ಮಂಗಳೂರು : ತುಳು ಭಾಷೆಯಲ್ಲಿ ನಿರ್ಮಾಣವಾಗಲಿರುವ " 21 ಗ್ರ್ಯಾಮ್ಸ್ "  ಹೆಸರಿನ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ ತುಳು ಭಾಷೆಯಿಂದ  ಆರು ಭಾಷೆಗೆ ಡಬ್ ಆಗಲಿದೆ.

ಇದೇ ಮೊದಲ ಬಾರಿಗೆ ತುಳು ಸಿನಿಮಾವೊಂದು ಏಕಕಾಲದಲ್ಲಿ ಆರು ಭಾಷೆಗೆ ಡಬ್ ಆಗಿ ಆಯಾ ರಾಜ್ಯಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ ಎಂದು ಸಿನಿಮಾ ನಿರ್ಮಾಣ ತಂಡ ತಿಳಿಸಿದೆ.  ಚಿತ್ರವು ತುಳು ಭಾಷೆಯಲ್ಲಿ ನಿರ್ಮಾಣಗೊಂಡು ಕನ್ನಡ, ಹಿಂದಿ , ತಮಿಳು, ತೆಲುಗು , ಮರಾಠಿ, ಇಂಗ್ಲಿಷ್ ಭಾಷೆಗೆ ಡಬ್ ಆಗಲಿದೆ.

ಸೋಚ್ ಸಿನಿಮಾ , ಎಲ್.ಎಸ್.ಮೀಡಿಯಾ, ಓಮ್ ಸ್ಟುಡಿಯೋ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ.

ಸಿನಿಮಾ ತಂಡದವರು ಅಬ್ಬಕ್ಕ ಕ್ವೀನ್ ಕ್ರೂಸ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಿನಿಮಾದ ಬಗ್ಗೆ ವಿವರ ನೀಡಿದರು.

ಸಿನಿಮಾದ ಹಿರೋ ಬಹುಭಾಷ ನಟ ಅಮಿತ್ ರಾವ್ ಅವರು ಮಾತನಾಡಿ ಪೂರ್ತಿ ಸಿನಿಮಾವು ಆರಂಭದಿಂದ ಕೊನೆ ತನಕ ಸಸ್ಪೆನ್ಸ್ ಆಗಿ ಇರಲಿದೆ‌ . ಹಿರೋ ಹಿರೋಹಿನ್ ಕೇಂದ್ರಿತ ಮನೋವೈಜ್ಞಾನಿಕ ಭೂಮಿಕೆಯೆ ಈ ಸಿನಿಮಾದ ವಿಶೇಷವಾಗಿದೆ ಎಂದು ತಿಳಿಸಿದರು.

ತಾನು ಈ ಸಿನಿಮಾಕ್ಕಾಗಿ ಹೇರ್ ಸ್ಟೈಲ್ ವಿಭಿನ್ನವಾಗಿ ಬದಲಾಯಿಸಿಕೊಳ್ಳಬೇಕಾಯಿತು  ಎಂದು ಅಮಿತ್ ರಾವ್ ತಿಳಿಸಿದರು.

ಸಿನಿಮಾದ ನಿರ್ದೇಶಕ ಸ್ಟೀಪನ್ ಅವರು ಮಾತನಾಡಿ, ಕಳೆದ ಹದಿನೈದು ವರ್ಷಗಳಿಂದ ಕನ್ನಡ ಚಿತ್ರ ರಂಗದಲ್ಲಿ ಸಹ ನಿರ್ದೇಶಕನಾಗಿ ದುಡಿದ ಅನುಭವದ ಹಿನ್ನೆಲೆ ತುಳು ಭಾಷೆಯಲ್ಲಿ ಸಿನಿಮಾ ಮಾಡಲು ಮುಂದಾಗಿದ್ದೇನೆ. ನಿರ್ಮಾಣ ತಂಡದ ಪ್ರೋತ್ಸಾಹದ ಕಾರಣದಿಂದಾಗಿ ತುಳುವಿನಿಂದ 6 ಭಾಷೆಗೆ ಡಬ್ ಮಾಡಿ ಸಿನಿಮಾ ಬಿಡುಗಡೆ ಮಾಡಲು ಸಿದ್ದತೆ ನಡೆಸಿದ್ದೇವೆ ಎಂದು ತಿಳಿಸಿದರು. "21 ಗ್ರ್ಯಾಮ್ಸ್ " ಸಿನಿಮಾ ಸೈಕಾಲಜಿಕಲ್ ಥ್ರಿಲ್ಲರ್ ಕಥಾ ಹಂದರ ವನ್ನು ಹೊಂದಿದೆ ಎಂದು ತಿಳಿಸಿದರು.

ಸಿನಿಮಾ ನಿರ್ಮಾಪಕರಾದ ಅವಿನಾಶ್ ಶೆಟ್ಟಿ ಅವರು ಮಾತನಾಡಿ ತುಳು ಸಿನಿಮಾ ರಂಗದ ಹೊಸ ಸಾಧನೆಗೆ ನಾವು ಸಿದ್ದರಾಗುತ್ತಿದ್ದೇವೆ ಎಂದು ತಿಳಿಸಿದರು.

