ಅವಧಿಯಲ್ಲಿ ಆದ ಸಾವಿನ ಸಂಖ್ಯೆ 3,645. ಇದು ಜಗತ್ತಿನ ಬೇರೆಲ್ಲ ದೇಶಗಳಿಗಿಂತ ಅಧಿಕ ಹಾಗೂ ಭಾರತದ ಒಂದು ದಿನದ ಅತಿ‌ ದೊಡ್ಡ ದಾಖಲೆಯ ಹೊಡೆತವಾಗಿದೆ.

ಭಾರತದಲ್ಲಿ ಇಲ್ಲಿಯವರೆಗೆ ಕೋವಿಡ್ 19ಕ್ಕೆ ಬಲಿಯಾದವರ ಸಂಖ್ಯೆಯು 2,04,812ಕ್ಕೆ ಏರಿತು. ‌ಅದೇ ವೇಳೆ ಭಾರತದ ಒಟ್ಟು ಕೊರೋನಾ ಬಾಧಿತರ ಸಂಖ್ಯೆ 1,83,76,524 ಆಯಿತು.

ಕ್ರಮವಾಗಿ ಮಹಾರಾಷ್ಟ್ರ, ಕೇರಳ, ಕರ್ನಾಟಕ, ಉತ್ತರ ಪ್ರದೇಶ, ದೆಹಲಿಗಳಲ್ಲಿ ನಿನ್ನೆ ಹೆಚ್ಚು ಮಾರಕವಾಗಿ ಕೋವಿಡ್ ಹರಡಿದೆ. ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 985 ಜನ ಕೊರೋನಾಕ್ಕೆ ಬಲಿಯಾದರೆ, ಇದೇ ಅವಧಿಯಲ್ಲಿ ದೆಹಲಿಯಲ್ಲಿ  368 ಜನ ಕೊರೋನಾ ಏಟಿಗೆ ಅಸು ನೀಗಿದರು. ಇದೇ ವೇಳೆ ಮಹಾರಾಷ್ಟ್ರದಲ್ಲಿ 63,309, ಕೇರಳದಲ್ಲಿ 29,834, ಉತ್ತರ ಪ್ರದೇಶದಲ್ಲಿ 29,824 ಹೊಸ ಕೋವಿಡ್ ಪ್ರಕರಣಗಳು ಬೆಳಕಿಗೆ ಬಂದವು.

ಜಗತ್ತಿನ 220 ದೇಶಗಳನ್ನು ಆವರಿಸಿ ಅಮರಿಕೊಂಡಿರುವ ಕೋವಿಡ್ ಇನ್ನೂ ಸಾಂಕ್ರಾಮಿಕವಾಗಿ ಹರಡುತ್ತಲೇ ಸಾಗಿದೆ. ಜಗತ್ತಿನ ಕೊರೋನಾ ಸೋಂಕು ಬಾಧಿತರ ಸಂಖ್ಯೆ ಈಗ 15,02,08,413ಕ್ಕೇರಿದೆ. ಒಟ್ಟು ಸಾವಿನ ಸಂಖ್ಯೆಯು 31,63,373ನ್ನು ದಾಟಿ ‌ನಡೆದಿದೆ. ಕಳೆದ 24 ಗಂಟೆಗಳಲ್ಲಿ ಆದ ಸಾವಿನ ಸಂಖ್ಯೆಯಂತೆ ಅತಿ ಹೆಚ್ಚಿನ ಹಾನಿ ಭಾರತದಲ್ಲಿ ಆಗಿದೆ. ಎರಡು ಮತ್ತು ಮೂರನೇ ಸ್ಥಾನಗಳಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನ, ಬ್ರೆಜಿಲ್ ಕೊರೋನಾ ಏಟಿನಿಂದ‌ ತತ್ತರಿಸಿವೆ.