ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಅತ್ಯುತ್ತಮ ಕೃತಿಗೆ ಕರ್ನಾಟಕ ಮುಸ್ಲಿಮ್ ಲೇಖಕರ ಸಂಘವು ಪ್ರತಿ ವರ್ಷ ಕೊಡ ಮಾಡುವ 2024ನೇ ಸಾಲಿನ ರಾಜ್ಯ ಮಟ್ಟದ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಗೆ ಕೆಎಎಸ್‌ ಅಧಿಕಾರಿ, ಸಾಹಿತಿ ಡಾ. ಎ.ಜೆ. ಮ್ಯಾಗೇರಿ ಅವರʼಜೈಲ್‌ ಡೈರಿ (ಕೈದಿಗಳ ನೈಜ ಕಥನ)ʼಕೃತಿ ಆಯ್ಕೆಯಾಗಿದೆ. 

ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ರಾಜೂರ ಗ್ರಾಮದ ಇಮಾಮಸಾಬ್‌ ಜೀವನ ಸಾಬ್‌ ಮ್ಯಾಗೇರಿ ಧಾರವಾಡದ ಕರ್ನಾಟಕ ವಿವಿಯ ಕನ್ನಡ ಅಧ್ಯಯನ ಪೀಠದಿಂದ ಎಂ.ಎ. ಸ್ನಾತಕೋತ್ತರ ಪದವಿ ಪಡೆದು,  ಹಂಪಿ ಕನ್ನಡ ವಿವಿಯಲ್ಲಿ ಎಂ.ಫಿಲ್. ಹಾಗೂ 'ವಸಾಹತುಶಾಹಿ ಅನುಭವ ಹಾಗೂ ಕನ್ನಡ ಕಾದಂಬರಿಗಳು' ವಿಷಯದ ಮೇಲೆ ಪಿಎಚ್‌ಡಿ ಮಾಡಿದ್ದಾರೆ.

2005ನೇ ಸಾಲಿನಲ್ಲಿ ಕೆಎಎಸ್ ಅಧಿಕಾರಿಯಾಗಿ ಕರ್ನಾಟಕ ಕಾರಾಗೃಹಗಳ ಇಲಾಖೆಯ ಸೇವೆಗೆ ಸೇರಿರುವ ಇವರು ಕರ್ನಾಟಕದ ಅನೇಕ ಕಾರಾಗೃಹಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಸದ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ಬೆಂಗಳೂರು ಪ್ರಧಾನ ಕಚೇರಿಯಲ್ಲಿ ಅಧೀಕ್ಷಕರಾಗಿ ಸೇವೆಯಲ್ಲಿದ್ದಾರೆ.

2014ರಲ್ಲಿ ಭಾರತ ಸರ್ಕಾರದಿಂದ ಇಂಗ್ಲೆಂಡ್ ಮತ್ತು ಸ್ಯಾಟಲ್ಯಾಂಡ್ ದೇಶಗಳಿಗೆ ಅಧ್ಯಯನ ಪ್ರವಾಸಕ್ಕೆಏಕೈಕ ಅಧಿಕಾರಿಯಾಗಿ ಆಯ್ಕೆಗೊಂಡು ಅಲ್ಲಿಯ ಕಾರಾಗೃಹಗಳ ಸುಧಾರಣೆ ಮತ್ತು ಅಪರಾಧಿಗಳ ಮನಃಪರಿವರ್ತನೆಯ ಕಾರ್ಯಕ್ರಮಗಳನ್ನು ತಮ್ಮ ಆಡಳಿತದಲ್ಲಿ ಅಳವಡಿಸಿಕೊಂಡು ಬಂಧಿಗಳ ಸುಧಾರಣೆಗಾಗಿ ಶ್ರಮಿಸುತ್ತಿದ್ದಾರೆ. 

ಇವರ ಕರ್ತವ್ಯ ನಿಷ್ಠೆ ಮತ್ತು ಕಾರಾಗೃಹ ಆಡಳಿತದಲ್ಲಿ ಕೈಗೊಂಡ ಸುಧಾರಣಾ ಕ್ರಮಗಳಿಗಾಗಿ 2021ರಲ್ಲಿ ಕರ್ನಾಟಕ ಸರ್ಕಾರದಿಂದ ಮುಖ್ಯಮಂತ್ರಿಗಳ ಚಿನ್ನದ ಪದಕ ದೊರೆತಿದೆ.'ಹಿಂಸಾಕಾರಣ', ಇವರ ಇನ್ನೊಂದು ಪ್ರಕಟಿತ ಕೃತಿ. ಇವರ ಬರಹಗಳು ಬೆಂಗಳೂರು ಮತ್ತು ತುಮಕೂರು ವಿವಿಗಳ ಪದವಿ ತರಗತಿಗೆ ಪಠ್ಯವಾಗಿದೆ. 

ದಿವಂಗತ ಯು.ಟಿ. ಫರೀದ್ ಸ್ಮರಣಾರ್ಥ ನೀಡಲಾಗುವ ʼಮುಸ್ಲಿಮ್‌ ಸಾಹಿತ್ಯ ಪ್ರಶಸ್ತಿʼಯು ಹತ್ತು ಸಾವಿರ ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದೆ. ಪ್ರಶಸ್ತಿಗೆ 22ಕೃತಿಗಳು ಬಂದಿದ್ದು, ಸಾಹಿತಿ ಅಬ್ದುಲ್‌ ರಹಿಮಾನ್‌ ಕುತ್ತೆತ್ತೂರು, ಲೇಖಕಿ ಮತ್ತು ಪ್ರಾಧ್ಯಾಪಕಿ ಶಮೀಮಾ ಕುತ್ತಾರ್‌ ಹಾಗೂ ಪತ್ರಕರ್ತ, ಸಾಹಿತಿ ಹಂಝಮಲಾರ್ ತೀರ್ಪುಗಾರರಾಗಿ ಸಹಕರಿಸಿದ್ದಾರೆ. ಪ್ರಶಸ್ತಿಪ್ರದಾನ ಸಮಾರಂಭವು ಡಿ. 27 ರಂದು ಗಜೇಂದ್ರಗಡದಲ್ಲಿ ನಡೆಯಲಿದೆ ಎಂದು ಮುಸ್ಲಿಮ್‌ ಲೇಖಕರ ಸಂಘದ ಅಧ್ಯಕ್ಷ ಉಮರ್‌ ಯು.ಹೆಚ್.‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.