ಇನ್ನೋರ್ವ ನಿರ್ಮಾಪಕ ಎಲ್.ಎಸ್.ಮೀಡಿಯಾ ಆಡಳಿತ  ನಿರ್ದೇಶಕ ಲಕ್ಷ್ಮಣ್ ಸುವರ್ಣ ಅವರು ಮಾತನಾಡಿ, ತುಳುವರು ಎಲ್ಲಾ ಭಾಷೆಯ ಸಿನಿಮಾಗಳನ್ನು ಮುಕ್ತವಾಗಿ ಸ್ವೀಕರಿಸುತ್ತಾರೆ , ಅದೇ ರೀತಿಯಾಗಿ ತುಳುವರ ನಿರ್ಮಾಣದ ಈ ಸಿನಿಮಾವನ್ನು ಎಲ್ಲಾ ಭಾಷಿಗರು  ಪ್ರೀತಿಯಿಂದ ಸ್ವೀಕರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಇನ್ನೋರ್ವ ನಿರ್ಮಾಪಕಿ ಹಾಗೂ ಬಹು ಭಾಷ  ನಟಿ ಸೋನಲ್ ಮೊಂತೆರೊ ಅವರು ಮಾತನಾಡಿ , ಈ ಚಿತ್ರದ ನಿರ್ದೇಶಕರು ಸಿನಿಮಾ ಕತೆಯನ್ನು ಹೇಳಿದ ಸಂದರ್ಭದಲ್ಲಿ ಕಥೆಯ ಬಗ್ಗೆ ಅಗಾಧವಾದ ಕುತೂಹಲ ಮೂಡಿದ ಹಿನ್ನೆಲೆಯಲ್ಲಿ ಈ ಸಿನಿಮಾ ನಿರ್ಮಾಣ ತಂಡದ ಪಾಲುದಾರಿಕೆ ಒಪ್ಪಿದೆ, ತುಳು ಸಿನಿಮಾವನ್ನು ಮತ್ತೊಂದು ಮಜಲಿಗೆ " 21 ಗ್ರ್ಯಾಮ್ಸ್ " ಚಿತ್ರ ಕೊಂಡೊಯ್ಯುತ್ತದೆ ಎಂಬ ನಿರೀಕ್ಷೆ ಇದೆ ಎಂದು ತಿಳಿಸಿದರು.

ಇನ್ನೋರ್ವ ನಿರ್ಮಾಪಕ ಚರಣ್ ಸುವರ್ಣ ಅವರು ಮಾತನಾಡಿ ತುಳು ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲನ್ನು ಈ ಸಿನಿಮಾ ಸ್ಥಾಪಿಸಲಿದೆ ಎಂದರು. ಸಿನಿಮಾದ ವಸ್ತ್ರ ವಿನ್ಯಾಸಕಿ ರಶ್ಮಿ ಅನೂಪ್ ರಾವ್ ಅವರು ಮಾತನಾಡಿ,  ವಿಭಿನ್ನ ಶೈಲಿಯ ನಿರೂಪಣೆಯ ಚಿತ್ರವಾಗಿರುವುದರಿಂದ ವಸ್ತ್ರ ವಿನ್ಯಾಸ ಕೂಡ   ಸವಾಲಿನದಾಗಿದ್ದು ಆಕರ್ಷಕವಾಗಿರಲಿದೆ ಎಂದು ತಿಳಿಸಿದರು. 

ಸಿನಿಮಾ ಚಿತ್ರೀಕರಣವು ಮಂಗಳೂರು, ಕುಂದಾಪುರ , ಬೆಂಗಳೂರು ಹಾಗೂ ಕರ್ನಾಟಕದ ಇತರ ಭಾಗಗಳಲ್ಲಿ ನಡೆಯಲಿದೆ , ಜೊತೆಗೆ ಉತ್ತರ ಪ್ರದೇಶ ಹಾಗೂ ಜಾರ್ಖಾಂಡ್ ನಲ್ಲಿ ಕೂಡ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಸ್ಟೀಪನ್ ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಾಯಕ ನಟ ಅಮಿತ್ ರಾವ್ , ನಿರ್ದೇಶಕ ಸ್ಟೀಪನ್ , ವಸ್ತ್ರ ವಿನ್ಯಾಸಕಿ ರಶ್ಮಿ ಅನೂಪ್ ರಾವ್ , ನಿರ್ಮಾಪಕರಾದ ಅವಿನಾಶ್ ಶೆಟ್ಟಿ , ಲಕ್ಷ್ಮಣ್ ಸುವರ್ಣ , ಸೋನಲ್ ಮೊಂತೆರೊ, ಅನುಪಮ ಸುವರ್ಣ ಉಪಸ್ಥಿತರಿದ್ದರು.