ಮಂಗಳೂರು: ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಭಾರತೀಯ ಜನ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಡಾ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜನ್ಮದಿನ ಮತ್ತು ಪುಣ್ಯತಿಥಿಯ ಅಂಗವಾಗಿ ರಾಜ್ಯಾದ್ಯಂತ ಜೂನ್ 23 ರಿಂದ ಜುಲೈ 6ರ ವರೆಗೆ ಹಮ್ಮಿಕೊಂಡಿರುವ ವೃಕ್ಷಾರೋಪಣ ಅಭಿಯಾನ ಪ್ರಯುಕ್ತ ಜಿಲ್ಲಾ ಮಹಿಳಾ ಮೋರ್ಚಾ ಮತ್ತು ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಸಹಯೋಗದೊಂದಿಗೆ ಇಂದು ನಗರದ ಮಣ್ಣಗುಡ್ಡೆಯಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಶಾಸಕರಾದ ವೇದವ್ಯಾಸ್ ಕಾಮತ್ ಸಸಿ ನೆಡುವ‌ ಮೂಲಕ ನೆರವೇರಿಸಿದರು.

ಬಳಿಕ ಮಾತನಾಡಿದ ಶಾಸಕ ಕಾಮತ್, ಭಾರತೀಯ ಜನತಾ ಪಾರ್ಟಿಯ ಬೆಳವಣಿಗೆಗೆ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಕೊಡುಗೆ ಅವರ್ಣನೀಯ. ರಾಷ್ಟ್ರೀಯ ವಿಚಾರೆಧಾರೆಗಳನ್ನು ಯುವ ಮನಸ್ಸುಗಳ ನಡುವೆ ಪೋಣಿಸುತ್ತಾ ಈ ಪಕ್ಷವನ್ನು ಈ ಮಟ್ಟಕ್ಕೆ ಬೆಳೆಸುವಲ್ಲಿ ಅವರು ಹಾಕಿಕೊಟ್ಟ ಹಾದಿಯಲ್ಲೇ ನಾವೆಲ್ಲ‌ ಸಾಗುತಿದ್ದೇವೆ. ಈ ನಿಟ್ಟಿನಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಪುಣ್ಯತಿಥಿಯ ಅಂಗವಾಗಿ ಸಸಿ ನೆಟ್ಟು ಪೋಷಿಸುವ ಅಭಿಯಾನ ನಡೆಸಲಾಗುತ್ತಿದೆ ಎಂದರು.

ಉರ್ವ ಕೆನರಾ ಶಾಲೆಯ ಸಮೀಪದ ಖಾಲಿ ಪ್ರದೇಶದಲ್ಲಿ ಪಾರ್ಕ್ ನಿರ್ಮಾಣದ ಯೋಜನೆ ಹಾಕಲಾಗಿದೆ. ಈಗಾಗಲೇ ಆ ಪಾರ್ಕಿಗೆ ನಿವೃತ್ತ ಶಿಕ್ಷಕರಾದ ಬೈಕಾಡಿ ಜನಾರ್ದನ ಆಚಾರ್ ಅವರ ಹೆಸರಿಡುವ ಕುರಿತು ಚಿಂತನೆ ನಡೆಯುತ್ತಿದೆ. ಈ ಪಾರ್ಕ್ ನಿರ್ಮಾಣದಿಂದ ಈ ಭಾಗದ ಜನರಿಗೆ ಉಪಯೋಗವಾಗಲಿದೆ ಎಂದು ಹೇಳಿದರು. 

ಈ ಸಂಧರ್ಭದಲ್ಲಿ ಪ್ರಕೃತಿಯ ಉಳಿವಿಗಾಗಿ ಶ್ರಮಿಸುತ್ತಿರುವ ಮತ್ತು ಸಾವಿರಕ್ಕೂ ಮಿಕ್ಕಿ ಗಿಡಮರಗಳನ್ನು ಆರೈಕೆ ಮಾಡುತ್ತಿರುವ ಪರಿಸರ ಪ್ರೇಮಿಗಳಾದ ಮಾಧವ ಉಳ್ಳಾಲ್ ಹಾಗೂ ದಿನೇಶ್ ಕೊಡಿಯಾಲ್ ಬೈಲ್ ಇವರನ್ನು ಸನ್ಮಾನಿಸಲಾಯಿತು. 

ಈ ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ  ಮೇಯರ್  ಪ್ರೇಮಾನಂದ ಶೆಟ್ಟಿ, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಸ್ತೂರಿ ಪಂಜ, ಜಿಲ್ಲಾ ಕಾರ್ಯದರ್ಶಿ ಹಾಗೂ ಜಿಲ್ಲಾ ಮಹಿಳಾ ಮೋರ್ಚಾ ಪ್ರಭಾರಿಗಳಾದ ಪೂಜಾ ಪೈ, ದಕ್ಷಿಣ ಮಂಡಲದ ಅಧ್ಯಕ್ಷರಾದ ವಿಜಯ ಕುಮಾರ್ ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸೇವಂತಿ ಶ್ರೀಯಾನ್, ಜಿಲ್ಲಾ ಮಹಿಳಾ ಮೋರ್ಚಾದ ಉಪಾಧ್ಯಕ್ಷರು ಮತ್ತು ಮನಪಾ ಸದಸ್ಯರಾದ ಪೂರ್ಣಿಮಾ, ಸ್ಥಳೀಯ ಮ ನ ಪಾ ಸದಸ್ಯೆ ಸಂಧ್ಯಾ ಆಚಾರ್,  ಉತ್ತರ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ರಮೇಶ್ ಹೆಗ್ಡೆ, ಮಣ್ಣಗುಡ್ಡೆ ವಾರ್ಡಿನ ಪ್ರಮುಖರಾದ ವಸಂತ್ ಶೇಟ್, ಸಂಜಯ್ ಪ್ರಭು, ಮೋಹನ್ ಆಚಾರ್,  ಮತ್ತು ಇನ್ನಿತರರು ಉಪಸ್ಥಿತರಿದ್ದರು.